ಮಾರ್ಚ್ 20ರಂದು ಕಾಪು, ಪಡುಬಿದ್ರೆ, ಎರ್ಮಾಳಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಉಡುಪಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಮಾರ್ಚ್ 20ರಂದು ಉಡುಪಿ ಜಿಲ್ಲೆಯ ಕಾಪು ಮಾರ್ಗವಾಗಿ ಮಂಗಳೂರಿಗೆ ತೆರಳುವ ಸಂದರ್ಭ ಕಾಪುವಿನಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಷೆಗಳನ್ನು ಉಡುಪಿ ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಮಾಜಿ ಕೇಂದ್ರ ಸಚಿವರೂ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀಯುತ ಓಸ್ಕರ್ ಫೆರ್ನಾಂಡಿಸ್‍ರವರ ನೇತೃತ್ವದಲ್ಲಿ ಸಮಾಲೋಚಿಸಲಾಯಿತು.
ರಾಹುಲ್ ಗಾಂಧಿಯವರು ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷರಾದ ಬಳಿಕ ಪ್ರಥಮವಾಗಿ ಕರಾವಳಿ ಜಿಲ್ಲೆಗಳಿಗೆ ಆಗಮಿಸಲಿದ್ದು ಕಾಪು, ಪಡುಬಿದ್ರೆ, ಮುಲ್ಕಿ, ಸುರತ್ಕಲ್ ರಸ್ತೆಯಾಗಿ ರೋಡ್ ಶೋ ದಲ್ಲಿ ಭಾಗವಹಿಸಿ ನೆಹರೂ ಮೈದಾನದಲ್ಲಿ ಜರಗುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿರುವರು. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬ್ಲಾಕ್ ಅಧ್ಯಕ್ಷರುಗಳು ಮುತುವರ್ಜಿವಹಿಸಲು ಓಸ್ಕರ್ ಫೆರ್ನಾಂಡಿಸ್‍ರವರು ಸೂಚಿಸಿದರು. ಸಮಾವೇಶಕ್ಕೆ ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ನಿರೀಕ್ಷಿಸಲಾಗಿದೆ. ರಾಹುಲ್ ಗಾಂಧಿಯವರು ಕಾಪು ಭೇಟಿ ಸಮಯ ಎರ್ಮಾಳ್‍ನಲ್ಲಿರುವ ರಾಜೀವ್ ಗಾಂಧಿ ನೇಶನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜ್ಯುಕೇಶನ್ ಸಂಕೀರ್ಣದ ಉದ್ಘಾಟನೆಯನ್ನು ನೆರವೇರಿಸಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರೊಡನೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತದ ನಂತರ ಸಾವಿರಾರು ಕಾರ್ಯಕರ್ತರೊಂದಿಗೆ ಪಡುಬಿದ್ರೆ ರಾಷ್ಟ್ರಿಯ ಹೆದ್ದಾರಿಯಲ್ಲಿ ನಡೆಯುವ ರೋಡ್ ಶೋದಲ್ಲಿ ಭಾಗವಹಿಸಿ, ಸಂಜೆ 6.00 ಗಂಟೆಗೆ ಮಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ತೆರಳಲಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಕೆ.ಎಸ್.ಆರ್.ಟಿ.ಸಿ. ನಿಗಮದ ಅಧ್ಯಕ್ಷರೂ ಶಾಸಕರೂ ಆದ ಕೆ. ಗೋಪಾಲ ಪೂಜಾರಿ, ಮಾಜಿ ಸಚಿವರು ಶಾಸಕರೂ ಆದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ, ಸೇವಾದಳದ ಅಧ್ಯಕ್ಷರಾದ ಅಶೊಕ್ ಕುಮಾರ್ ಕೊಡವೂರು, ಬ್ಲಾಕ್ ಅಧ್ಯಕ್ಷರುಗಳಾದ ಸತೀಶ್ ಅಮೀನ್ ಪಡುಕರೆ, ಶಂಕರ್ ಕುಂದರ್, ನವೀನ್ ಚಂದ್ರ ಶೆಟ್ಟಿ, ಸುಧಾಕರ ಕೋಟ್ಯಾನ್, ಸುಧೀರ್ ಹೆಗ್ಡೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಶ್ರೀ ದಿನೇಶ್ ಪುತ್ರನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್, ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಪ್ರಚಾರ ಸಮಿತಿ ಸಂಚಾಲಕರಾದ ಕೃಷ್ಣಮೂರ್ತಿ ಕಾರ್ಕಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್‍ನ ಕಾರ್ಯದರ್ಶಿ ಕಿರಣ ಕುಮಾರ್ ಉದ್ಯಾವರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರಾದ ಬಿ. ನರಸಿಂಹ ಮೂರ್ತಿರವರು ಧನ್ಯವಾದ ಸಲ್ಲಿಸಿದರು.