ಮಾಜಿ ಶಾಸಕ ಮೊಯ್ದೀನ್ ಬಾವಾ ಸೋದರ ಮಮ್ತಾಜ್ ಅಲಿ ನಾಪತ್ತೆ!; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ
ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಅ.6ರ ರವಿವಾರ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.
ರವಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಅಗ್ನಿಶಾಮಕ ಹಾಗೂ ಈಜು ತಜ್ಞರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಚುರುಕಿನ ತನಿಖೆ ಕೈಗೊಂಡಿದ್ದಾರೆ.
ಮಮ್ತಾಜ್ ಅಲಿ ಅವರು ತನ್ನ ಮಗಳಿಗೆ ವಾಟ್ಸಪ್ ಮೂಲಕ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂಬ ಸಂದೇಶ ಕೂಡ ರವಾನಿಸಿದ್ದಾರೆ ಎನ್ನಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಇವರು ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಯ ಚೇರ್ಮನ್ ಆಗಿದ್ದು, ಸ್ಥಳೀಯ ಜಮಾತ್ ನ ಪ್ರಮುಖರಾಗಿದ್ದಾರೆ. ಮಾಜಿ ಶಾಸಕ ಮೊಯಿದೀನ್ ಬಾವಾ ಹಾಗೂ ಕುಟುಂಬಸ್ಥರು ಸ್ಥಳದಲ್ಲಿದ್ದಾರೆ.
ಅವರ ಕಾರು ಉಡುಪಿ – ಮಂಗಳೂರಿನ ಕೂಳೂರು ಸೇತುವೆಯ ಮೇಲೆ ಪತ್ತೆಯಾಗಿದೆ. ಅಲ್ಲದೆ, ಕಾರಿನ ಮುಂಭಾಗದ ಬಲಬದಿ ಅಪಘಾತ ನಡೆದಿರುವ ಕುರುಹುಗಳು ಪತ್ತೆಯಾಗಿದೆ. ಸದ್ಯ ಎನ್ ಡಿ ಆರ್ ಎಫ್, ಎಸ್ಡಿ ಆರ್ ಎಫ್ ತಂಡಗಳು ಕೂಳೂರು ನದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ “ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ ಉದ್ಯಮಿ ಮಮ್ತಾಝ್ ಅಲಿ ಅವರ ಕಾರು ಕೂಳೂರು ಸೇತುವೆ ಮೇಲೆ ಪತ್ತೆಯಾಗಿದೆ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದು ಬೆಳಗ್ಗೆ ನಮಗೆ ಸಂದೇಶ ಬಂದಿದೆ. ತಕ್ಷಣವೇ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮಾಡುತ್ತಿದ್ದೇವೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಅವರು ಮಧ್ಯರಾತ್ರಿ 3 ಗಂಟೆಗೆ ಕೆಲವು ಕಾರಣಗಳಿಂದ ಮನೆಯಿಂದ ತಮ್ಮ ಬಿಎಂಡಬ್ಲ್ಯೂ ಕಾರಿನಿಂದ ಹೊರಟು ಬಂದಿದ್ದಾರೆ. ನಗರದ ಹಲವೆಡೆ ಸುತ್ತಿದ್ದಾರೆ. ನಂತರ ಕೂಳೂರು ಸೇತುವೆ ಬಳಿ ಕಾರಿಗೆ ಆಕ್ಸಿಡೆಂಟ್ ಮಾಡಿಕೊಂಡು ಮಾಡಿ ಆಮೇಲೆ ಅಲ್ಲಿಂದ ಕಾಣೆಯಾಗಿದ್ದಾರೆ. ನಂತರ ಮಗಳಿಗೆ ಇದರ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ನಾವು ಸೇತುವೆ ಮತ್ತು ನದಿಯಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಅವರು ಸೇತುವೆಯಿಂದ ಹಾರಿರುವ ಶಂಕೆಯಿದೆ. ಆದ್ದರಿಂದ ನಾವು ಈಗ ಎನ್ ಡಿ ಆರ್ ಎಫ್, ಎಸ್ಡಿ ಆರ್ ಎಫ್ ಹಾಗೂ ಕೋಸ್ಟ್ ಗಾರ್ಡ್ ತಂಡದ ಸಹಾಯದಿಂದ ಶೋಧಕಾರ್ಯ ನಡೆಸುತ್ತಿದ್ದೇವೆ. ಎಫ್ಎಸ್ಎಲ್ ತಂಡ ಕಾರು ಮತ್ತು ಘಟನೆಯ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನಾವು ತನಿಖೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.