ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ : ಜಾನೆಟ್ ಬಾರ್ಬೋಜಾ

Spread the love

ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ : ಜಾನೆಟ್ ಬಾರ್ಬೋಜಾ

ಬ್ರಹ್ಮಾವರ: ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ವರ್ಷಪೂರ್ತಿ ಮಹಿಳಾ ದಿನಾಚರಣೆಯೇ ಆಗಿದೆ. ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ ಗಂಡು ಮಕ್ಕಳಿಗೂ ಸಭ್ಯತೆಯ ಪಾಠ ಕಲಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕಥೊಲಿಕ್ ಸ್ತ್ರೀ ಸಂಘಟನೆ ಉಡುಪಿ ಧರ್ಮಪ್ರಾಂತ್ಯದ ಮಾಜಿ ಅಧ್ಯಕ್ಷೆ, ಸಾಮಾಜಿಕ ಕಾರ್ಯಕರ್ತೆ ಜಾನೆಟ್ ಬಾರ್ಬೋಜಾ ಹೇಳಿದರು.

ಅವರು ಭಾನುವಾರ ಪ್ರಗತಿ ಮಹಿಳಾ ಮಹಾ ಸಂಘ, ಸ್ತ್ರೀ ಸಂಘಟನೆ ಸಂತ ಅಂತೋನಿ ಚರ್ಚ್ ಘಟಕ ಇದರ ಆಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆಯು ಸಂಸಾರದ ಜವಾಬ್ದಾರಿ ನೋಡಿಕೊಳ್ಳುವುದರ ಜೊತೆಗೆ ಸಾಧನೆ ಮಾಡಬೇಕೆಂದರೆ ಮನೆಯಿಂದ ಹೊರಬಂದು ಸಂಘಟಿತರಾಗಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯರಿಗೆ ಬೆಂಬಲ ನೀಡಬೇಕು. ಕುಟುಂಬದಲ್ಲಿ ಹೆಣ್ಣು ಗಂಡೆಂದು ತಾರತಮ್ಯ ಮಾಡದೇ ಸರಿಸಮಾನವಾಗಿ ನೋಡಬೇಕು. ಮಹಿಳೆಯರು ನೆಪ ಮಾತ್ರಕ್ಕೆ ಸಂಘಟನೆಯಲ್ಲಿರದೆ ತಾವಾಗಿಯೇ ಮುಂದೆ ಬಂದು ಸಮಾಜ ಗುರುತಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವೆಯಲ್ಲಿ ಸಾಧನೆ ತೋರಿದ ಮೇಬಲ್ ಸಲ್ಡಾನಾ (ಕೃಷಿ), ಲಿಲ್ಲಿ ರೊಡ್ರಿಗಸ್ (ಬಾಣಂತಿಯ ಆರೈಕೆ), ತೆರೆಸಾ ಡಾಯಸ್ (ಕೃಷಿ), ಸುಜಾತಾ ಅಂದ್ರಾದೆ (ನಟನೆ) ಸಾಧಕರನ್ನು ಗೌರವಿಸಲಾಯಿತು.

ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಹಾಲಿಗೆ ಜೇನು ಬೆರೆಸುವ ಮೂಲಕ ಮಹಿಳೆ ಸಮಾಜದಲ್ಲಿ ಎಲ್ಲಾ ರಂಗದಲ್ಲಿ ಯಾವ ರೀತಿ ಬೆರೆತು ಬಾಳುತ್ತಾಳೆ ಎನ್ನುವ ಸಂದೇಶವನ್ನು ನೀಡುವುದರ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ|ಸುನೀಲ್ ಡಿಸಿಲ್ವಾ, ಸಂಪದ ಸಚೇತಕಿ ಜುಡಿತ್ ಡಿಸೋಜಾ, ಕೇಂದ್ರಿಯ ಸಮಿತಿ ಉಪಾಧ್ಯಕ್ಷೆ ಅನ್ಸಿಲ್ಲಾ ಲೂವಿಸ್, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಐವನ್ ಡಿ ಆಲ್ಮೇಡಾ, ಮಿಶನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಕಾನ್ವೆಂಟ್ ಇದರ ಮುಖ್ಯಸ್ಥೆ ಸಿಸ್ಟರ್ ವೆರೋನಿಕಾ, ಜೀಸಸ್ ಮೇರಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಗೊರೆಟ್ಟಿ, ಘಟಕದ ಕಾರ್ಯದರ್ಶಿ ಜೋಸ್ಲಿನ್ ಪಿಂಟೊ ಉಪಸ್ಥಿತರಿದ್ದರು.

ಪ್ರಗತಿ ಮಹಿಳಾ ಮಹಾ ಸಂಘ, ಸ್ತ್ರೀ ಸಂಘಟನೆ ಸಂತ ಅಂತೋನಿ ಚರ್ಚ್ ಘಟಕದ ಅಧ್ಯಕ್ಷರಾದ ಸಿಂತಿಯಾ ಡಿಸೋಜಾ ಸ್ವಾಗತಿಸಿ ಪ್ರೀತಿ ಲೂವಿಸ್ ವಂದಿಸಿದರು. ವೀರಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.


Spread the love