ಮೀನುಗಾರರ ಕಣ್ಮರೆ ವಿಚಾರದಲ್ಲಿ ಕೇಂದ್ರ ಸರಕಾರ ಸತ್ಯ ಮರೆಮಾಚುತ್ತಿದೆ – ಪ್ರಮೋದ್ ಮಧ್ವರಾಜ್
ಉಡುಪಿ: ‘ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾದರೂ ಅವರನ್ನು ಹುಡುಕವಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮತ್ತು ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲವಾಗಿದ್ದು ಲೋಕಸಭೆ ಚುನಾವಣೆಗಾಗಿ ಸತ್ಯ ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎಂದು ಎಂದು ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಆರೋಪಿಸಿದರು.
ಗುರುವಾರ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಮೀನುಗಾರರು ನಾಪತ್ತೆಯಾಗಿ ಮೂರು ತಿಂಗಳು ಕಳೆದಿವೆ. ಅವರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬುದೇ ತಿಳಿದಿಲ್ಲ. ಮೀನುಗಾರರಿಗೆ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರ್ಕಾರ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ. ‘ನೌಕಾಪಡೆಯ ನೌಕೆಯು ಬೋಟ್ಗೆ ಡಿಕ್ಕಿ ಹೊಡೆದು ಅಪಘಾತ ಎಸಗಿರುವ ಬಗ್ಗೆ ಸಂಶ ಯವಿದೆ. ಆದರೂ ನೌಕಾಪಡೆ ಮೀನುಗಾ ರರನ್ನು ಹುಡುಕುವ ನಾಟಕ ಮಾಡಿದೆ. ಇದು ಲೋಕಸಭೆ ಚುನಾವಣೆಗಾಗಿ ಸತ್ಯ ಮರೆಮಾಚುವ ಪ್ರಯತ್ನವಾಗಿದೆ’ ಎಂದು ದೂರಿದರು. ನಿರ್ಮಲಾ ಸೀತಾರಾಮನ್ ನಾಪತ್ತೆಯಾದ ಮೀನುಗಾರ ಕುಟುಂಬದವರ ಮನೆಗೆ ಭೇಟಿ ನೀಡಿ, ಅವರ ನೋವಿಗೆ ಸ್ಪಂದಿಸಿಲ್ಲ. ಆದರೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವಾಗ ಬಂದು ಕೇವಲ ಪ್ರಮೋದ್ ಮಧ್ವರಾಜ್ ಅವರಿಗೆ ಅನುಭವದ ಕೊರತೆ ಇದೆ ಎಂದಿದ್ದು ಬಿಟ್ಟರೆ ಬೋಟ್ ಬಗ್ಗೆ ಯಾವುದೇ ಮಾಹಿತಿ ಅವರು ನೀಡಲಿಲ್ಲ. ‘ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾಗಲು ನೌಕಾಪಡೆಯೇ ಕಾರಣ. ಮೀನುಗಾರರ ನಾಪತ್ತೆ ಪ್ರಕರಣದ ಹಿಂದೆ ನೌಕಾಪಡೆಯ ಕೈವಾಡವಿದ ಎಂದರು.
ಉಡುಪಿ ಜಿಲ್ಲೆಯಲ್ಲಿ 9 ಲಕ್ಷ ಟನ್ ಮರಳು ತೆಗೆಯಲು ಅವಕಾಶ ಮಾಡಿಕೊಟ್ಟದ್ದು ಪ್ರಮೋದ್ ಮಧ್ವರಾಜ್ , 28 ಬ್ಲಾಕ್ ಗಳಲ್ಲಿ 165 ಜನರಿಗೆ ಮರಳು ತೆಗೆಯಲು ನಮ್ಮ ಸರಕಾರದ ಅವಧಿಯಲ್ಲಿ ಅನುಮತಿ ನೀಡುವ ಕೆಲಸ ಮಾಡಿದರೆ ಈಗಿನ ಶಾಸಕರು ಕೇವಲ ಪ್ರತಿಭಟನೆಯ ನಾಟಕವಾಡಿದ್ದು ಬಿಟ್ಟರೆ ಸಮಸ್ಯೆ ಪರಿಹಾರ ಮಾಡುವುದನ್ನು ಮರೆತಿದ್ದಾರೆ. ನನ್ನ ಶಾಸಕತ್ವದ ಅವಧಿಯಲ್ಲಿ ಉಡುಪಿ ಜಿಲ್ಲೆಯ ಮರಳು ಬೇರೆ ಜಿಲ್ಲೆಗೆ ಸಾಗಾಟವಾಗದಂತೆ ಕಟ್ಟು ನಿಟ್ಟಿನ ನಿಯಮ ಜಾರಿ ಮಾಡುವ ಕೆಲಸ ಮಾಡಲಾಗಿತ್ತು. ರಘುಪತಿ ಭಟ್ಟರನ್ನು ಆಯ್ಕೆ ಮಾಡಿದರೆ ಒಂದು ತಿಂಗಳ ಒಳಗೆ ಮರಳಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದವರು 11 ತಿಂಗಳು ಕಳೆದರೂ ಕೂಡ ಮರಳಿನ ಸಮಸ್ಯೆ ಬಗೆಹರಿಸಲು ಅವರು ಶಕ್ತರಾಗಿಲ್ಲ
