Home Mangalorean News Kannada News ಮಹಿಳೆಯರು ಬೆಳಗ್ಗಿನ  ವಾಕಿಂಗ್ ವೇಳೆ ಸರಗಳ್ಳರ ಬಗ್ಗೆ ಎಚ್ಚರಿಕೆ ವಹಿಸಿ; ಎಸ್ಪಿ ಸಂಜೀವ್ ಎಮ್ ಪಾಟೀಲ್

ಮಹಿಳೆಯರು ಬೆಳಗ್ಗಿನ  ವಾಕಿಂಗ್ ವೇಳೆ ಸರಗಳ್ಳರ ಬಗ್ಗೆ ಎಚ್ಚರಿಕೆ ವಹಿಸಿ; ಎಸ್ಪಿ ಸಂಜೀವ್ ಎಮ್ ಪಾಟೀಲ್

Spread the love

 ಮಹಿಳೆಯರು ಬೆಳಗ್ಗಿನ  ವಾಕಿಂಗ್ ವೇಳೆ ಸರಗಳ್ಳರ ಬಗ್ಗೆ ಎಚ್ಚರಿಕೆ ವಹಿಸಿ; ಎಸ್ಪಿ ಸಂಜೀವ್ ಎಮ್ ಪಾಟೀಲ್

ಉಡುಪಿ: ಬೆಳಗಿನ ಹೊತ್ತು ವಾಕಿಂಗ್ ತೆರಳುವ ಮಹಿಳೆಯರು ತಮ್ಮ ಚಿನ್ನದ ಸರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಸರಗಳ್ಳರು ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ ಮಾಡುವ ಸಾಧ್ಯತೆಗಳಿವೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಮ್ ಪಾಟೀಲ್ ಎಚ್ಚರಿಸಿದ್ದಾರೆ.

ಅವರು ಗುರುವಾರ ವಾರದ ಫೋನ್ ಇನ್ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಬೆಳಗಿನ ಜಾವ ಹಲವಾರು ಮಹಿಳೆಯರು ಮತ್ತು ಹಿರಿಯ ನಾಗರಿಕರು ವಾಕಿಂಗ್ ಮಾಡಲು ತೆರಳುತ್ತಿದ್ದು ಈ ವೇಳೆಯ ಲಾಭ ಪಡೆಯುವ ಸಲುವಾಗಿ ಸರಗಳ್ಳರು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನವನ್ನು ಕದಿಯುವ ಸಾಧ್ಯತೆಗಳು ಹೆಚ್ಚಿವೆ. ಇಂದು ಬೆಳಿಗ್ಗೆ ಕೂಡ ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಕೂಡ ಇಂತಹ ಒಂದು ಘಟನೆ ನಡೆದಿದ್ದು ಮಹಿಳೆಯರು ಎಚ್ಚರಿಕೆ ವಹಿಸಬೇಕು. ವಾಕಿಂಗ್ ತೆರಳುವಾಗ ಕತ್ತು ಮುಚ್ಚುವಂತೆ ಬಟ್ಟೆ ಧರಿಸುವುದು ಉತ್ತಮ ಇಲ್ಲವಾದಲ್ಲಿ ವಾಕಿಂಗ್ ವೇಳೆಯಲ್ಲಿ ಚಿನ್ನವನ್ನು ಧರಿಸದೆ ಬಂದರೆ ಇನ್ನೂ ಉತ್ತಮವಾಗುತ್ತದೆ. ವಾಕಿಂಗ್ ಸಮಯದಲ್ಲಿ ಒಬ್ಬರೆ ಬರುವುದಕ್ಕಿಂತ ಇಬ್ಬರು ಮೂವರು ಜೊತೆಯಾಗಿ ಬರುವುದರಿಂದ ಇಂತಹ ಸರಗಳ್ಳತನ ನಡೆಯದಂತೆ ಎಚ್ಚರಿಕೆ ವಹಿಸಿದಂತಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಡಿಸೆಂಬರ್ 1-17 ರ ತನಕ ವಿವಿಧ ಭಾಗದಲ್ಲಿ ಈದ್ ಮಿಲಾದ್ ಆಚರಣೆ ನಡೆಯಲಿದ್ದು, 124 ಕಡೆಗಳಲ್ಲಿ ಪ್ರಾರ್ಥನಾ ಸಭೆ ಹಾಗೂ 64 ಕಡೆಗಳಲ್ಲಿ ಮೆರವಣಿಗೆಗಳು ನಡೆಯುಲಿದ್ದು ಹಬ್ಬವನ್ನು ಸಂತೋಷದಿಂದ ಅಚರಿಸುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ಸೂಕ್ತ ಬಂದೋಬಸ್ತು ವ್ಯವಸ್ಥೆಯನ್ನು ಮಾಡಿದೆ ಅಲ್ಲದೆ ವಿವಿಧ ಕಡೆಗಳಲ್ಲಿ ಶಾಂತಿ ಸಭೆಗಳನ್ನು ಕೂಡ ಆಯೋಜಿಸಲಾಗಿದೆ ಎಂದರು.

