ಮೀನುಗಾರರ ವಿಚಾರದಲ್ಲಿ ಪ್ರಮೋದ್ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ – ಶಾಸಕ ರಘುಪತಿ ಭಟ್
ಉಡುಪಿ: ‘ಮೀನುಗಾರರ ವಿಚಾರದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ’ ಎಂದು ಶಾಸಕ ರಘುಪತಿ ಭಟ್ ವಾಗ್ದಾಳಿ ನಡೆಸಿದರು.
ಮಲ್ಪೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಈಗ ರಾಜಕೀಯ ಮಾಡುವ, ನಾಟಕ ಮಾಡುವ ಅಗತ್ಯ ಇಲ್ಲ ಮುಖ್ಯಮಂತ್ರಿ ಉಡುಪಿಯಲ್ಲಿ 5 ದಿನ ಉಳಿದುಕೊಂಡರೂ ಮೀನುಗಾರರ ಮನೆಗೆ ಕರೆದೊಯ್ದು ಸಾಂತ್ವನ ಹೇಳಿಸಲು ಪ್ರಮೋದ್ ಅವರಿಗೆ ಸಾಧ್ಯವಾಗಲಿಲ್ಲ. ಈಗ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ’ ಎಂದು ಕುಟುಕಿದರು.
‘ದೇಶದ ರಕ್ಷಣೆಗೆ ನಿಂತಿರುವ ಸೈನಿಕರನ್ನು ಕೊಲೆಗಾರರು ಎಂದು ಆರೋಪಿಸುತ್ತಿರುವ ಮಧ್ವರಾಜ್ ಮನಃಸ್ಥಿತಿ ಕೆಟ್ಟಿದೆ. ಮೀನುಗಾರರ ವಿಷಯದಲ್ಲಿ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಡಬೇಕು’ ಎಂದು ವಾಗ್ದಾಳಿ ನಡೆಸಿದರು.
‘ರಾಜ್ಯ ಸರ್ಕಾರದ ಯಾವ ಅಧಿಕಾರಿಗಳೂ ನೌಕಾಪಡೆಯ ಅಧಿಕಾರಿಗಳನ್ನು ಭೇಟಿಮಾಡಿ ಕಾರ್ಯಾಚರಣೆಗೆ ಒತ್ತಾಯಿಸಿಲ್ಲ. ಈಗ ಬಿಜೆಪಿಯತ್ತ ಬೆರಳು ತೋರಿಸುತ್ತಿರುವುದು ವಿಪರ್ಯಾಸ’ ಎಂದು ಟೀಕಿಸಿದರು.
ಚಿಕಿತ್ಸೆ ಪಡೆಯಲು ಕರಾವಳಿ ಬೇಕು: ಮುಖ್ಯಮಂತ್ರಿಗೆ ಚಿಕಿತ್ಸೆ ಪಡೆಯಲು, ಸುಖ ಪಡೆಯಲು ಕರಾವಳಿ ಬೇಕು. ಆದರೆ, ಕರಾವಳಿಯ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಇದ್ದಾರೆ ಎಂದು ಕುಟುಕಿದರು.
ಸ್ಥಳೀಯ ಮೀನುಗಾರರ ಜ್ಞಾನ ಹಾಗೂ ನಿವೃತ್ತ ಕ್ಯಾಪ್ಟನ್ ಜಯಪ್ರಕಾಶ್ ಮೆಂಡನ್ ಅವರ ಅನುಭವ ಸುವರ್ಣ ತ್ರಿಭುಜ ಬೋಟ್ ಪತ್ತೆ ಕಾರ್ಯಾಚರಣೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಶಾಸಕ ರಘುಪತಿ ಭಟ್ ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದಲ್ಲಿ ಹಿಂದೆಯೂ ಐಎನ್‌ಎಸ್ ನಿರೀಕ್ಷಕ್ 10 ದಿನ ನಿರಂತರವಾಗಿ ಶೋಧ ನಡೆಸಿತ್ತು. ಆದರೆ ಪ್ರಯೋಜನವಾಗಿರಲಿಲ್ಲ. ಈ ಬಾರಿಯ ಕಾರ್ಯಾಚರಣೆ ಯಶಸ್ಸಾಗಲು ಅನುಭವಿ ಮೀನುಗಾರರು ಹಾಗೂ ನಿವೃತ್ತ ಕ್ಯಾಪ್ಟನ್ ಕಾರಣ ಎಂದರು.
ಏಪ್ರಿಲ್ 29ರಂದು ಮಧ್ಯರಾತ್ರಿ 10 ಜನರನ್ನೊಳಗೊಂಡ ತಂಡ ಕಾರವಾರದ ನೌಕಾನೆಲೆ ತಲುಪಿತು. ಅಲ್ಲಿಂದ ಐಎನ್‌ಎಸ್ ನಿರೀಕ್ಷಕ್ ಹಡಗಿನ ಮೂಲಕ ಶೋಧ ಕಾರ್ಯ ಆರಂಭವಾಯಿತು. ಸೋನಾರ್ ತಂತ್ರಜ್ಞಾನದ ನೆರವಿನಿಂದ 30 ಹಾಗೂ ಮೇ 1ರಂದು ಸಮುದ್ರಾಳದಲ್ಲಿ ಹುಡುkಕಿದಾಗ. ಯಾವ ಸುಳಿವೂ ಸಿಗಲಿಲ್ಲ ಎಂದರು.