‘ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ, ಬಿಜೆಪಿ ನಾಯಕರನ್ನು ಕಡೆಗಣಿಸಿದರೂ ಪರವಾಗಿಲ್ಲ. ನಾನು ಪ್ರಧಾನಿ ಮೋದಿ ಹೆಸರಿನಲ್ಲಿ ಗೆಲ್ಲುತ್ತೇನೆಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಅವರು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಪ್ರಮೋದ್ ಹಾಗೂ ಮೋದಿ ಸ್ಪರ್ಧೆಯಲ್ಲ. ಪ್ರಮೋದ್ ಹಾಗೂ ಶೋಭಾ ಪೈಪೋಟಿ ಎಂಬುವುದನ್ನು ತಿಳಿದುಕೊಳ್ಳಬೇಕು. ಮೋದಿ ಅಲೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದರೆ ಅದು ಅವರ ಭ್ರಮೆ ಅಷ್ಟೇ. ಈಗ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದರು.
ಉಡುಪಿ -ಚಿಕ್ಕಮಗಳೂರು ಕ್ಷೇತ್ರಕ್ಕೆ ಕೆಲಸ ಮಾಡುವ ನಿಷ್ಟಾವಂತ ಸಂಸದನ ಅಗತ್ಯವಿದ್ದು ಅಂತಹ ಬದಲಾವಣೆ ಈ ಬಾರಿಯ ಚುನಾವಣೆಯಲ್ಲಿ ನಡೆಯಬೇಕಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮೋಸ ಆಗಿದ್ದು ನಾನು ಕೆಲಸ ಮಾಡಿಯೂ ಕೂಡ ಸೋತಿದ್ದು ಈ ಬಾರಿ ಎಲ್ಲಾ ಕಾರ್ಯಕರ್ತರು ಸೇರಿಕೊಂಡು ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.
‘ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆದರೂ ಅನಗತ್ಯ ಅಪಪ್ರಚಾರದಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು. ಈಗ ಕಾಂಗ್ರೆಸ್ ಹಾಗೂ ಜೆಡಿಎಸ್ನ ಕಾರ್ಯಕರ್ತರು ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ. ಹಾಗಾಗಿ ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಒಂದಾಗುತ್ತಾರೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಸಂಕಲ್ಪ ಮಾಡಿದ್ದಾರೆ’ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ ನೇತೃತ್ವದಲ್ಲಿ ಸಂತೆಕಟ್ಟೆಯ ರಿಯಾಝ್ ಅಹ್ಮದ್, ಸಜನ್, ಗುರುಪ್ರಸಾದ್, ಮೊಹಮ್ಮದ್ ಹ್ಯಾರಿಸ್, ಇಮ್ತಿಯಾಝ್, ಮುನೀರ್, ನೌಫಾಲ್, ನವೀನ್, ಅಶ್ರಫ್ ಹಾಗೂ ಇತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಪೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ , ಕಾಂಗ್ರೆಸ್ ನಾಯಕರುಗಳಾದ ಎಸ್ ನಾರಾಯಣ್, ರಾಜೇಶ್ ಶೆಟ್ಟಿ ಕುಮ್ರಗೋಡು, ರಾಘವೇಂದ್ರ ಕುಂದರ್ ಜೆ.ಬಿ. ರಾಘವೇಂದ್ರ ಶೆಟ್ಟಿ ಕರ್ಜೆ, ರಹಮತುಲ್ಲಾ, ಹರೀಶ್ ಶೆಟ್ಟಿ ಕೀಳಂಜೆ, ಕೆ ಪಿ ಇಬ್ರಾಹಿಂ, ತಾಲೂಕು ಪಂಚಾಯತ್ ಸದಸ್ಯರಾದ ಗೋಪಿ ಕೆ ನಾಯ್ಕ್, ಡಾ ಸುನಿತಾ ಶೆಟ್ಟಿ, ಸುಲೋಚನಾ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿಲೇಶ್ ಶೆಟ್ಟಿ, ಉಡುಪಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಖಾದರ್, ನಾಯಕರಾದ ವಾಸುದೇವ ರಾವ್, ಅಶ್ರಫ್, ಅರುಣ್ ಕುಮಾರ್, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.