ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ, 1.25 ಕೋಟಿ ರೂ. ಮೌಲ್ಯದ ವಸ್ತು ವಶ
ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧನಕ್ಕೊಳಪಡಿಸಿದ್ದು, ರೂ.1.25 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಬುಧವಾರ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ನಾವು ಕಾರ್ಯಾಚರಣೆ ಆರಂಭಿಸಿದ್ದೇವೆ. ಕೇವಲ ಬೆಂಗಳೂರಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿ ಈ ಮಾಫಿಯಾ ಸಂಪೂರ್ಣವಾಗಿ ನಿರ್ಣಾಮವಾಗಬೇಕು. ಡ್ರಗ್ ಮಾಫಿಯಾದಲ್ಲಿ ಹಲವು ಜನರು ಭಾಗಿಯಾಗಿದ್ದಾರೆ. ಇಂತಹವರು ಇತರ ರಾಜ್ಯಗಳ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಳ್ಳುತ್ತಿದ್ದಾರೆ. ಹಣವನ್ನು ಹೆಚ್ಚಾಗಿ ಖರ್ಚು ಮಾಡುವ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಇವರಿಗೆ ಬಲಿಯಾಗುತ್ತಿದ್ದಾರೆಂದು ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳ ಮೂಲದ ಶಹದ್ ಮುಹಮ್ಮದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್ , ನಿತಿನ್ ಮೋಹನ್ ಎಂದು ಗುರ್ತಿಸಲಾಗಿದ್ದು, ನಾಲ್ವರೂ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಗಳಾಗಿದ್ದಾರೆಂದು ತಿಳಿದುಬಂದಿದೆ.
ಬಂಧಿತರಿಂದ 2000 ಎಲ್ ಎಸ್ ಡಿ ಸ್ಟಿಪ್ಸ್, 110 ಗ್ರಾಂ ತೂಕದ ಎಂ ಡಿ ಎಂ ಎ ಕ್ರಿಸ್ಟಲ್, 10 ಎಕ್ಸ್ಟೇಸಿ ಮಾತ್ರೆಗಳು, 5 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 5 ಮೊಬೈಲ್ ಫೋನ್ ಸೇರಿ ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ ಗಳ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ನಗರದ ಸೋಲದೇವನಹಳ್ಳಿ ಪೊಲೀಸ್ ವ್ಯಾಪ್ತಿಯ ಚಿಕ್ಕಬಾಣಾವರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಸದ್ಯ ಕಿಂಗ್ ಪಿನ್ ಧೀರಜ್ ಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಧೀರಜ್ ಈತ ನೆದರ್ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಡ್ರಗ್ಸ್ ತರಿಸಿಕೊಂಡು ನಂತರ ತನ್ನ ಹುಡುಗರ ಮೂಲಕ ಡ್ರಗ್ಸ್ ಪಡೆದು ಇಂಥವರಿಗೆ ಮಾರಾಟ ಮಾಡಬೇಕು ಎಂದು ಮೆಸೇಜ್ ರವಾನಿಸುತ್ತಿದ್ದನು.
ಕಾಲು ಇಂಚು ಇರುವ ಪೇಪರ್ ಬೆಲೆ ಕಡಿಮೆ ಅಂದರೆ ಐದು ಸಾವಿರಕ್ಕೆ ಮಾರಾಟ ಹಾಗೂ ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಆರೋಪಿಗಳು ಡಿಜೆ ಗಳಲ್ಲಿ ಹೆಚ್ಚಾಗಿ ಎಲ್ ಎಸ್ ಡಿ ಮಾರಾಟ ಮಾಡುತ್ತಿದ್ದರು. ಬೆಂಗಳೂರು, ಗೋವಾ, ಮುಂಬೈ ಸೇರಿ ದೇಶದ ಪ್ರಮುಖ ನಗರಗಳಲ್ಲಿನ ವಿದ್ಯಾರ್ಥಿ ಹಾಗೂ ಪಬ್ ಗಳನ್ನು ಕೇಂದ್ರಿಕರಿಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಬಿ ಅಧಿಕಾರಿಗಳ ಕಾರ್ಯಚರಣೆ ಪ್ರಶಂಸಿಸಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಹುಮಾನ ಘೋಷಿಸಿದ್ದಾರೆ.
ಮಾದಕ ವಸ್ತು ಮಾರಾಟ; 799 ಆರೋಪಿಗಳ ಬಂಧನ
ಮಾದಕ ವಸ್ತು ಸಮಾಜಕ್ಕೆ ಮಾರಕವಾಗಿದ್ದರಿಂದ ರಾಜ್ಯದಲ್ಲಿ ಮಾದಕ ವಸ್ತು ಜಾಲಕ್ಕೆ ಕಡಿವಾಣ ಹಾಕಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಿಸಿಬಿ ಘಟಕದಲ್ಲಿ ಸ್ವಾಧೀನಪಡಿಸಿಕೊಂಡಿರುವ ವಸ್ತುಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾದಕ ವಸ್ತುಗಳ ಮಾರಾಟ ನಿಷೇಧಿಸಲು ಈಗಾಗಲೇ ರಾಜ್ಯದ ಪ್ರಮುಖ ನಗರಗಳಲ್ಲಿ ಕಣ್ಗಾವಲು ಇಡಲಾಗಿದೆ ಎಂದರು.
ಪ್ರಸ್ತುತ ಜೂನ್ ತಿಂಗಳ ಅಂತ್ಯಕ್ಕೆ 533 ದೂರು ದಾಖಲಾಗಿದ್ದು, 14 ವಿದೇಶಿಯರು ಸೇರಿ 799 ಆರೋಪಿಗಳನ್ನು ಬಂಧಿಸಲಾಗಿದೆ. 2019 ನೇ ಸಾಲಿನಲ್ಲಿ 768 ಪ್ರಕರಣಗಳನ್ನು ದಾಖಲಿಸಿ 1260 ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ನಗರದಲ್ಲಿ 1.25 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಕಿಂಗ್ ಪಿನ್ ಧೀರಜ್ ಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.