Home Mangalorean News Kannada News ಮಹಿಳೆಯರಿಗೆ ಬಂತು ಬಹುಮಹಡಿ ಆಶ್ರಯ ಮನೆ : ಇದು ಶಾಸಕ ಜೆ.ಆರ್.ಲೋಬೊ ಕನಸು

ಮಹಿಳೆಯರಿಗೆ ಬಂತು ಬಹುಮಹಡಿ ಆಶ್ರಯ ಮನೆ : ಇದು ಶಾಸಕ ಜೆ.ಆರ್.ಲೋಬೊ ಕನಸು

Spread the love

ಮಹಿಳೆಯರಿಗೆ ಬಂತು ಬಹುಮಹಡಿ ಆಶ್ರಯ ಮನೆ : ಇದು ಶಾಸಕ ಜೆ.ಆರ್.ಲೋಬೊ ಕನಸು

ಸ್ವಂತ ಮನೆಯಿದ್ದರೆ ಹೇಗಿರುತ್ತೆ ಅಲ್ಲವೇ?. ಅದರಲ್ಲೂ ಚಿಕ್ಕದಾದ, ಚೊಕ್ಕದಾದ ನಮ್ಮದೇ ಮನೆಯಿರಬೇಕು. ಹೀಗೆಂದು ಪ್ರತಿಯೊಬ್ಬರ ಕನಸೂ ಆಗಿರುತ್ತೆ.  ಇಂಥ ಕನಸು ನನಸಾಗಲು ಹೇಗೆ ಸಾಧ್ಯ?.

ಹೌದು, ಮಂಗಳೂರಲ್ಲಿ ಕಡುಬಡವರು ಕೂಡಾ ಸ್ವಂತ ಮನೆಹೊಂದುತ್ತಾರೆ. ಅದು ಕೂಡಾ ಬಹಮಹಡಿ ಕಟ್ಟಡ. ಕೇವಲ  5 ಲಕ್ಷ ರೂಪಾಯಿಗೆ. ಇಂತಹ ಕನಸನ್ನು ನನಸು ಮಾಡುತ್ತಿದ್ದಾರೆ ಮಂಗಳೂರಿನ ಶಾಸಕ ಜೆ.ಆರ್.ಲೋಬೊ.

house-build-jr-lobo

ಲೋಬೊ ಹೇಳಿ ಕೇಳಿ ರಾಜಕಾರಣಿ ಅಲ್ಲ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದರು. ವೃತ್ತಿಯಿಂದ ನಿವೃತ್ತಿಹೊಂದಿದ ಮೇಲೆ ಕಾಂಗ್ರೆಸ್ ಶಾಸಕರಾದರು. ಈಗಲೂ ಅವರು ರಾಜಕಾರಣಿಯಂತೆ ತೋರಿಸುವುದಿಲ್ಲ, ರಾಜಕಾರಣಿ ಎನಿಸಿಕೊಳ್ಳುವ ಕನಸೂ ಅವರದಲ್ಲ. ಜನರಿಗೆ ಕೆಲಸ ಮಾಡಬೇಕು ಎನ್ನುವ ಕನಸಿದೆ. ಆ ಕನಸು ಕಾಣುತ್ತಲೇ ಅವರು ಶಾಸಕರಾದರು. ಈಗ ಜನಪ್ರಿಯರು.

ಮಂಗಳೂರಲ್ಲಿ ಈಗ ಸ್ವಂತ ಮನೆಹೊಂದುವುದು ಕನಸೇ ಸರಿ. ಹೀಗೆ ಕನಸು ಕಟ್ಟಿಕೊಂಡ ಲಕ್ಷಾಂತರ ಮಂದಿ ಇದ್ದಾರೆ. ಅವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಹಗಲು ದುಡಿಮೆ, ರಾತ್ರಿ ನಿದ್ದೆ. ಇಂಥ ಕನಸುಗಾರರು ಸ್ವಂತ ಮನೆಹೊಂದುವುದನ್ನು ಊಹಿಸಿಕೊಳ್ಳುವುದೂ ಕಷ್ಟವೇ ಸರಿ. ಆದರೆ ಜೆ.ಆರ್.ಲೋಬೊ ಅವರು ಅವರಿಗಾಗಿಯೇ ಯೋಜನೆ ತಂದಿದ್ದಾರೆ.

