ಮಳೆಯಲ್ಲಿ ಕೊಚ್ಚಿಹೋಗಿದ್ದ ಬಾಲಕಿ ನಿಧಿ ಶವ ಪತ್ತೆ
ಉಡುಪಿ: ಮಂಗಳವಾರ ಸಂಜೆ ಮಹಾಮಳೆಯ ಹೊಡೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿಯ ಮೃತದೇಹ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.
ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. ತನ್ನ ಸಹೋದರಿ ನಿಷಾ ಜೊತೆ ಶಾಲೆಯಿಂದ ವಾಪಸ್ ಬರುವಾಗ ಈ ದುರ್ಘಟನೆ ನಡೆದಿತ್ತು.
ನಿಧಿ ಮತ್ತು ನಿಶಾ ಶಾಲೆಯಿಂದ ಬೈಸಿಕಲ್ ನಲ್ಲಿ ಮರಳುವಾಗ ಪಡು ಬಿದ್ರಿಯ ಸಣ್ಣ ಸೇತುವೆಮೇಲಿಂದ ಕೊಚ್ಚಿ ಹೋಗಿದ್ದರು, ಕೂಡಲೇ ಕಾರ್ಯಾಚರಣೆಗಿಳಿದ ಸ್ಥಳೀಯರು ನಿಶಾಳನ್ನು ರಕ್ಷಿಸಿದ್ದರು, ಆದರೆ ನಿಧಿ ನಾಪತ್ತೆಯಾಗಿದ್ದಳು.
ಕಳೆದ ರಾತ್ರಿ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ಬಾಲಕಿ ನಿಧಿ ಪತ್ತೆಯಾಗಿರಲಿಲ್ಲ.
ಇಂದು ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. 16 ಗಂಟೆಗಳ ನಂತರ ಶಲ ಪತ್ತೆಯಾಗಿದೆ. ಜೊತೆಗೆ ನಿಧಿಯ ಸ್ಕೂಲ್ ಬ್ಯಾಗ್ ಮತ್ತು ಜಾಕೆಟ್ ಕೂಡ ಸಿಕ್ಕಿದೆ.
ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ನಿಧಿ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ ನೀಡಿದ್ದಾರೆ. ನಿಧಿ ಗಣಪತಿ ಪ್ರಾಥಮಿಕ ಶಾಲೆಯ ನಾಲ್ಕೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.