ಮಹಾರಾಷ್ಟ್ರದಲ್ಲಿ ಮಲ್ಪೆ ಏಳು ಮೀನುಗಾರರ ಬಂಧನ
ಉಡುಪಿ: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟನ್ನು ಮಹಾರಾಷ್ಟ್ರ ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿದ್ದ ಏಳು ಮಂದಿ ಮೀನುಗಾರರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರದ ವ್ಯಕ್ತಿಗೆ ಸೇರಿದ ಶ್ರೀಲಕ್ಷ್ಮೀ ಹೆಸರಿನ ಆಳ ಸಮುದ್ರ ಮೀನುಗಾರಿಕಾ ಬೋಟಿನಲ್ಲಿ ಕ್ಯಾಪ್ಟನ್ ರಾಮ ಭಟ್ಕಳ ಸೇರಿ ಏಳು ಮಂದಿ ಮೀನು ಗಾರರು ಮಲ್ಪೆ ಬಂದರಿನಿಂದ ಎರಡು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದರು. ಫೆ.11ರಂದು ಮಧ್ಯರಾತ್ರಿ ವೇಳೆ ಗೋವಾ ರಾಜ್ಯ ದಾಟಿ ಮಹಾ ರಾಷ್ಟ್ರ ತಲುಪಿದ್ದ ಬೋಟ್, ದೇವಗಡ ಸಮುದ್ರ ತಲುಪುತ್ತಿದ್ದಂತೆ ಅಲ್ಲಿನ ಕೋಸ್ಟ್ ಗಾರ್ಡ್ ಪೊಲೀಸರು ವಶಕ್ಕೆ ಪಡೆದರೆನ್ನಲಾಗಿದೆ. ಬೋಟಲ್ಲಿದ್ದ ಏಳು ಮಂದಿ ಮೀನುಗಾರರು ಉತ್ತರ ಕನ್ನಡ ಜಿಲ್ಲೆಯವರು ಎಂಬ ಮಾಹಿತಿ ತಿಳಿದುಬಂದಿದೆ.
‘ಮಹಾರಾಷ್ಟ್ರದ ಸಮುದ್ರ ತೀರದಿಂದ ಬೋಟ್ 12 ನಾಟೇಕಲ್ ದೂರದಲ್ಲಿದ್ದರೂ ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ಪೊಲೀಸರು, ಸ್ಥಳೀಯ ಮೀನುಗಾರr ದೂರಿನ ಹಿನ್ನೆಲೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಲ್ಪೆಯ ಮೀನುಗಾರರು ದೂರಿದ್ದಾರೆ.
ನಿಯಮದಂತೆ ಮೀನುಗಾರಿಕೆ ಮಾಡುತ್ತಿದ್ದ ನಮ್ಮವರನ್ನು ಅಕ್ರಮವಾಗಿ ಬಂಧಿಸಿದ ಮಹಾರಾಷ್ಟ್ರ ಪೊಲೀಸರ ಕ್ರಮ ಖಂಡನೀಯ ಎಂದು ಉಡುಪಿ ಟ್ರಾಲ್ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ತಿಳಿಸಿದ್ದಾರೆ. ಕೂಡಲೇ ಮೀನು ಗಾರರನ್ನು ಬಿಡುಗಡೆ ಮಾಡಬೇಕೆಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.