ಸಂಘಟನೆಗಳು ಮತ್ತು ಪಕ್ಷದವರು ತಮ್ಮ ವಾಹನಗಳಿಗೆ ಹಾಕುವ ನೇಮ್ ಬೋರ್ಡ್ ಗಳ ಕುರಿತು ಪೋಲಿಸರು ಹಾಗೂ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು. ಪರವಾನಿಗೆ ಇಲ್ಲದ ಅಂತಹ ಬೋರ್ಡ್ ಗಳನ್ನು ತೆಗೆಯಲಾಗುವುದು ಮತ್ತು ಮಾಧ್ಯಮದವರಿಗೆ ಪೋಲಿಸ್ ಇಲಾಖೆಯಿಂದ ಮಾಧ್ಯಮ ಸ್ಟಿಕ್ಕರ್ ಡಿಸೆಂಬರ್ 2 ನೇ ವಾರದಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗುರುವಾರದ ಫೋನ್ ಇನ್ ಕಾರ್ಯಕ್ರದಲ್ಲಿ ಒಟ್ಟು 25 ಕರೆಗಳು ಸ್ವೀಕೃತಗೊಂಡಿದ್ದು ವಿವಿಧ ವಿಚಾರಗಳಿಗೆ ಸಂಭಂದಪಟ್ಟ ಕರೆಗಳು ಇದ್ದವು.

ಇಂದ್ರಾಳಿ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಹಂಪ್ ಅಳವಡಿಸಿದ್ದು ಇದರಿಂದ ಹಲವಾರ ಬೈಕ್ ಸವಾರರು ಅಫಘಾಕ್ಕೀಡಾಗಿದ್ದಾರೆ ಎಂದು ನಾಗರಿಕರೋರ್ವರು ದೂರಿದರು ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಯವರು ಸೋಮವಾರದ ಒಳಗೆ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ಮಣಿಪಾಲದ ಪೋಲಿಸ್ ಕ್ವಾಟ್ರ್ ಸ್ ಬಳಿ ಡ್ರೈನೇಜ್ ಕೆಟ್ಟುಹೋಗಿ ವಾಸನೆ ಬರುತ್ತಿದ್ದ ಸರಿಪಡಿಸುವಂತೆ ಸ್ಥಳೀಯ ಮಹಿಳೆಯೋರ್ವರು ದೂರಿದರು ಇದಕ್ಕೆ ಉತ್ತರಿಸಿದ ಎಸ್ಪಿಯವರು ಈ ಬಗ್ಗೆ ನಾನು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದೇನೆ ನಗರಸಭೇಯವರು ಒಂದು ದಿನದ ಒಳಗೆ ಸಕ್ಕಿಂಗ್ ಯಂತ್ರದ ಮೂಲಕ ಸರಿಪಡಿಸಲಿದ್ದಾರೆ ಎಂದರು.

ಕಿನ್ನಿಮುಲ್ಕಿ ಫೈಯರ್ ಸ್ಟೇಶನ್ ಬಳಿ ಎಕ್ಸ್ ಪ್ರೆಸ್ ಬಸ್ಸುಗಳು ನಿಗದಿತ ಮಾರ್ಗದಲ್ಲಿ ಚಲಿಸಿದೆ ಜನರು ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಬಂದ ಕರೆಗೆ ಉತ್ತರಿಸಿ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಅಲ್ಲದೆ ತಾನೇ ಸ್ವತಃ ಆ ಜಾಗಕ್ಕೆ ಭೇಟಿ ನೀಡುವುದಾಗಿ ಹೇಳಿದರು.

