ಮೀನು ಮಾರಾಟ ಫೆಡರೇಶನ್ ಡಿಸೇಲ್ ಅವ್ಯವಹಾರದ ಸಿಒಡಿ ತನಿಖೆ ತೀವ್ರಗೊಳಿಸಿ : ವಿಶ್ವಾಸ್ ಅಮೀನ್
ಉಡುಪಿ: ದಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿ ಮಂಗಳೂರು ಇದರಲ್ಲಿ ಡಿಸೇಲ್ ಬಂಕುಗಳಲ್ಲಿ ಅವ್ಯವಹಾರ ನಡೆದಿರುವ ಕುರಿತು ನಡೆಯುತ್ತಿರುವ ಸಿಒಡಿ ತನಿಖೆಯ ರಾಜಕೀಯ ಪ್ರಭಾವಗಳಿಂದ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೆಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣ ನೇತೃತ್ವದ ದಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿ ಮಂಗಳೂರು ಇದರ ಡಿಸೇಲ್ ಬಂಕ್ ಗಳ ಮೂಲಕ ಅವ್ಯವಹಾರ ನಡೆದಿದ್ದು ಸರಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು, ಮುಗ್ದ ಮೀನುಗಾರರಿಗೆ ಮತ್ತು ಮೊಗವೀರ ಸಮಾಜದವರಿಗೆ ಮೋಸವಾಗಿದೆ.
ಮೀನುಗಾರರ ಜೀವನಾಭಿವೃದ್ಧಿ ಹಾಗೂ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರವು ಮೀನುಗಾರಿಕಾ ಬೋಟುಗಳಿಗೆ ಮಾರಾಟಕರ ರಹಿತ ಡಿಸೇಲ್ ಪೊರೈಕೆ ಮಾಡುತ್ತಿದ್ದು, ದಕ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಾಂತ್ರಿಕೃತ ದೋಣಿಗಳಿಗೆ ಮಂಡಳಿಯ ಮೂಲಕ ರೀಯಾಯತಿ ದರದಲ್ಲಿ ದೋಣಿಗಳಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಂದ ಬರುತ್ತಿದ್ದ ದೂರಿನನ್ವಯ 2014-15ರಲ್ಲಿ ಮೀನುಗಾರಿಕಾ ಸಹಯಾಕ ನಿರ್ದೇಶಕಿ ಅಂಜನಾದೇವಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದು ಅದರಂತೆ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ವಿಸ್ತೃತ ತನಿಖೆಗಾಗಿ ಸಿಒಡಿಗೆ ವಹಿಸಲು ಸರಕಾರ ಆದೇಶ ನೀಡಿತ್ತು. ಆದರೆ ಫೆಡರೇಶನ್ ಅಧ್ಯಕ್ಷರ ತಮ್ಮ ರಾಜಕೀಯ ಪ್ರಭಾವಗಳನ್ನು ಬಳಸಿ ತನಿಖೆಯನ್ನು ಈಗ ಮಂದಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಈಗಿರುವ ಪದಾಧಿಕಾರಿಗಳು ಈ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೀನ್ ಆರೋಪಿಸಿದ್ದಾರೆ.
ಕರ್ನಾಟಕ ಸರಕಾರ ಈ ಅವ್ಯವಹಾರದ ಸಿಒಡಿ ತನಿಖೆಯನ್ನು ಚುರುಕುಗೊಳಿಸಬೇಕು ಅಲ್ಲದೆ ಈಗಿರುವ ತನಿಖಾ ತಂಡವನ್ನು ಬದಲಿಸಿ ಹೊಸ ತನಿಖಾ ತಂಡವನ್ನು ನೇಮಿಸಬೇಕು. ಮಹಾಮಂಡಳಿಯ ಎಲ್ಲಾ ಪದಾಧಿಕಾರಿಗಳ ವಿಸ್ತಾರವಾದ ವಿಚಾರಣೆ ನಡೆಯಬೇಕು ಮಹಾಮಂಡಳಿಯ ಕಾರ್ಯಕಾರಿ ಸಮಿತಿಯನ್ನು ತಕ್ಷಣಕ್ಕೆ ಬರ್ಕಾಸ್ತುಗೊಳಿಸಿ ಹೊಸ ಸಮಿತಿ ನೇಮಿಸಬೇಕು. ಮೀನುಗಾರರ ಹಕ್ಕಿಗೆ ಬಂದಿದ್ದ ಡಿಸೇಲ್ ವಿತರಣೆಯಲ್ಲಿ ನಡೆಸಲಾದ ಎಲ್ಲಾ ಅವ್ಯವಹಾರಗಳಿಂದ ಉಂಟಾದ ನಷ್ಟದ ಮೊಬಲಗನ್ನು ತಕ್ಷಣಕ್ಕೆ ಹಿಂದೆ ಪಡೆದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ದ ಜವಾಬ್ದಾರಿತರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಕೂಲಂಕುಷವಾಗಿ ವಿಚಾರಣೆಯಾಗಬೇಕು. ರಾಜಕೀಯ ಪ್ರಭಾವಗಳಿಗೆ ಎಡೆಮಾಡದೆ ನಿಷ್ಪಕ್ಷಪಾತ ನಿಷ್ಠಾವಂತ ತನಿಖೆ ನಡೆಸಬೇಕು. ಅವ್ಯವಾಹಾರದ ಬಗ್ಗೆ ಕುರುಡು ಭಾವ ಹೊಂದಿದ್ದ ಸಿಬಂದಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಅಮೀನ್ ಸರಕಾರವನ್ನು ಆಗ್ರಹಿಸಿದ್ದಾರೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಯತೀಶ್ ಕರ್ಕೇರಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.