ಯಾರು ಬಡವರು, ಕೂಲಿಕಾರ್ಮಿಕರು, ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ ಅವರನ್ನು ಹುಡುಕಿದ್ದಾರೆ ಆಶ್ರಯ ಯೋಜನೆಯಿದೆ. ಆದರೆ ದುಬಾರಿ ಹಣ, ಭೂಮಿ ಕೂಡಾ ಮಾರುಕಟ್ಟೆಗೆ ಎಟಕುವುದಿಲ್ಲ. ಎಟಕಿದರೂ ಅದನ್ನು ಹಣಕೊಟ್ಟು ಖರೀದಿ ಮಾಡುವ ದೈರ್ಯವಿಲ್ಲ. ಇಂಥವರು ಮನೆಗಾಗಿ ಅರ್ಜಿ ಹಾಕಿ ಹಾಕಿ ಕಚೇರಿಗೆ ಅಲೆದು ಅಲೆದೂ ಸುಸ್ತಾದರು. ಹಾಗೆ ಸುಸ್ತಾದವರು 3000 ಮಂದಿಗೂ ಅಧಿಕ.

ಆಶ್ರಯ ಯೋಜನೆಯನ್ನೇ ಸರಳೀಕರಿಸಿದರು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಮಹಾನಗರಪಾಲಿಕೆಯನ್ನು ಒಂದುಗೂಡಿಸಿದರು. ಈ ಮೂರೂ ಮಂದಿ ತಮ್ಮ ಪಾಲಿನ ಹಣ ಪಾವತಿಸುವುದಕ್ಕೆ ಸಮ್ಮತಿಸಿದರು.

5 ಲಕ್ಷ ರೂಪಾಯಿ ಬೆಲೆಯ ಮನೆಗಳನ್ನು ಫಲಾನುಭವಿಗಳು ಪಡೆಯಲಿದ್ದು ಪರಿಶಿಷ್ಟರಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿಯನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ನೀಡಿದರೆ ರಾಜ್ಯ ಸರ್ಕಾರ 1.80 ಲಕ್ಷ ರೂಪಾಯಿಯನ್ನು, ಮಹಾನಗರ ಪಾಲಿಕೆ ಪರಿಶಿಷ್ಟರಿಗೆ  1 ಲಕ್ಷ ರೂಪಾಯಿ ನೀಡಲಿದೆ. ಇತರ ಜಾತಿಯವರಿಗೆ ನಗರ ಪಾಲಿಕೆ 70  ಸಾವಿರ, ರಾಜ್ಯ ಸರ್ಕಾರ  1.2 ಲಕ್ಷ ರೂಪಾಯಿ ಹಾಗೂ ಕೇಂದ್ರ ಸರ್ಕಾರ  1.5 ಲಕ್ಷ ರೂಪಾಯಿ ನೀಡಲಿದೆ.

 ಪರಿಶಿಷ್ಟ ಜಾತಿಯವರು 3.70  ಲಕ್ಷ ರೂಪಾಯಿ ಅನುದಾನ ಮತ್ತು ಇತರ ಜಾತಿಯವರು 3.40 ಲಕ್ಷ ರೂಪಾಯಿ ಅನುದಾನವನ್ನು ಪಡೆಯಲಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್ ಗಳು ಪರಿಶಿಷ್ಠರಿಗೆ 1.5 ಲಕ್ಷ ರೂಪಾಯಿ, ಇತರ ಜಾತಿಯವರಿಗೆ 1.3 ಲಕ್ಷ ರೂಪಾಯಿ ಸಾಲ ನೀಡಲಿವೆ. ಈ ಹಣವನ್ನು ಪಿಗ್ಮಿ ಆಧಾರದಲ್ಲಿ ಪಾವತಿಸಬಹುದು. ಅಂತೂ ಪರಿಷ್ಟರು ತಮ್ಮ ವೈಯಕ್ತಿಕ ಹಣವಾಗಿ ಕೇವಲ 20  ಸಾವಿರ ರೂಪಾಯಿಯನ್ನು, ಇತರ ಜಾತಿಯವರು 30 ಸಾವಿರ ರೂಪಾಯಿಯನ್ನು ಪಾವತಿಸಿ ಈ ವಸತಿ ನಿಲಯ ಪಡೆಯಬಹುದು.

