ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಮೊತ್ತ ಹೆಚ್ಚಳ : ಸಚಿವ ಪ್ರಮೋದ್ ಮಧ್ವರಾಜ್
ಮ0ಗಳೂರು : ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಅಡಿ ವಿತರಿಸಲಾಗುವ ಪರಿಹಾರ ಮೊತ್ತವನ್ನು ರಾಜ್ಯ ಸರಕಾರ ಹೆಚ್ಚಳ ಮಾಡಿದೆ.
ಮಂಗಳವಾರ ಬೆಂಗಳೂರಿನಲ್ಲಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಹೊಸದಾಗಿ ಪುನರ್ ರಚನೆಯಾದ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಈ ಹಿಂದೆ ನೀಡಲಾಗುತ್ತಿದ್ದ ಪರಿಹಾರ ಮೊತ್ತವನ್ನು ಈ ಕೆಳಗಿನಂತೆ ಪರಿಷ್ಕರಿಸಲು ತೀರ್ಮಾನಿಸಲಾಯಿತು.
ಮರಣ ಪ್ರಕರಣಗಳಿಗೆ ರೂ.2 ಲಕ್ಷದಿಂದ ರೂ.3 ಲಕ್ಷಕ್ಕೆ, ಸಮುದ್ರದಲ್ಲಿ ಮರಣಹೊಂದಿದ ಪ್ರಕರಣಗಳಿಗೆ ರೂ.5 ಲಕ್ಷದಿಂದ ರೂ.6 ಲಕ್ಷಕ್ಕೆ ಏರಿಸಲು, ಬಲೆ ಮತ್ತು ಆಸ್ತಿ ಹಾನಿ, ದೋಣಿ ಹಾನಿ ಪ್ರಕರಣಗಳಿಗೆ ರೂ.50,000/-ದಿಂದ ರೂ.1 ಲಕ್ಷಕ್ಕೆ ಏರಿಸಲು ಹಾಗೂ ವೈದ್ಯಕೀಯ ವೆಚ್ಚವನ್ನು ರೂ.50,000/-ದಿಂದ ರೂ.1 ಲಕ್ಷಕ್ಕೆ, ವಿಮೆ ಪರಿಹಾರ ಪಡೆಯದ ಪ್ರಕರಣಗಳಿಗೆ ರೂ.80,000/-ದಿಂದ ರೂ.1.20 ಲಕ್ಷಕ್ಕೆ ಏರಿಸಲು ತೀರ್ಮಾನಿಸಲಾಯಿತು.
ಸಮುದ್ರದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪ್ರಾಣ ರಕ್ಷಣೆ ಮಾಡಿದ ಮೀನುಗಾರರಿಗೆ ಹಾಗೂ ಪ್ರಾಣ ರಕ್ಷಣೆ ಮಾಡಿದ ದೋಣಿಯ ತಾಂಡೇಲರಿಗೆ ಶೌರ್ಯ ಪ್ರಶಸ್ತಿಯ ಜೊತೆಗೆ ರೂ.50,000/- ಪುರಸ್ಕಾರ ನೀಡಿ ಗೌರವಿಸಲು ಸಭೆಯು ತೀರ್ಮಾನಿಸಿತು.
ಅದೇ ರೀತಿ ಯಾಂತ್ರೀಕೃತ ದೋಣಿ ಮಾಲೀಕರು ಪಡೆಯುತ್ತಿರುವ ಡೀಸೆಲ್ ಮೇಲಿನ ಮಾರಾಟ ಕರ ಮರುಪಾವತಿ ಸಹಾಯಧನದಲ್ಲಿ 1.5% ಬದಲಿಗೆ 1% ಮೊತ್ತವನ್ನು ಮಾತ್ರ ಸಂಕಷ್ಟ ಪರಿಹಾರ ನಿಧಿಗೆ ಪಾವತಿಸಲು ಸಭೆಯು ತೀರ್ಮಾನಿಸಿತು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಅಪರ ಕಾರ್ಯದರ್ಶಿ ಲೀಲಾವತಿ, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನುಗಾರಿಕೆ ಮಹಾ ಮಂಡಳಿಯ ಅಧ್ಯಕ್ಷ ಗಣಪತಿ ಮಾಂಗ್ರೆ, ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾ ಮಂಡಳಿಯ ಅಧ್ಯಕ್ಷ ಮಾದೇಗೌಡ, ಕುಂದಾಪುರದ ಎಸ್.ಮದನ್ ಕುಮಾರ್, ಮಂಗಳೂರಿನ ಚೇತನ್ ಬೇಂಗ್ರೆ, ಕಾರವಾರದ ಕೆ.ಟಿ.ತಾಂಡೇಲ, ಕಲಬುರಗಿಯ ರಮೇಶ್ ನಾಟಿಕಾರ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಮೀನುಗಾರಿಕೆ ನಿರ್ದೇಶಕರಾದ ಹೆಚ್.ಎಸ್.ವೀರಪ್ಪಗೌಡ ಹಾಜರಿದ್ದರು.