ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ: ನ್ಯಾಯಾಧೀಶೆ ಶೋಭಾ ಬಿ. ಜಿ

Spread the love

ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ: ನ್ಯಾಯಾಧೀಶೆ ಶೋಭಾ ಬಿ. ಜಿ

ಮಂಗಳೂರು:  ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಮಾನಸಿಕ ಅಸ್ವಸ್ಥತೆಗೆ ಒಳಪಡುವವರನ್ನು ಎಲ್ಲರಂತೆ ಕಾಣಬೇಕು. ಅವರ ಮೇಲೆ ದಯೆ ಮತ್ತು ಕರುಣೆ ಇರಲಿ. ಅವರನ್ನು ನಮ್ಮಂತೆ ಉಪಚರಿಸಬೇಕು. ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ದಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೋಭಾ ಬಿ. ಜಿ. ತಿಳಿಸಿದರು.

ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯ ಮಾನಸಿಕ ಆರೋಗ್ಯ ಏರುಪೇರಾದರೆ ಯಾರೂ ಗಮನ ಹರಿಸುವುದಿಲ್ಲ. ಮಾನಸಿಕ ಅಸ್ವಸ್ಥತೆಯನ್ನು ಸುಧಾರಿಸಲು ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಬೇಕಾದ ಕಾನೂನು ರೀತಿಯ ತಿಳಿವಳಿಕೆ ಸಮಾಜದ ಎಲ್ಲರಲ್ಲೂ ಇರಬೇಕು. ಈ ನಿಟ್ಟಿನಲ್ಲಿ ಕಾನೂನು ಪ್ರಾಧಿಕಾರ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡಲು ಬದ್ಧವಾಗಿದೆ ಎಂದು ಹೇಳಿದರು.

ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ. ಆರ್ ಮಾತನಾಡಿ ಮನಸ್ಸಿನಲ್ಲೇಳುವ ವಿವಿಧ ತಲ್ಲಣಗಳ ಕಾರಣದಿಂದ ಆರೋಗ್ಯ ವಿಕೃತಿಯ ರೂಪಕ್ಕೆ ಬದಲಾಗುತ್ತಿದೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುವರು ಎಲ್ಲಾ ಕಡೆ ಇದ್ದಾರೆ. ಹಾಗಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲರಲ್ಲೂ ಇರಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಗಣಪತಿ ಗೌಡ, ಮಾನಸಿಕ ಹಿಂಸೆ ಮತ್ತು ಒತ್ತಡಗಳು ಮಾನಸಿಕ ಅಸ್ವಸ್ಥತೆ ಉಂಟು ಮಾಡುತ್ತದೆ. ನ್ಯಾಯಸಮ್ಮತ ಬದುಕಿಗೆ ಇರುವ ಹಕ್ಕುಗಳನ್ನು ವಿದ್ಯಾರ್ಥಿಗಳು ತಿಳಿಯಬೇಕಿದೆ. ಸಮಸ್ಯೆ ಎದುರಾದ ನಂತರ ಬಾಧೆ ಪಡುವುದಕ್ಕಿಂತ ಮೊದಲೇ ಕಾನೂನಿನ ಅರಿವಿದ್ದರೆ ಯಾವುದೇ ತೊಂದರೆಗಳಾಗುವುದಿಲ್ಲ. ಈ ಕುರಿತು ಎಲ್ಲರಿಗೂ ತಿಳಿಸುವುದರಿಂದ ಸಾಕಷ್ಟು ಕುಟುಂಬಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರೀಲ್ಸ್ ಮತ್ತು ಪೋಸ್ಟರ್ ಮೇಕಿಂಗ್ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮನಃಶಾಂತಿ ಮಾನಸಿಕ ಆರೋಗ್ಯ ಸಂಸ್ಥೆಯ ತಜ್ಞೆ ಡಾ. ರಮೀಳ ಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ ಶುಕರಾಜ್ ಎಸ್. ಕೊಟ್ಟಾರಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಸುದರ್ಶನ್ ಸಿ. ಎಂ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞ ಡಾ. ಪ್ರಾಜಕ್ತ ವಿ. ರಾವ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಗಾಯತ್ರಿ ಎನ್. ಮತ್ತು ಡಾ. ಸುರೇಶ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments