ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ
ಬೆಂಗಳೂರು: ಆ್ಯಂಬಿಡೆಂಟ್ ಚಿಟ್ಫಂಡ್ ಜತೆ ಡೀಲ್ ಪ್ರಕರಣದಡಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿಯೆಲ್ಲ ಜನಾರ್ದನ ರೆಡ್ಡಿ, ಆ್ಯಂಬಿಡೆಂಟ್ ಮಾಲೀಕ ಫರೀದ್ನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಫರೀದ್ ಕೂಡ ಜನಾರ್ದನ ರೆಡ್ಡಿ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು.
ಭಾನುವಾರ ಬೆಳಗ್ಗೆಯೂ ವಿಚಾರಣೆ ಮುಂದುವರಿದಿತ್ತು. ಫರೀಧ್, ಅಲಿಖಾನ್, ಜನಾರ್ದನ ರೆಡ್ಡಿ, ಜಯರಾಮ್, ಫೈಸಲ್ ಸೇರಿ ಎಲ್ಲ ಆರೋಪಿಗಳನ್ನೂ ಮುಖಾಮುಖಿ ಕೂರಿಸಿ ಡಿಸಿಪಿ ಗಿರೀಶ್, ಎಸಿಪಿ ವೆಂಕಟೇಶ್ ವಿಚಾರಣೆ ನಡೆಸಿದ್ದರು.
ಜನಾರ್ದನ ರೆಡ್ಡಿಯನ್ನು ಬಂಧಿಸಿರುವ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದಾರೆ. ಇಂದು ಕೋರ್ಟ್ ರಜೆ ಇರುವ ಕಾರಣ ಜನಾರ್ದನ್ ರೆಡ್ಡಿಯನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅಲೋಕ್ ಕುಮಾರ್ ಅವರು, ನಾವು ಕಾನೂನು ಪ್ರಕಾರ ಮುಂದುವರಿಯುತ್ತೇವೆ. ಹಣವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಆದರೆ ಮತ್ತೆ ಕಸ್ಟಡಿಗೆ ಪಡೆಯುತ್ತೀರಾ ಎಂಬ ಪ್ರಶ್ನೆಗೆ ಏನೂ ಉತ್ತರಿಸದೆ, ಅದೆಲ್ಲ ನಂತರದ ವಿಚಾರ ಎಂದು ತಿಳಿಸಿದರು.