Home Mangalorean News Kannada News ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ; ನೀಲಾವರ ಸುರೇಂದ್ರ ಅಡಿಗ

ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ; ನೀಲಾವರ ಸುರೇಂದ್ರ ಅಡಿಗ

Spread the love

ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ; ನೀಲಾವರ ಸುರೇಂದ್ರ ಅಡಿಗ

ಉಡುಪಿ: ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ, ಅದನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳದೆ, ನಮ್ಮ ನಮ್ಮ ನಡುವೆ ಗೋಡೆಯನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್‌ ಉಡುಪಿ ಇದರ ವತಿಯಿಂದ ಶಾಂತಿ ಮತ್ತು ಮಾನವೀಯತೆ ಅಭಿಯಾನದ ಅಂಗವಾಗಿ ಉಡುಪಿಯಲ್ಲಿ ಶನಿವಾರ ನಡೆದ ಸದ್ಭಾವನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

shanthi-hagu-manaviyathe-udupi-01

ನಮ್ಮದು ವಿಶ್ವಕ್ಕೆ ಮಾದರಿಯಾದ ಸಂಸ್ಕೃತಿ. ಆದರೆ, ಇಂದು ನಮ್ಮ ಸಂಸ್ಕೃತಿ ಉತ್ಕೃಷ್ಟತೆಯಾಗುತ್ತಿದೆ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಸಾರುವ ಸಂಗತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮಕ್ಕಳಲ್ಲಿ ದೇಶ ಪ್ರೇಮವನ್ನು ಬೆಳೆಸಬೇಕು. ಗೌರವದಿಂದ ನಡೆದುಕೊಳ್ಳುವಂತೆ ಅವರನ್ನು ರೂಪಿಸಬೇಕು ಎಂದರು.

ಮಣಿಪಾಲ ವಿಶ್ವವಿದ್ಯಾಲಯದ ಶಾಂತಿ ಮತ್ತು ಗಾಂಧಿತತ್ವ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ವರದೇಶಿ ಹಿರೆಗಂಗೆ ಮಾತನಾಡಿ, ಏಕತೆ ಎನ್ನುವುದು ಈ ದೇಶದ ಮೂಲ ಸೂತ್ರ. ಆದರೆ, ಅದು ಇಂದು ನಾಶವಾಗುತ್ತಿದೆ. ಅದನ್ನು ನಂಬಿ ಬದುಕುತ್ತಿರುವವರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.

ದೇಶ ಕೆಲವು ಬಂಡವಾಳ ಶಾಹಿಗಳ ಸೊತ್ತಾಗುವ ಅನುಮಾನ ಕಾಡುತ್ತಿದೆ. ಗುಜರಾತ್‌ ರಾಜ್ಯ ಅಭಿವೃದ್ಧಿಗೆ ಮಾದರಿ ಎಂಬುವುದು ದೊಡ್ಡ ಸುಳ್ಳು. ಅಲ್ಲಿನ ಕೆಲವೊಂದು ಪ್ರದೇಶಗಳಲ್ಲಿ ಈಗಲೂ ಸರಿಯಾದ ನಾಗರಿಕ ಸೌಲಭ್ಯಗಳೇ ಇಲ್ಲ. ಧರ್ಮ ಧರ್ಮಗಳ ನಡುವಿನ ಸಾಮರಸ್ಯತೆ ಕಣ್ಮರೆಯಾಗುತ್ತಿದೆ. ಅದನ್ನು ಹಾಳು ಮಾಡುವಂತಹ ಕೆಲವೊಂದು ಘಟನೆಗಳು ನಮ್ಮ ಮುಂದೆಯೇ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸಂವಿಧಾನವೂ ಒಂದು ಧರ್ಮವನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಅಥವಾ ಒಂದೇ ಧರ್ಮದ ಪ್ರಭುತ್ವವನ್ನು ಸ್ವೀಕರಿಸಿದ ಸಂವಿಧಾನ ಅಲ್ಲ. ಸರ್ವಧರ್ಮ ಸಮಭಾವದ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಂತಹ ಸಂವಿಧಾನ. ಸಂವಿಧಾನವನ್ನು ಒಪ್ಪಿಕೊಂಡವರು ರಾಷ್ಟ್ರೀಯರು. ಕೇವಲ ಒಂದು ಧರ್ಮದ ರಾಷ್ಟ್ರೀಯತೆ ಅಲ್ಲ. ಬಹುಸಂಖ್ಯಾತರ ರಾಷ್ಟ್ರೀಯತೆ ನಮ್ಮ ದೇಶದ ಏಕತೆಗೆ ಮಾರಕವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಎ.ಕೆ. ಕುಕ್ಕಿಲ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಯುಬಿಎಂಸಿ ಚರ್ಚ್‌ನ ಕುಮಾರ್‌ ಸಾಲಿನ್ಸ್‌, ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ. ರಾಜಶೇಖರ, ಲೀಲಾಧರ ಶೆಟ್ಟಿ, ಜನಾಬ್‌ ಹಸನ್‌ ಸಾಹೇಬ್‌ ಅಜ್ಜರಕಾಡು ಇದ್ದರು. ಯಾಸಿನ್‌ ಕೋಡಿಬೆಂಗ್ರೆ ಸ್ವಾಗತಿಸಿದರು, ಶೋಹೆಬ್‌ ಮಲ್ಪೆ ನಿರೂಪಿಸಿದರು, ಅನ್ವರ್‌ ಅಲಿ ಕಾಪು ವಂದಿಸಿದರು.


Spread the love

Exit mobile version