ಮಿಥುನ್ ರೈ ಗೆದ್ದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ದಾರಿ:  ಡಿ.ಕೆ.ಶಿವಕುಮಾರ್

Spread the love

ಮಿಥುನ್ ರೈ ಗೆದ್ದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ದಾರಿ:  ಡಿ.ಕೆ.ಶಿವಕುಮಾರ್

ಮಂಗಳೂರು:  ದಕ್ಷಿಣ ಕನ್ನಡ ಲೋಕಸಭಾ ಸದಸ್ಯನಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಎಂ.ರೈಯನ್ನು ಗೆಲ್ಲಿಸಿ, ನಾವೆಲ್ಲರೂ ಸೇರಿ ಸುಳ್ಯ ಪ್ರದೇಶವನ್ನು ಅಭಿವೃದ್ಧಿ ಮಾಡುವುದಲ್ಲದೆ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಬಲಿಷ್ಠವಾಗಿ ಸಂಘಟಿಸೋಣ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಅವರು ಸುಳ್ಯ ತಾಲೂಕಿನ ಗುತ್ತಿಗಾರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಸುಳ್ಯ ಪ್ರದೇಶದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂಬುದು ತನ್ನ ಗಮನಕ್ಕೆ ಬಂದಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸು ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡೋಣ. ನಾವೆಲ್ಲರು ಇಲ್ಲೇ ಸೇರಿ ಸುಳ್ಯದ ಅಭಿವೃದ್ಧಿಯ ಕುರಿತು ಚರ್ಚಿಸಿ ಎಲ್ಲರ ಅಭಿಪ್ರಾಯ, ಬೇಡಿಕೆಗಳನ್ನು ಪಡೆದು ಅಭಿವೃದ್ಧಿಯನ್ನು ಮಾಡೋಣ ಎಂದು ಶಿವಕುಮಾರ್ ಹೇಳಿದರು.

ಸುಳ್ಯದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಲು ತಾನೇ ಖುದ್ದಾಗಿ ನೇತೃತ್ವ ವಹಿಸುವುದಾಗಿ ಹೇಳಿದ ಡಿ.ಕೆ.ಶಿವಕುಮಾರ್ ಅವರು, ತನ್ನ ಬೂತಿನಲ್ಲಿ ಯಾರೂ ಹೆಚ್ಚು ಲೀಡ್ ತಂದು ಕೊಡುತ್ತಾನೊ ಅವರನೇ ನಿಜವಾದ ಲೀಡರ್ ಆಗಿರುತ್ತಾನೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಕಿವಿ ಮಾತು ಹೇಳಿದರು.

ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಓಟು ಕೇಳುವ ಯಾವ ನೈತಿಕತೆಯೂ ಇಲ್ಲ. ಕ್ಷೇತ್ರದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದಲ್ಲದೇ, ಕೇಂದ್ರ ಸರಕಾರದ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ. ಮಾತ್ರವಲ್ಲದೆ, ವಿಜಯ ಬ್ಯಾಂಕ್ ವಿಲೀನ, ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರ್ಪಡೆ ಸೇರಿದಂತೆ ಸ್ಥಳೀಯ ಭಾವನಾತ್ಮಕ ವಿಚಾರಗಳ ಕುರಿತಾಗಿ ಕೂಡ ಕೇಂದ್ರ ಸರಕಾರದ ಗಮನ ಸೆಳೆಯದೇ ಇರುವ ಯಾವ ನೈತಿಕತೆ ಅವರಿಗಿದೆ ಎಂದು ಶಿವಕುಮಾರ್ ಪ್ರಶ್ನಿಸಿದರು.

ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ತಮ್ಮದು ಸರ್ವಧರ್ಮಗಳನ್ನು ಗೌರವಿಸುವ, ಸಹಬಾಳ್ವೆಯ ನೈಜ ಹಿಂದೂತ್ವವಾಗಿದೆ. ನಮ್ಮಲ್ಲಿ ಪರಸ್ಪರ ಮನುಷ್ಯರಲ್ಲಿ ದ್ವೇಷ ಮಾಡುವುದಕ್ಕೆ ಅವಕಾಶವೇ ಇಲ್ಲ. ಮಾತ್ರವಲ್ಲದೆ, ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ದುರುಪಯೋಗ ಮಾಡುವುದಿಲ್ಲ ಎಂದು ಹೇಳಿದರು.

ಗುತ್ತಿಗಾರಿನ ಮೇಗಿನಪೇಟೆ ಪೆಟ್ರೋಲ್ ಬಂಕಿನಿಂದ ಆರಂಭಗೊಂಡ ರೋಡ್ ಶೋ ಕೆಳಗಿನಪೇಟೆಯ ತನಕ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ವೆಂಕಪ್ಪ ಗೌಡ, ಭರತ್ ಮುಂಡೋಡಿ, ಜೆಡಿಎಸ್ ಮುಖಂಡರಾದ ಎಂ.ಬಿ.ಸದಾಶಿವ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಯಪ್ರಕಾಶ್ ರೈ, ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.


Spread the love