ಬುಧವಾರ ಸೋನಾರ್ ರೇಡಾರ್‌ಗೆ ಕಂಪನಗಳು ಲಭ್ಯವಾದವು. ಆ ಜಾಗದಲ್ಲಿ 16 ಮೀಟರ್ ಆಳದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಯಿತು. ಆಗ ಕ್ಯಾಮೆರಾ ಕಣ್ಣಿಗೆ ಹಡಗಿನ ಬಲೆಯ ಅವಶೇಷ ಸೆರೆ ಸಿಕ್ಕಿತು. ಸೂಕ್ಷ್ಮವಾಗಿ ಅವಲೋಕಿಸಿದಾಗ ಹಡಗಿನ ಮೇಲಿದ್ದ ಅಕ್ಷರಗಳು ಗೋಚರಿಸಿದವು ಎಂದು ಮಾಹಿತಿ ನೀಡಿದರು.
ಗುರುವಾರ ನೌಕಾಪಡೆಯ ಮುಳುಗು ತಜ್ಞರು 65 ಮೀಟರ್ ಆಳಕ್ಕೆ ಇಳಿದು ಶೋಧ ನಡೆಸಿದಾಗ ಸುವರ್ಣ ತ್ರಿಭುಜ ಬೋಟ್ ಪತ್ತೆಯಾಯಿತು. ಅವಶೇಷಗಳ ಫೋಟೊ, ವಿಡಿಯೊಗಳನ್ನು ಅಧಿಕಾರಿಗಳು ತಂಡಕ್ಕೆ ಪ್ರದರ್ಶಿಸಿದರು ಎಂದು ತಿಳಿಸಿದರು.
ಬೋಟ್ ಮಗುಚಿ ಕೊಂಡಿದ್ದು, ಕ್ಯಾಬೀನ್‌ಗಳು ತೆರೆದುಕೊಂಡಿರುವುದು ಕಂಡುಬಂತು. ಬೋಟ್ ಒಳಗೆ ಮೃತದೇಹಗಳು ಸಿಗಲಿಲ್ಲ. ಮೇಲ್ನೋಟಕ್ಕೆ ಮೀನುಗಾರರು ಬದುಕುಳಿದಿರುವ ಸಾಧ್ಯತೆಗಳು ಇಲ್ಲ. ಬೋಟ್ ಮುಳುಗಡೆಯಾದಾಗ ಸಮೀಪದ ಹಡಗಿನಿಂದ ರಕ್ಷಣೆ ಪಡೆದಿದ್ದರೆ ಇಷ್ಟೊತ್ತಿಗೆ ಮನೆಗೆ ಮರಳಬೇಕಿತ್ತು ಎಂದು ಶಾಸಕರು ಅಭಿಪ್ರಾಯಪಟ್ಟರು.
ಫೆ.24ರಂದು ಮೀನುಗಾರರ ಕುಟುಂಬದ ಸದಸ್ಯರನ್ನೊಳಗೊಂಡ ನಿಯೋಗ ಬೆಂಗಳೂರಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿತ್ತು. ಈ ವೇಳೆ ಮಲ್ಪೆಗೆ ಬಂದು ನೌಕಾಪಡೆಯ ಅಧಿಕಾರಿಗಳ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದರು. ಅಷ್ಟರಲ್ಲಿ ಪುಲ್ವಾಮ ದಾಳಿ ನಡೆದು, ಸೇನೆ ಏರ್‌ಸ್ಟ್ರೈಕ್ ಮಾಡಿದ್ದರಿಂದ ಮಲ್ಪೆಗೆ ಬರಲಾಗಲಿಲ್ಲ. ಬಳಿಕ ಶೋಭಾ ಕರಂದ್ಲಾಜೆ ಅವರ ನಾಮಪತ್ರ ಸಲ್ಲಿಕೆ ದಿನ ಮಲ್ಪೆಗೆ ಭೇಟಿ ನೀಡಿ ಕುಟುಂಬದ ಅಹವಾಲು ಆಲಿಸಿದ್ದರು. ನೀತಿ ಸಂಹಿತೆ ಇದ್ದ ಕಾರಣ ಅಧಿಕಾರಿಗಳ ಸಭೆ ನಡೆಸಿರಲಿಲ್ಲ. ದೆಹಲಿಗೆ ಭೇಟಿನೀಡುವಂತೆ ಕುಟುಂಬದ ಸದಸ್ಯರಿಗೆ ಆಹ್ವಾನ ನೀಡಿದ್ದರು. ಅದರಂತೆ ಏ.2ರಂದು 12 ಜನರ ನಿಯೋಗ ದೆಹಲಿಗೆ ತೆರಳಿ ರಕ್ಷಣಾ ಸಚಿವರನ್ನು ಭೇಟಿ ಮಾಡಿ, ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಿತ್ತು. ಸಚಿವರ ಒಪ್ಪಿಗೆ ಮೇರೆಗೆ ಐಎನ್‌ಎಸ್ ರಕ್ಷಕ್ ಹಡಗಿನಲ್ಲಿ ಶೋಧ ಕಾರ್ಯಾಚರಣೆಗೆ ತೆರಳಾಗಿತ್ತು ಎಂದು ರಘುಪತಿ ಭಟ್ ಮಾಹಿತಿ ನೀಡಿದರು.