ಮಾದಕ ವ್ಯಸನದ ವಿರುದ್ದ ಜಾಗೃತಿಯೊಂದಿಗೆ ಬಡವರ ಸಹಾಯಕ್ಕಾಗಿ ‘ಡ್ರಗ್ಸ್ ಕಾರ್ಕೋಟಕ’ ವೇಷ ಹಾಕ್ತಾರೆ ರಾಮಾಂಜಿ
ಉಡುಪಿ: ಉಡುಪಿಯಲ್ಲಿ ಕೃಷ್ಠಾಷ್ಟಮಿ ಅಂದರೆ ಹುಲಿವೇಷ ಹಾಗೂ ಇತರ ವೇಷಗಳಿಗೆ ಏನೂ ಕಡಿಮೆ ಇಲ್ಲ. ಹಾಕುವ ವೇಷಗಳು ಒಂದೇ ಹಣ ಮಾಡಲು ಇಲ್ಲವೆ ಜನರನ್ನು ಕೇವಲ ರಂಜಿಸಲು ಹೆಚ್ಚಿನವರು ವೇಷ ಹಾಕಿದರೆ ಇದಕ್ಕೆಲ್ಲವೂ ಅಪವಾದ ಎಂಬಂತೆ ಇಲ್ಲೊಬ್ಬ ಯುವಕ ಸಾಮಾಜಿಕ ಜಾಗೃತಿ ಮೂಡಿಸುವುದರೊಂದಿಗೆ ಬಡವರ ಕಷ್ಟಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ವೇಷ ಹಾಕಲು ಹೊರಟಿದ್ದಾರೆ.
ಹಾಗೆ ವೇಷ ಹಾಕುವ ವೇಷಧಾರಿ ಬೇರಾರು ಅಲ್ಲ ಬದಲಾಗಿ ನಮ್ಮ ಭೂಮಿ ಸಂಸ್ಥೆಯೊಂದಿಗೆ ಒಡನಾಟವಿಟ್ಟುಕೊಂಡು ಕಳೆದ 6 ವರ್ಷಗಳಿಂದ ವಿಭಿನ್ನ ವೇಷಗಳನ್ನು ಹಾಕಿಕೊಂಡು ಅದರಿಂದ ಜಮೆಯಾದ ಹಣವನ್ನು ಬಡ ಮಕ್ಕಳ ಆರೋಗ್ಯ ಚಿಕಿತ್ಸೆಗೆ ಹಾಗೂ ಇತರ ಕೆಲಸಗಳಿಗೆ ನೀಡುತ್ತಾರ ಬಂದವರು ರಾಮಾಂಜಿ. ಈ ಬಾರಿಯ ಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿಯ ಎರಡು ದಿನಗಳ ಕಾಲ ವೇಷಕ್ಕೆ ಅವರು ಆಯ್ದುಕೊಂಡ ಪಾತ್ರ ಡ್ರಗ್ಸ್ ಕಾರ್ಕೋಟಕ.
ರಾಮಾಂಜಿ ಡ್ರಗ್ಸ್ ಕಾರ್ಕೋಟಕ ಎನ್ನುವ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಲು ಕೂಡ ಕಾರಣವಿದೆ. ಉಡುಪಿ ಜಿಲ್ಲೆಯಲ್ಲಿ ಅಗಸ್ಟ್ ಮತ್ತು ಸಪ್ಟೆಂಬರ್ ತಿಂಗಳನ್ನು ಉಡುಪಿ ಜಿಲ್ಲಾ ಪೋಲಿಸ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಜಂಟಿಯಾಗಿ ಮಾದಕ ವ್ಯಸನ ವಿರೋಧಿ ಮಾಸಾಚಾರಣೆಯಾಗಿ ಆಚರಿಸುತ್ತಿದ್ದು ಅಷ್ಟಮಿ ವೇಳೆ ಉಡುಪಿಗೆ ಬರುವ ಯಾತ್ರಿಕರಿಗೆ ಮಾದಕ ವ್ಯಸನ ಸೇವನೆಯ ದುರಂತದ ಕುರಿತು ಜಾಗೃತಿ ಮೂಡಿಸುವುದು ರಾಮಾಂಜಿ ಉದ್ದೇಶವಾಗಿದೆ.
