ಮಸ್ಕತ್ ಕರ್ನಾಟಕ ಸಂಘದಿಂದ “ಗುರು ನಮನ”
ಮಸ್ಕತ್ : ಭಾರತೀಯ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಮಹತ್ವವಾದದ್ದು. ಗುರುವನ್ನು ಗೌರವಿಸಿ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಪರಂಪರೆ. ಇದೇ ಪರಂಪರೆಯನ್ನು ಮುಂದುವರಿಸುತ್ತಾ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಸ್ಕತ್ತಿನ ಕರ್ನಾಟಕ ಸಂಘವು ತಾನು ನಡೆಸುತ್ತಿರುವ ಕನ್ನಡ ತರಗತಿಯ ಮಕ್ಕಳಿಗಾಗಿ -ಗುರುಗಳಿಗೆ ವಂದಿಸಿ ಕೃತಜ್ಞತೆಯನ್ನು ಸಲ್ಲಿಸುವ ಕಾರ್ಯಕ್ರಮ ‘ಗುರುನಮನ’ ವನ್ನು ಇಲ್ಲಿನ ಐ ಎಸ್ ಸಿ ಸಭಾಂಗಣದಲ್ಲಿ ಆಯೋಜಿಸಿತ್ತು.
ಕರ್ನಾಟಕ ಸಂಘದ ಆಧ್ಯಕ್ಷರಾದ ಕರುಣಾಕರರಾವ್ ಅವರಿಂದ ಚಾಲನೆಗೊಂಡ ಕಾರ್ಯಕ್ರಮದಲ್ಲಿ ಇಲ್ಲಿನ ಕನ್ನಡ ತರಗತಿಯ ವಿದ್ಯಾರ್ಥಿಗಳು ಏಕಪಾತ್ರಾಭಿನಯ, ಭಾರತದ ಸಂಸ್ಕ್ರತಿಯ ಮಹಾನ್ ಸಾಧಕರ ಛದ್ಮವೇಶ, ಗುರುಗಳ ಮಹತ್ವವನ್ನು ಸಾರುವ ಗೀತೆಗಳು , ಶಿಕ್ಷಕರ ಕುರಿತು ಕನ್ನಡದಲ್ಲಿ ಭಾಷಣಗಳ ಮೂಲಕ ಪ್ರತಿಯೊಬ್ಬನ ಜೀವನದಲ್ಲಿ ಗುರುವಿಗಿರುವ ಮಹತ್ತರ ಸ್ಥಾನವನ್ನು ಮನಮುಟ್ಟುವಂತೆ ಚಿತ್ರಿಸಿದರು. ಈ ಕಾರ್ಯಕ್ರಮವನ್ನು ಅಚ್ಚ ಕನ್ನಡದಲ್ಲಿ ನಿರೂಪಿಸಿದ್ದೂ ಕೂಡಾ ಇಲ್ಲಿನ ಕನ್ನಡ ತರಗತಿಯ ವಿದ್ಯಾರ್ಥಿಗಳ ಒಂದು ಹೆಗ್ಗಳಿಕೆ !
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಮಸ್ಕತ್ತಿನ ಅಪ್ರವಾಸಿ ವಿಭಾಗದ ಮುಖ್ಯಸ್ಥ ಜಿ.ವಿ.ರಾಮಕೃಷ್ಣ ಹಾಗೂ ಶ್ರೀ.ಕೆ.ವಿ.ಬಿರಾದಾರ್ (ನಿವೃತ್ತ ಹಿಂದಿ ಪ್ರಾಧ್ಯಾಪಕ – ಬೀದರ್) ಇವರುಗಳು ಆಗಮಿಸಿದ್ದು , ಮಸ್ಕತ್ತಿನಲ್ಲಿದ್ದುಕೊಂಡು ಮಕ್ಕಳಿಗೆ ನಿಸ್ವಾರ್ಥವಾಗಿ ಕನ್ನಡ ಕಲಿಸುತ್ತಿರುವ ಎಲ್ಲಾ ಕನ್ನಡ ಶಿಕ್ಷಕರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಜಿ.ವಿ.ರಾಮಕೃಷ್ಣ ಅವರು ಮಾತನಾಡಿ ಹೊರದೇಶದಲ್ಲಿದ್ದುಕೊಂಡು , ಕನ್ನಡದಲ್ಲಿ ಇಷ್ಟು ಚೆನ್ನಾಗಿ ಕಾರ್ಯಕ್ರಮ ನಡೆಸಿಕೊಟ್ಟ ಮಕ್ಕಳ ಪ್ರತಿಭೆಯನ್ನು ಅತೀವ ಮೆಚ್ಚಿ ಶ್ಲಾಘಿಸಿದರು.
ಕಾರ್ಯಕ್ರಮವು ಕನ್ನಡ ಸಂಘದ ಉಪಾಧ್ಯಕ್ಷ ರಮೇಶ್ ಕುಮಾರ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯಗೊಂಡಿತು.
ಒಟ್ಟಿನಲ್ಲಿ ತಮ್ಮ ತಾಯ್ನಾಡಿನಿಂದ ದೂರವಿದ್ದರೂ ಕನ್ನಡಿಗರಾಗಿ ತಮ್ಮ ಮಕ್ಕಳನ್ನು ಬೆಳೆಸಲು ಮಸ್ಕತ್ ಕನ್ನಡ ಸಂಘವು ಕನ್ನಡ ತರಗತಿಗಳ ಮೂಲಕ ಮಾಡುತ್ತಿರುವ ಉತ್ತಮ ಕೆಲಸವನ್ನು ಈ ಕಾರ್ಯಕ್ರಮ ಬೆಳಕಿಗೆ ತಂದಿತು.
Nice to see Muscat , Oman , ISC Karnataka News in http://www.mangalorean.com.
ಗುರುನಮನ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿಬಂತು. ಗುರುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಗೌರವಾದರವನ್ನು ವಿದ್ಯಾರ್ಥಿಗಳು ಸುಲಲಿತವಾಗಿ ಕನ್ನಡದಲ್ಲಿ ಪ್ರಸ್ತುತಪಡಿಸಿದ್ದಾರೆ. ಕನ್ನಡ ಸಂಘದ ಅಡಿಯಲ್ಲಿ ನಡೆಯುತ್ತಿರುವ ಈ ಕನ್ನಡ ಶಾಲೆ , ಮಸ್ಕತ್ ನಲ್ಲಿ ನೆಲೆಸಿರುವ ಕನ್ನಡಿಗರಿಗೊಂದು ವರದಾನವಾಗಿ ಪರಿಣಮಿಸಿದೆ.