ಈ ಲೆಕ್ಕಾಚಾರ ಹಾಕಿದ ಮೇಲೆ ಭೂಮಿಯ ಹುಡುಕಾಟ. ಮಂಗಳೂರಿಗೆ ಒಳಪಟ್ಟ ಶಕ್ತಿನಗರದಲ್ಲಿ 10 ಎಕ್ರೆ ಭೂಮಿಯನ್ನು ಪತ್ತೆಹಚ್ಚಿದರು.  ಇದು ಸಂಪೂರ್ಣ ಅರಣ್ಯಭೂಮಿ. ಇದಕ್ಕೆ ಬೆಂಗಾವಲಾಗಿ ನಿಂತವರು ಸಾಮಾಜಿಕ ಕಾರ್ಯಕರ್ತ ಬ್ಯಾಪ್ಟಿಸ್ಟ್ . ಇವರಿಗೆ ಅಗತ್ಯ ಭೂಮಿ ಹುಡುಕುವುದೇ ಕೆಲಸವಾಯಿತು. ಇಲ್ಲಿ ಬಹುಮಹಡಿ ನಿರ್ಮಿಸುವುದು. ಅರ್ಥಾತ್ ಮೂರು ಮಾಳಿಗೆ ಕಟ್ಟಡ. ಇದರಲ್ಲಿ ಒಂದು ಬೆಡ್ ರೂಮು, ಹಾಲ್, ಕಿಚನ್ ಹಾಗೂ ಬಾತ್ ರೂಮು.

ಹೇಗಿದೆ ಮನೆಯ ಸೌಂದರ್ಯ. ಇಲ್ಲಿ ಕುಡಿಯುವ ನೀರು, ಒಳಚರಂಡಿ, ದಾರಿದೀಪ, ಮಕ್ಕಳಿಗೆ ಆಟದ ಮೈದಾನ, ಮೂರು ಹೊತ್ತೂ ವಿದ್ಯುತ್ ಸೌಕರ್ಯ. ಮೂಲಭೂತ ಸೌಕರ್ಯಗಳನ್ನು ಕೂಡಾ ಮಾಡಿಕೊಡುವ ಇಂಗಿತ. ಹಾಗೆ ನೋಡಿದರೆ ಸುಸಜ್ಜಿತವಾದ ಬಸ್ ಸೌಲಭ್ಯ ಕೂಡಾ ಬರಲಿದೆ ಇಲ್ಲಿಗೆ.

ಇಲ್ಲಿ 1100 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುತ್ತಾರೆ. ಈ ಆಯ್ಕೆಯನ್ನು ಶಾಸಕ ಜೆ.ಆರ್.ಲೋಬೊ ಅವರು ಮಾಡಿದ ವಿಧಾನ ಕೂಡಾ ಮೆಚ್ಚುವಂಥದ್ದು. ತಮ್ಮ ವಿಧಾನ ಸಭಾ ವ್ಯಾಪ್ತಿಯ ಎಲ್ಲಾ ನಗರ ಪಾಲಿಕೆ ಸದಸ್ಯರನ್ನು ಕರೆದು ಅವರೇ ಖುದ್ದು ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಎಲ್ಲಾ ಪಕ್ಷದವರು ಇದ್ದಾರೆ.

