ಮೀನು ವ್ಯಾಪಾರಿಯ ಕೊಲೆ ಯತ್ನ – ನಾಲ್ವರು ಆರೋಪಿಗಳನ್ನು ಬಂಧಿಸಿದ ಕುಂದಾಪುರ ಪೊಲೀಸರು
ಕುಂದಾಪುರ: ಮೀನು ವ್ಯವಹಾರದಲ್ಲಿನ ವಿಚಾರಕ್ಕೆ ಸಂಬಂಧಿಸಿದಂತೆ ಮರವಂತೆಯ ಮೀನು ವ್ಯಾಪಾರಿಯೊರ್ವರ ಮೇಲೆ ಕೊಲೆ ಯತ್ನ ನಡೆಸಲು ಮಹಾರಾಷ್ಟ್ರದ ರತ್ನಗಿರಿಯಿಂದ ಮಾರಕಾಯುಧಗಳೊಂದಿಗೆ ಬಂದಿದ್ದ ನಾಲ್ವರು ಆರೋಪಿಗಳನ್ನು ಕುಂದಾಪುರ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ನೇತೃತ್ವದ ತಂಡ ಬಂಧಿಸಿದ್ದಾರೆ.
ಬಂಧಿತರನ್ನು ಮಹಾರಾಷ್ಟ್ರದ ರತ್ನಗಿರಿಯ ನಿವಾಸಿ ದಾನೀಶ್ ಪಾಟೀಲ್(34), ಅಝೀಂ ಕಾಜಿ(39, ಮುಖಾದ್ದರ್(34) ಹಾಗೂ ಪ್ರಸಾದ್(47) ಎಂದು ಗುರುತಿಸಲಾಗಿದೆ.
ಕಳೆದ 2 ವರ್ಷಗಳಿಂದ ಮರವಂತೆ ನಿವಾಸಿ ಮೊಹಮ್ಮದ್ ಶಾಖೀರ್ ಹಾಗೂ ರತ್ನಗಿರಿಯ ದಾನೀಶ್ ಪಾಟೀಲ್ ಮೀನು ವ್ಯವಹಾರ ನಡೆಸುತ್ತಿದ್ದರು. ಈ ವ್ಯವಹಾರಕ್ಕೆ ಶಾಖೀರ್ಗೆ ಕರೆ ಮಾಡಿದ್ದ ದಾನಿಶ್ 50 ಲಕ್ಷ ಬಾಕಿ ಇರುವುದಾಗಿ ತಿಳಿಸಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಖೀರ್ ನಾನು ಪಡೆದ ಮೀನುಗಳಿಗಿಂತಲೂ ಹೆಚ್ಚು ಹಣ ನೀಡಿರುವುದಾಗಿ ತಿಳಿಸಿ ಕರೆಯನ್ನು ಕರೆ ಕಟ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡಿದ್ದ ದಾನೀಶ್ ಪದೆ ಪದೆ ಕರೆ ಮಾಡಿ ಹಣ ಕೊಡವಂತೆ ಹೇಳುತ್ತಿದ್ದ. ಶಾಖೀರ್ ತಂದೆಗೂ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸಿದ್ದ. ಹಣ ನೀಡದೆ ಇದ್ದರೆ ಕುಂದಾಪುರಕ್ಕೆ ಬಂದು ನೋಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿರುವುದಾಗಿ ಶಾಖೀರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಶಾಖೀರ್ಗೆ ಪಾಠ ಕಲಿಸಲು ಯೋಜನೆ ರೂಪಿಸಿದ್ದ ದಾನೀಶ್ ಪಾಟೀಲ್ ಶುಕ್ರವಾರ ಬೆಳಿಗ್ಗೆ ತನ್ನ 3 ಸ್ನೇಹಿತರ ಜತೆ ಕುಂದಾಪುರಕ್ಕೆ ಬಂದಿದ್ದ. ನಗರದ ಹೊರವಲಯದ ಹಂಗಳೂರು ಎಂಬಲ್ಲಿ ಖಾಸಗಿ ವಸತಿ ಗ್ರಹದಲ್ಲಿ ಕೊಠಡಿ ಪಡೆದುಕೊಂಡಿದ್ದ ಆರೋಪಿಗಳು ಹಂಗಳೂರಿನಲ್ಲಿ ಇದ್ದ ಶಾಖೀರ್ ಅವರ ಪ್ಲಾಟ್ಗೆ ಹೋಗಿ ಹಣ ಕೊಡದಿದ್ದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ಲೆಕ್ಕಾಚಾರಕ್ಕಾಗಿ ಲಾಡ್ಜ್ಗೆ ಬರುವಂತೆ ಬೆದರಿಸಿ ವಾಪಾಸಾಗಿದ್ದಾರೆ. ಸಂಜೆ 6.30ರ ವೇಳೆಗೆ ಸ್ನೇಹಿತ ಸುಹೈಲ್ನೊಂದಿಗೆ ಕಾರಿನಲ್ಲಿ ಕುಂದಾಪುರದತ್ತ ಹೋಗುತ್ತಿದ್ದ ಶಾಖೀರ್ನನ್ನು ಹಂಗಳೂರಿನ ಭಾಷಾ ಟ್ರಾನ್ಸ್ಪೋರ್ಟ್ ಬಳಿಯಲ್ಲಿ ಅಡ್ಡ ಹಾಕಿದ್ದ ಆರೋಪಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಲು ಮುಂದಾಗುತ್ತಿದಂತೆ ಅವರಿಂದ ತಪ್ಪಿಸಿಕೊಂಡಿದ್ದ ಶಾಖೀರ್, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಪೊಲೀಸ್ ತಂಡ ರಚಿಸಿ ಆರೋಪಿಗಳ ಬಂಧನಕ್ಕಾಗಿ ಕಾಯಾಚರಣೆ ನಡೆಸಿದ್ದಾರೆ. ಆರೋಪಿಗಳ ಕಾರನ್ನು ಬೆಂಬತ್ತಿದ ಪೊಲೀಸರು ಕೋಟೇಶ್ವರದ ಫ್ಲೈಓವರ್ ಬಳಿ ಕಾರನ್ನು ತಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾದ ಎರಡು ದೊಡ್ಡ ಚೂರಿ, ಒಂದು ಬಟನ್ ಚಾಕು, ಸ್ಕ್ರೂಡ್ರೈವರ್ ಹಾಗೂ ಮಹಾರಾಷ್ಟ್ರ ನೋಂದಣಿಯ ಕ್ಸೈಲೋ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರದ ಉಪ ಎಎಸ್ಪಿ ಹರಿರಾಂಶಂಕರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಎಸ್‍ಐ ಸುಧಾಕರ್, ಹೆಡ್ ಕಾನ್ಸ್‍ಟೇಬಲ್‍ಗಳಾದ ಮಂಜು, ಸಂತೋಷ್, ಜೋಸೇಫ್, ಚಂದ್ರ ಶೆಟ್ಡಿ, ರಾಜು ನಾೈಕ್, ರಾಘವೇಂದ್ರ, ಕಾನ್ಸ್‍ಟೇಬಲ್‍ಗಳಾದ ಅಶ್ವಿನ್, ಶಾಂತಾರಾಮ್, ರಾಮ ಗೌಡ, ಮಾರುತಿ, ರವಿ, ಶಂಕರ್, ರಾಘವೇಂದ್ರ ಮೊಗೇರ, ಸಚಿನ್, ಪ್ರಸನ್ನ ಮೊದಲಾದವರು ಕಾರ್ಯಾಚರಣೆಯಲ್ಲಿ ಇದ್ದರು.