ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದ ನಿರ್ವಾಹಕ, ಪ್ರಯಾಣಿಕರಿಗೆ ದಿಢೀರ್ ದಂಡ ವಿಧಿಸಿದ ಡಿಸಿ ಜಗದೀಶ್

Spread the love

ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದ ನಿರ್ವಾಹಕ, ಪ್ರಯಾಣಿಕರಿಗೆ ದಿಢೀರ್ ದಂಡ ವಿಧಿಸಿದ ಡಿಸಿ ಜಗದೀಶ್

ಉಡುಪಿ: ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕನೋರ್ವ ಮಾಸ್ಕ್ ಧರಿಸದೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿಯಿಂದ ದಂಡ ಹಾಕಿಸಿಕೊಂಡ ಘಟನೆ ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ.

ಕೋವಿಡ್-19 ಜನಾಂದೋಲನ ಜಾಗೃತಿ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಜಿಲ್ಲಾ ನ್ಯಾಯಧೀಶರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಕೋರ್ಟ್ ಬಳಿಯ ಮನೆಗಳಿಗೆ ತೆರಳಿ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ವಾಪಾಸಾಗುತ್ತಿದ್ದ ವೇಳೆ ಕೆ ಎಸ್ ಆರ್ ಟಿ ಸಿ ನರ್ಮ್ ಬಸ್ಸಿನ ನಿರ್ವಾಹಕರೋರ್ವರು ಮಾಸ್ಕ್ ಇಲ್ಲದೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಗಮನಿಸಿ ಬಸ್ಸನ್ನು ನಿಲ್ಲಿಸಲು ಸೂಚನೆ ನೀಡಿದರು.

ಜಿಲ್ಲಾಧಿಕಾರಿಯನ್ನು ಕಂಡು ಕೂಡಲೇ ಕಿಸೆಯಿಂದ ಮಾಸ್ಕ್ ತೆಗೆದು ಹಾಕಿಕೊಂಡಿದ್ದು ಈ ವೇಳೆ ಬಸ್ಸಿನಲ್ಲಿ ಕೆಲವೊಂದು ಪ್ರಯಾಣಿಕರೂ ಕೂಡ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿರುವುದು ಕಂಡು ಬಂದಿದ್ದು ಸ್ಥಳೀಯ ನಗರ ಪೋಲಿಸರಿಗೆ ಕರೆಸಿ ನಿರ್ವಾಹಕ ಹಾಗೂ ಪ್ರಯಾಣಿಕರಿಗೆ ದಂಡ ಹಾಕುವಂತೆ ಸೂಚನೆ ನೀಡಿದರು.

ಮಾಸ್ಕ್ ಇರುವುದು ಜೇಬಿನಲ್ಲಿ ಇಟ್ಟುಕೊಳ್ಳಲು ಅಲ್ಲ, ಮುಖಕ್ಕೆ ಹಾಕಿಕೊಳ್ಳಿ. ನಿರ್ವಾಹಕರಾಗಿ ತಾವೇ ಮಾಸ್ಕ್ ಧರಿಸದಿದ್ದರೆ ಪ್ರಯಾಣಿಕರು ಕೂಡ ನಿಮ್ಮನ್ನೇ ಅನುಸರಿಸುತ್ತಾರೆ ಆದ್ದರಿಂದ ಮಾಸ್ಕ್ ಧರಿಸಿ ಇಲ್ಲವಾದರೆ ದಂಡ ತೆರಲು ತಯಾರಾಗಿ ಎಂದು ಎಚ್ಚರಿಕೆ ನೀಡಿದರು.


Spread the love