ಈ ಮನೆಯ ಹಕ್ಕು ಮಹಿಳೆಗೆ. ಮಹಿಳೆಯರ ಹೆಸರಿಗೆ ಹಕ್ಕುಪತ್ರ ಕೊಡುತ್ತಾರೆ. ತಮ್ಮ ಗಂಡ, ಮಕ್ಕಳ ಜೊತೆ ವಾಸಿಸಬಹುದು, ಇದು ಕೂಡಾ ವಿಶೇಷ. ಪುರುಷರಿಗಿಂತ ಮಹಿಳೆಯರಿಗೆ ಹಕ್ಕು ಮತ್ತು ಜವಾಬ್ದಾರಿ.

ಇದು ಪ್ರಾಯೋಗಿಕ. ಇದು ಯಶಸ್ವಿಯಾದರೆ ಮುಂದೆ ಕೂಡಾ ಯೋಜನೆ ಹಾಗು ಸೂರು ಇಲ್ಲದಿದ್ದ ಎಲ್ಲಾರಿಗೂ ಮನೆ ಎನ್ನುತ್ತಾರೆ ಜೆ.ಆರ್.ಲೋಬೊ.

ಇದು ಪೂರ್ಣಗೊಳ್ಳಲು 18 ತಿಂಗಳ ಕಾಲಾವಕಾಶ. ಮುಗಿದ ಕೂಡಲೇ ಹಕ್ಕುಪತ್ರ ವಿತರಣೆ. ವೈಯಕ್ತಿಕವಾಗಿ 20 ಸಾವಿರ ಮತ್ತು 30 ಸಾವಿರ ಹಣವನ್ನು ಪಾವತಿಸಬೇಕು. ಬ್ಯಾಂಕ್ ಸಾಲ ಬೇಕಾದವರಿಗೆ ಸಾಲ ತೆಗೆಸಿಕೊಡುತ್ತಾರೆ. ಅದನ್ನು ಪಿಗ್ಮಿಯ ರೂಪದಲ್ಲಿ ಪಾವತಿಸಬಹುದು. ಸಾಲ ಬೇಡವಾಗಿದ್ದರೆ ತಾವೇ ಪರಿಶಿಷ್ಟರು 1.5 ಲಕ್ಷ ಮತ್ತು ಇತರ ಜಾತಿಯವರು 1.3 ಲಕ್ಷ ರೂಪಾಯಿ ಹಣಪಾವತಿಸಬೇಕು.

ಇದು ಶಾಸಕ ಜೆ.ಆರ್.ಲೋಬೊ ಅವರ ಕಲ್ಪನೆಯ ಯೋಜನೆ. ಕಾಕತಾಳಿಯ ಎನ್ನುವಂತೆ ಇಂದಿರಾ ಗಾಂಧಿ ಅವರ ಜನ್ಮಶತಮಾನೋತ್ಸವ ವರ್ಷ. ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷದ ಮಹಿಳೆ, ಆದರೆ ಪ್ರಧಾನಿಯಾಗಿ ಆಕೆ ಮಾಡಿದ ಕಾರ್ಯಕ್ರಮವನ್ನು ನೆನಪಿಸಿಕೊಳ್ಳುವ ಪ್ರಯೋಗ.

ಹೀಗೂ ಮಾಡಲು ಸಾಧ್ಯ ಎನ್ನುವುದನ್ನು ಶಾಸಕ ಲೋಬೊ ತೋರಿಸಿಕೊಟ್ಟಿದ್ದಾರೆ. ಅವರ ಕನಸಿನ ಯೋಜನೆಗೆ ಎಲ್ಲಾ ಪಕ್ಷಗಳೂ ಕೈಜೋಡಿಸಿವೆ. ಬಡವರು ಎಲ್ಲಾ ಪಕ್ಷದವರು ಆಗಿರುತ್ತಾರೆ. ಅವರಿಗೆ ತಮ್ಮ ಜೀವಿತ ಕಾಲದಲ್ಲಿ ಸ್ವಂತ ಮನೆಯನ್ನು ಹೊಂದಿದ್ದರೆ ಅದೇ ದೊಡ್ಡ ಭಾಗ್ಯ. ಅದು ಕೈಗೂಡುವ ಕಾಲ ಇಲ್ಲಿದೆ.


Spread the love

Exit mobile version