ಮಹಿಳೆಯರ ದೌರ್ಜನ್ಯ ನಿಯಂತ್ರಿಸುವಲ್ಲಿ ಕೇಂದ್ರ ವಿಫಲ: ಸಿಪಿಐ ಖಂಡನೆ
ಮಂಗಳೂರು: ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಇವುಗಳನ್ನು ಕಡಿವಾಣ ಹಾಕುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಸಿಪಿಐ ಖಂಡಿಸಿದೆ.
ನಗರದಲ್ಲಿ ಶುಕ್ರವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಮಂಗಳೂರು ತಾಲೂಕು ಸಮಿತಿ ಸಭೆಯು ಎಚ್.ವಿ. ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದರು. ಸಭೆಯಲ್ಲಿ ಚರ್ಚೆ ನಡೆದು ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದ ದುಷ್ಕರ್ಮಿಗಳನ್ನು ಹತೋಟಿಯಲ್ಲಿಡುವಲ್ಲಿ ಸರಕಾರಗಳು ವಿಫಲವಾಗುತ್ತಿವೆ. ಉತ್ತರ ಪ್ರದೇಶದ ಉನಾವೊದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಮಹಿಳೆಯನ್ನು ಅದೇ ಆರೋಪಿಗಳು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಹೈದರಾಬಾದ್ನಲ್ಲಿ ಯುವತಿಯ ಅತ್ಯಾಚಾರ ನಡೆದಿತ್ತು. ಇಂತಹ ಅವಘಡಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರಕಾರಗಳು ದುಷ್ಕರ್ಮಿಗಳನ್ನು ನಿಯಂತ್ರಿಸಲು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿಪಿಐ ಒತ್ತಾಯಿಸಿದೆ.
ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವಿಶ್ವವಿದ್ಯಾನಿಲಯ. ಇಲ್ಲಿ ಕಲಿತ ಸಾವಿರಾರು ಬಡ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಇಲ್ಲಿನ ಶುಲ್ಕಗಳನ್ನು ಒಹುಪಟ್ಟು ಏರಿಸಲು ಸರಕಾರ ಮುಂದಾಗಿರುವುದು ದುರದೃಷ್ಟಕರ. ಅದೇ ರೀತಿ ಕೇಂದ್ರೀಯ ವಿದ್ಯಾಲಯಗಳಲ್ಲಿಯೂ ಶುಲ್ಕಗಳನ್ನು ಬಹುಪಟ್ಟು ಏರಿಸಲಾಗಿದೆ. ಖರ್ಚು ಸರಿದೂಗಿಸಲು ಶುಲ್ಕ ಏರಿಸಬೇಕಾಗಿದೆ ಎನ್ನುವ ನಿರ್ಮಲಾ ಸೀತಾರಾಮನ್ರ ಹೇಳಿಕೆ ನಿಜಕ್ಕೂ ಖಂಡನೀಯ. ಸರಕಾರದ ನಿಲುವನ್ನು ಪಕ್ಷ ಖಂಡಿಸುವುದಲ್ಲೆ, ಅದರ ವಿರುದ್ಧ ಹೋರಾಟಗಳನ್ನು ನಡೆಸಲಿದೆ ಎಂದೂ ತಿಳಿಸಿದೆ.
ಸಭೆಯಲ್ಲಿ ಪಕ್ಷದ ತಾಲೂಕು ಕಾರ್ಯದರ್ಶಿ ವಿ.ಸೀತಾರಾಮ ಬೇರಿಂಜೆ ಸ್ವಾಗತಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು.