ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನಿಂದ ನಡೆದ ವಂಚನೆ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿ – ರಮೇಶ್ ಕಾಂಚನ್
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರದ ಆರೋಪದ ಕುರಿತು ‘ಕಲಂ 64’ರ ಅಡಿಯಲ್ಲಿ ವಿಚಾರಣೆಗೆ ಕರ್ನಾಟಕ ರಾಜ್ಯ ಸಹಕಾರಿ ಸಂಘಗಳ ನಿಬಂಧಕರು ಆದೇಶ ನೀಡಿರು ವುದು ಸ್ವಾಗತಾರ್ಹ ಸಂಗತಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಹೇಳಿದ್ದಾರೆ.
ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ‘ಕಲಂ 64’ರಡಿಯಲ್ಲಿ ವಿಚಾರಣೆ ನಡೆಸುವಂತೆ ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ಹೋರಾಟ ಸಮಿತಿಯವರು ಬೆಂಗಳೂರಿನಲ್ಲಿ ಸಹಕಾರಿ ಸಚಿವರನ್ನು ಹಾಗೂ ಸಹಕಾರಿ ಸಂಘಗಳ ನಿಬಂಧಕರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಗ್ರ ತನಿಖೆಗೆ ಒತ್ತಾಯಿಸಿದ ನಿಟ್ಟಿನಲ್ಲಿ ಇದೀಗ ಸರಕಾರ, ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ರ ಪ್ರಕಾರ ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕರನ್ನು ವಿಚಾರಣೆಗಾಗಿ ನೇಮಿಸಿ ಆದೇಶ ಹೊರಡಿಸಲಾಗಿದ್ದು ನಿಷ್ಪಕ್ಷಪಾತವಾದ ತನಿಖೆ ನಡೆದು ಈ ಮೂಲಕ ಸತ್ಯ ಹೊರಬರಬೇಕಾಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ನೀಡಿರುವ ಸಾಲವನ್ನು ಸ್ವಂತಕ್ಕೆ ಬಳಸಲಾಗಿದೆ ಎನ್ನುವ ಆರೋಪಕ್ಕೆ ಬ್ಯಾಂಕಿನ ಆಡಳಿತ ಮಂಡಳಿ ಯಾವುದೇ ರೀತಿಯ ಸ್ಪಷ್ಟ ಉತ್ತರ ನೀಡದೆ ಕೇವಲ ಹಾರಿಕೆ ಉತ್ತರ ನೀಡಿಕೊಂಡು ಬಂದಿದ್ದು ಇದೀಗ ‘ಕಲಂ 64’ರ ಅಡಿಯಲ್ಲಿ ವಿಚಾರಣೆಗೆ ಅವಕಾಶ ನೀಡಿದ್ದು ಗ್ರಾಹಕರು ಮತ್ತು ಸಂತ್ರಸ್ತರು ನೀಡಿರುವ ದೂರಿನ ಮೇಲೆ ವಿವರವಾದ ತನಿಖೆ ನಡೆಯಬೇಕಾಗಿದೆ. ಗ್ರಾಹಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ವಿಧಿ ವಿಜ್ಞಾನ ತಂಡದಿಂದ ತನಿಖೆ ನಡೆಸಬೇಕು ಇಲ್ಲವಾದರೆ ಇದಕ್ಕೆ ಸೂಕ್ತ ನ್ಯಾಯ ಸಿಗಲು ಸಾಧ್ಯವಿಲ್ಲ.
ಉಡುಪಿ ಜಿಲ್ಲೆಯ ಸಹಕಾರಿ ಸಂಘಗಳ ಉಪನಿಬಂಧಕರು ವಿಚಾರಣೆ ನಡೆಸುವಾಗ ಬ್ಯಾಂಕಿನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿತ ಸಿಬ್ಬಂದಿಗಳನ್ನು ಸಹ ವಿಚಾರಣೆಗೊಳಪಡಿಸಬೇಕು. ವಿಚಾರಣೆಯ ಸಂದರ್ಭದಲ್ಲಿ ಬ್ಯಾಂಕಿನಿಂದ ಆಗಿರುವ ಬೇರೆ ಬೇರೆ ರೀತಿಯ ಲೋಪದೋಷಗಳ ಕುರಿತು ಕೂಲಂಕುಷವಾದ ತನಿಖೆ ನಡೆಸಬೇಕು. ವಿಚಾರಣೆಯ ವರದಿಯನ್ನು ನಿಗದಿತ ಅವಧಿಯ ಒಳಗಾಗಿ ಸಮಾಜದ ಮುಂದೆ ಬಹಿರಂಗಪಡಿಸಬೇಕು. ಹೀಗಾಗಿ ಈ ತನಿಖೆಯ ವಿಚಾರಣಾಧಿ ಕಾರಿಯವರು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತೊಂದರೆಗೊಳಗಾದ ನೂರಾರು ಸಂತ್ರಸ್ತರ ಸಮಸ್ಯೆಗೆ ಪರಿಹಾರ ಒದಗಿಸಬೇಕು.ಹಾಗೆಯೇ ರಾಜ್ಯ ಸರ್ಕಾರ ಎಸ್ಐಟಿ ರಚಿಸಿ ಸಮಗ್ರ ತನಿಖೆಗೆ ಮುಂದಾಗಬೇಕೆಂದು ಸಂತ್ರಸ್ತರ, ಬ್ಯಾಂಕಿನ ಗ್ರಾಹಕರ ಪರವಾಗಿ ಅಗ್ರಹಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.