ಇತ್ತೀಚೆಗೆ ನಡೆದ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಹೆಲ್ಮೇಟ್ ಧರಿಸದೆ ಬೈಕ್ ಜಾಥಾ ನಡೆಸಿದ್ದು ಪೋಲಿಸರು ಯಾವುದೇ ಕ್ರಮ ಕೈಗೊಳ್ಳದ ಕುರಿತು ಕೇಳಿದ  ಪ್ರಶ್ನೆಗೆ ಉತ್ತರಿಸಿದ ಎಸ್ಪಿ ನಾವು ಜಾಥಾಗೆ ಪರವಾನಿಗೆ ನೀಡುವಾಗಲೇ ಈ ಬಗ್ಗೆ ಸೂಚನೆ ನೀಡಿರುತ್ತೇವೆ. ಜಾಥಾ ನಡೆಯುವ ಸಂದರ್ಭ ನಾವು ಹೆಲ್ಮೆಟ್ ವಿಚಾರದಲ್ಲಿ ಹೋದರೆ ಭದ್ರತಾ ಜವಾಬ್ದಾರಿ ನಿರ್ವಹಿಸಲು ಕಷ್ಟವಾಗುತ್ತದೆ ಆದ್ದರಿಂದ ಮುಂದಿನ ದಿನಗಳಲ್ಲಿ ವೀಡಿಯೋ ಚಿತ್ರೀಕರಣ ಮಾಡಿ ಹೆಲ್ಮೆಟ್ ಹಾಕದವರಿಗೆ ನೋಟಿಸ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ನಗರದ ಕೆಲವು ಭಾಗಗಳಲ್ಲಿ ಇರುವ ಸಿಸಿ ಟಿವಿ ಕ್ಯಾಮಾರಾಗಳು ಚಾಲನೆಯಲ್ಲಿ ಇದೆಯೋ ಎನ್ನುವ ನಾಗರಿಕರಿಗರ ಪ್ರಶ್ನೆಗೆ ಉತ್ತರಿಸಿದ ಪಾಟೀಲ್ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಅಲ್ಲದೆ ಜಿಲ್ಲಾ ಪಂಚಾಯತ್ ವತಿಯಿಂದ 294 ಸ್ಥಳಗಳಲ್ಲಿ 667 ಸಿಸಿ ಟಿವಿ ಕ್ಯಾಮಾರಾಗಳನ್ನು ಅಳವಡಿಸಿಲು ಪೋಲಿಸ್ ಇಲಾಖೆಯಿಂದ ಪ್ರಸ್ತಾವನೆ ಪಡೆಯಲಾಗಿದೆ ಎಂದರು.

ಕಾರ್ಕಳದಲ್ಲಿ ಕಲ್ಲುಕೋರೆ ಮಾಡಿದ ಪ್ರದೇಶದಲ್ಲಿ ಹೊಂಡವಾಗಿದ್ದು ಅದರಲ್ಲಿ ಮಳೆ ನೀರು ತುಂಬಿದೆ ಅದರಲ್ಲಿ ಮೀನು ಸಾಕಣೆ ಮಾಡುತ್ತಿದ್ದು ಮೀನುಗಳಿಗೆ ಕೋಳಿ ತ್ಯಾಜ್ಯ ಹಾಗೂ ತರಕಾರಿಗಳನ್ನು ಹಾಕಿದ್ದರಿಂದ ನೀರು ಬಣ್ಣ ಕಳೆದುಕೊಂಡು ವಾಸನೆ ಬರುತ್ತಿದ್ದು, ರೋಗ ಭೀತಿ ಎದುರಾಗಿದೆ ಎಂಬ ಸಾರ್ವಜನಿಕರ ಕರೆಗೆ ಕೂಡಲೇ ಸ್ಥಳೀಯ ಪಂಚಾಯತ್ ಹಾಗೂ ಪೋಲಿಸರ ನೆರವಿನೊಂದಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿವಿಧ ಭಾಗಗಳಲ್ಲಿ ಮಟ್ಕಾ ಚೀಟಿ ಬರೆಯುವುದು, ಗಾಂಜಾ ಮಾರಾಟ, ಕರ್ಕಶ ಹಾರ್ನ್, ಅಕ್ರಮ ಮರಳುಗಾರಿಕೆ, ಟೋಲ್ ದರವ್ಯತ್ಯಾಸಕ್ಕೆ ಸಂಬಂಧಿಸಿದ ದೂರುಗಳು ಕೂಡ ಬಂದಿದ್ದು ಸೂಕ್ತ ಕ್ರಮದ ಭರವಸೆಯನ್ನು ಎಸ್ಪಿಯವರು ನೀಡಿದರು.

 


Spread the love

Exit mobile version