Home Mangalorean News Kannada News ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್  ಕಡ್ಡಾಯ –   ಸಚಿವ ಕೋಟ ಶ್ರೀನಿವಾಸ...

ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್  ಕಡ್ಡಾಯ –   ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಮೀನುಗಾರರಿಗೆ ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್  ಕಡ್ಡಾಯ –   ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು : ಮೀನುಗಾರರಿಗೆ  ಕ್ಯೂ ಆರ್ ಕೋಡ್ ಆಧಾರಿತ  ಆಧಾರ್ ಕಾರ್ಡ್‍ಗಳನ್ನು ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿದ್ದು ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕರಾವಳಿ ಮೀನುಗಾರಿಕೆ  ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಮೀನುಗಾರರ ರಕ್ಷಣೆ ಹಾಗೂ ಅವರ ಮಾಹಿತಿಯನ್ನು ಕಲೆ ಹಾಕುವ ದೃಷ್ಠಿಯಿಂದ ಕ್ಯೂ ಆರ್ ಕೋಡ್ ಆಧಾರಿತ ಬಯೋಮೆಟ್ರಿಕ್ ಕಾರ್ಡ್‍ಗಳನ್ನು ಹೊಂದುವುದು ಕಡ್ಡಾಯವಾಗಿರುತ್ತದೆ. ಜಿಲ್ಲಾಡಳಿತದ ವತಿಯಿಂದ “ಸೇವಾ ಸಿಂಧು ಪೋರ್ಟ್‍ಲ್” ವೆಬ್‍ಸೈಟ್‍ನಲ್ಲಿ ಈ ಕಾರ್ಡ್‍ನ್ನು ಒದಗಿಸಲು ಅಥವಾ ಆಯಾ ಮೀನುಗಾರಿಕಾ ಇಲಾಖೆಯಲ್ಲಿ ದೊರಕುವಂತೆ ಮಾಡಲು ಚಿಂತನೆ ನಡೆಸುತ್ತೇವೆ ಎಂದರು.

ಕಿಸಾನ್ ಕಾರ್ಡ್ ಮುಖಾಂತರ ಕೃಷಿಕರಿಗೆ ಹೆಚ್ಚು ಸೌಲಭ್ಯಗಳು ದೊರಕುತ್ತಿದೆ.  ಆದರೆ ಕೃಷಿಯಲ್ಲೇ ಮೀನುಗಾರಿಕೆಯೂ ಒಂದು ಭಾಗವಾಗಿದ್ದು ಕೃಷಿಕರಿಗೆ ಸಿಗುವಷ್ಟು ಸವಲತ್ತು ಮೀನುಗಾರಿಗೆ ಸಿಗುತ್ತಿಲ್ಲ. ಮೀನುಗಾರರಿಗೂ ಕಿಸಾನ್ ಕಾರ್ಡ್‍ನಲ್ಲಿ ಸೌಲಭ್ಯ ಒದಗಿಸಿಕೊಡಬೇಕೆಂದು ಸಂವಾದದಲ್ಲಿ ತಿಳಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು, ಈ ವಿಚಾರವನ್ನು ಮೀನುಗಾರಿಕೆ ನಿರ್ದೇಶಕರು, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂಬಂಧಪಟ್ಟ ಅಧಿಕಾರಿ ಸೇರಿದಂತೆ ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ 20% ನುರಿತ ಮೀನುಗಾರರಿಗೆ ಕರಾವಳಿ ಕಾವಲು ಪಡೆಯಲ್ಲಿ ಉದ್ಯೋಗ ಮೀಸಲಿಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಈ ಕಾರ್ಯಕ್ರಮದ ಮೂಲಕ ಸಾಕಷ್ಟು ಪರಿಣಿತರ ಅಭಿಪ್ರಾಯ ಪಡೆದುಕೊಂಡು ಕ್ರೋಡೀಕರಣಗೊಳಿಸಿ, ಮೀನುಗಾರಿಕೆಯ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಮುಂದಿಟ್ಟುಕೊಂಡು ಒಂದು ಒಳ್ಳೆಯ ಯೋಜನೆ ಕಾರ್ಯಗತವಾಗುವುದು ಮುಖ್ಯ ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಒಂದು ರಾಷ್ಟ್ರದ ಅಭಿವೃದ್ದಿಯಲ್ಲಿ ಮೀನುಗಾರಿಕೆಯ ಪಾತ್ರ ಅಪಾರವಾಗಿದ್ದು, ನೂರಾರು ಕುಟುಂಬಗಳು ಮೀನುಗಾರಿಕೆಯನ್ನು ತಮ್ಮ ವೃತ್ತಿಯಾಗಿ ಅನುಸರಿಸುತ್ತಿದ್ದಾರೆ. ಆದರೆ ಇತ್ತೀಚಿನ ಕಾಲಘಟ್ಟದಲ್ಲಿ ವೃತ್ತಿಯ ಬದಲಾಗಿ ವ್ಯಾಪಾರೀಕರಣವಾಗಿ ಪರಿವರ್ತನೆ ಆಗುತ್ತಿದೆ ಎಂದರು.

   ಕರಾವಳಿ ಮೀನುಗಾರರು  ಸಂಖ್ಯೆ 3.28 ಲಕ್ಷ, ಸಕ್ರಿಯ ಮೀನುಗಾರರ ಸಂಖ್ಯೆ 1.57 ಲಕ್ಷ, ಮೀನುಗಾರಿಕಾ ಬಂದರು 8, ಮೀನುಗಾರಿಕಾ ಇಳಿದಾಣ ಕೇಂದ್ರಗಳು 26, ಮೀನು ಸಹಕಾರಿ ಸಂಘ 128, ಮೀನು ಅಭಿವೃದ್ಧಿ ನಿಗಮ 1, ಮೀನು ಮಾರಾಟ ಮಂಡಳಿ 2, ಯಾಂತ್ರೀಕೃತ ದೋಣಿಗಳು 4,585, ಮೋಟರೀಕೃತ ದೋಣಿಗಳು 9,362, ನಾಡ ದೋಣಿಗಳು 9,097 ಇವೆ ಎಂದು ಮೀನುಗಾರಿಕಾ ಜಂಟಿ ನಿರ್ದೇಶಕ ಬ್ರಹ್ಮಚಾರಿ ಸಚಿವರಿಗೆ ತಿಳಿಸಿದರು.

 ತುರ್ತು ಸಂದರ್ಭದಲ್ಲಿ ದೋಣಿಗಳನ್ನು ರಕ್ಷಣೆ ಮಾಡುವ ಸಲುವಾಗಿ ದೋಣಿಗಳಿಗೆ ಕಲರ್ ಕೋಡಿಂಗ್ ಸಿಸ್ಟಮ್ ಅನ್ನು  ರೂಪಿಸಿದ್ದು, ಇದರಲ್ಲಿ ಸಮಸ್ಯೆ ಇದ್ದರೆ ಎಲ್ಲಾ ಮೀನುಗಾರರ ಮನವಿ ಪತ್ರ ಸಲ್ಲಿಸಿದರೆ  ಅದರನುಸಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಚೇತನ್ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಾರವಾರ ಶಾಸಕಿ ರೂಪಾಲಿ ನಾಯ್ಕ್, ಕಾಪು ಶಾಸಕ ಲಾಲಾಜಿ ಮೆಂಡನ್,  ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೀನುಗಾರಿಕೆ ನಿರ್ದೇಶಕ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version