ತನ್ನ ವೇಷದ ಕುರಿತು ಉಡುಪಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ರಾಮಾಂಜಿ ಅವರು ಇಂದು ಯುವ ಜನತೆ ಅರಿತೋ – ಅರಿಯದೆಯೋ ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ಹೆತ್ತವರ ಅರಿವಿಗೂ ಬಾರದೆ ಆಗುತ್ತಿರುವ ಈ ದಾಸ್ಯಕ್ಕೆ ಅಂಟಿಕೊಂಡರೆ ಅದರಿಂದ ಮುಕ್ತರಾಗುವುದು ಕಷ್ಟ ಸಾಧ್ಯ. ಇದಕ್ಕಿರುವ ಏಕೈಕ ಪರಿಹಾರ ಅರಿವು, ಪೋಲಿಸರ ಕಟ್ಟುನಿಟ್ಟಿನ ಕಣ್ಗಾವಲು. ಮನೆಯವರ, ಹಿರಿಯರ ಎಚ್ಚರದ ನಡೆ ಇವುಗಳು ಒಂದಾಗಬೇಕು. ಇದರೊಂದಿಗೆ ಸಾರ್ವಜನಿಕರ ಹೊಣೆಗಾರಿಕೆಯನ್ನು ಅಲ್ಲಗಳೆಯುವಂತಿಲ್ಲ.
ಈ ಹಿನ್ನಲೆಯಲ್ಲಿ ಸಾಮಾಜಿಕ ಬದ್ದತೆಯನ್ನು ತೋರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಕೃಷ್ಣಾಷ್ಟಮಿ ಹಾಗೂ ವಿಟ್ಲಪಿಂಡಿಯ ಎರಡು ದಿನಗಳ ಕಾಲ ಉಡುಪಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರುವ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಡ್ರಗ್ಸ್ ಕಾರ್ಕೋಟಕ ಎಂಬ ವಿನ್ಯಾಸದ ವೇಷಧಾರಣೆ ಮಾಡಲು ನಿರ್ಧರಿಸಿದ್ದು, ವೇಷದ ಪರಿಕಲ್ಪನೆ ಹಾಗೂ ವಿನ್ಯಾಸ ಪ್ರಶಾಂತ್ ಉದ್ಯಾವರ ಮಾಡಿರುತ್ತಾರೆ. ಈ ವಿಶಿಷ್ಟ ಕಲ್ಪನೆಯ ವೇಷವು ಯುವಜನತೆಯನ್ನು ಆಕರ್ಷಿಸಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ವೇಷವನ್ನು ಜಾಗೃತಿ ಮೂಡಿಸುವ ಸಲುವಾಗಿ ಹಾಕುವುದರೊಂದಿಗೆ ಇದರಿಂದ ಬಂದ ಹಣವನ್ನು ನನ್ನ ಸ್ವಾರ್ಥಕ್ಕಾಗಿ ಬಳಸದೆ ತಾನು ಒದಿದ ಶಿರ್ವದ ವಿದ್ಯಾವರ್ಧಕ ಸಂಘದ ಕನ್ನಡ ಮಾಧ್ಯಮ ಶಾಲೇಯಲ್ಲಿ ಇಂದು ಸರಕಾರದ ಅನುದಾನದ ಒಬ್ಬ ಕೂಡ ಶಿಕ್ಷಕರಿಲ್ಲ. ಇರುವವರೆಲ್ಲರೂ ಗೌರವ ಶಿಕ್ಷಕರಾಗಿದ್ದು ಅವರಿಗೆ ನೀಡುವ ಗೌರವ ಧನದ ಒಂದು ಭಾಗವನ್ನು ಇವರಿಗಾಗಿ ನೀಡುವುದು ಜತೆಯಲ್ಲಿ ಉಡುಪಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8 ನೇ ತರಗತಿಯ ಕಳತ್ತೂರಿನ ವಿಶೇಷ ಸಾಮರ್ಥ್ಯದ ಪ್ರತಿಭಾವಂತ ವಿದ್ಯಾರ್ಥಿನಿ ಸೌಂದರ್ಯ ಎಂಬವಳ ಚಿಕಿತ್ಸಾ ವೆಚ್ಚದ ಒಂದು ಭಾಗವನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಈ ಮೊದಲು ಕೂಡ ವಿವಿಧ ವೇಷಗಳನ್ನು ಧರಿಸಿ ಬಡಮಕ್ಕಳ ಆರೋಗ್ಯ, ವಿದ್ಯಾಭ್ಯಾಸಕ್ಕೆ ನೀಡಿದ ತೃಪ್ತಿ ತನಗಿದ್ದು, ಈ ಬಾರಿ ಪೋಲಿಸರು ಮತ್ತು ಪತ್ರಕರ್ತರು ಆಯೋಜಿಸಿರುವ ಮಾದಕ ವ್ಯಸನ ವಿರೋಧಿ ಅಭಿಯಾನದಲ್ಲಿ ತಾನೂ ಕೂಡ ಕೈಜೋಡಿಸುವುದರೊಂದಿಗೆ ನೋವಿನಲ್ಲಿರುವವರಿಗೆ ಕಿಂಚಿತ್ ಸಹಾಯ ಮಾಡುವ ಉದ್ದೇಶ ಹೊಂದಿದ್ದೇನೆ. ವೇಷವು ಸ್ಪಲ್ಪ ಅಬ್ಬರ ಮತ್ತು ಆಕರ್ಷಕವಾಗಿರುವುರುದರಿಂದ ಎಲ್ಲರನ್ನೂ ವೈಯುಕ್ತಿಕವಾಗಿ ಸಂಪರ್ಕಿಸಲು ಭೇಟಿಯಾಗಲು ಅಸಾಧ್ಯವಾಗುತ್ತದೆ. ಆದ್ದರಿಂದ ಸಹೃದಯಿ ದಾನಿಗಳು ಒಂದು ಒಳ್ಳೆಯ ಉದ್ದೇಶಕ್ಕಾಗಿ ಆರ್ಥಿಕ ನೆರವನ್ನು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು ಇಲ್ಲವೇ ತೇಝ್ ಪೇಟಿಯಂ ಆ್ಯಪ್ ಮೂಲಕ ಕೂಡ ಧನಸಹಾಯ ಮಾಡಬಹುದು . ಜಮೆಯಾದ ಹಣವದ ಕುರಿತು ಸಂಪೂರ್ಣ ಮಾಹಿತಿಯನ್ನು ಹಸ್ತಾಂತರ ನಡೆಯುವ ಕಾರ್ಯಕ್ರಮದಲ್ಲಿ ನೀಡಲಾಗುವುದು ಎಂದರು.
ಒಂದು ಒಳ್ಳೆಯ ಕಾರ್ಯಕ್ಕೆ ಧನಸಹಾಯ ಮಾಡಲು ಇಚ್ಚಿಸುವ ದಾನಿಗಳು Ramanji, Syndicate Bank, Kunjibettu Branch, SB A/C No: 01862210042226, IFSC Code: SYNB0000186.
PAYTM Number 9844471566 ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ರಾಮಾಂಜಿ – 8105134893
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಅವಿನಾಶ್ ಕಾಮತ್, ಅಮೃತ್ ರಾಜ್, ರೋಹಿತ್, ಶಶಾಂಕ್ ಶೆಟ್ಟಿ ಉಪಸ್ಥಿತರಿದ್ದರು.