ಮುಂದಿನ ವಾರದಿಂದ ಶಾಲಾ ಮಕ್ಕಳಿಗೆ ಬ್ಲೂವೇಲ್ ಗೇಮ್ ಕುರಿತು ಮಾಹಿತಿ; ಎಸ್ಪಿ ಸಂಜೀವ್ ಪಾಟೀಲ್
ಚಿತ್ರಗಳು : ಪ್ರಸನ್ನ ಕೊಡವೂರು
ಉಡುಪಿ: ಜಗತ್ತಿನ ಪೋಷಕರ ನಿದ್ದೆಗೆಡಿಸಿ ಬ್ಲೂವೇಲ್ ಗೇಮ್ ಕುರಿತು ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮುಂದಿನ ವಾರದಿಂದಲೇ ಆರಂಭಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಹೇಳಿದ್ದಾರೆ.
ಅವರು ಶನಿವಾರ ತಮ್ಮ 4 ನೇ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ಪೋಷಕರೊಬ್ಬರ ಫೋನ್ ಕರೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಈಗಾಗಲೇ ಇಲಾಖೆ ಈ ಆಟದ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದು ಇದು ವರೆಗೆ ಜಿಲ್ಲೆಯಲ್ಲಿ ಅಂತಹ ಪ್ರಕರಣ ವರದಿಯಾಗಿಲ್ಲ ಆದರೂ ವರದಿಯಾದ ಮೇಲೆ ಪಶ್ಚಾತ್ತಾಪಪಡುವ ಬದಲು ಆರಂಭದಲ್ಲಿಯೇ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಶಾಲೆಗೆ ಬಿತ್ತಿ ಪತ್ರಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಶಾಲೆಯ ಶಿಕ್ಷಕರು ಕಡ್ಡಾಯವಾಗಿ ಮಕ್ಕಳಿಗೆ ಈ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದರು.
ನಾಲ್ಕನೇ ದಿನದ ಫೋನ್ ಇನ್ ಕಾರ್ಯಕ್ರದಲ್ಲಿ ಒಟ್ಟು 26 ಕರೆಗಳು ಬಂದಿದ್ದು, ನಗರದ ವಿವಿಧ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಆಗುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆ ಉಂಟಾಗುತ್ತಿರುವ ಕುರಿತು ಹೆಚ್ಚಿನ ಕರೆಗಳು ಬಂದವು.
ಅಂಬಲಪಾಡಿ ಜಂಕ್ಷನ್ ಬಳಿ ಸಿಟಿ ಬಸ್ಸುಗಳು ಸರ್ವಿಸ್ ರಸ್ತೆಯ ಮೂಲಕ ಬಂದು ಪ್ರಯಾಣಿಕರನ್ನು ಇಳಿಸುವ ಬದಲು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಇಳಿಸುತ್ತಾರೆ. ಬಸ್ಸುಗಳು ಬರಬೇಕಾದ ಸರ್ವಿಸ್ ರಸ್ತೆಯಲ್ಲಿ ಖಾಸಗಿ ವಾಹನಗಳು ಪಾರ್ಕ್ ಮಾಡುವುದರಿಂದ ಬಸ್ಸಗಳು ಸರ್ವಿಸ್ ರಸ್ತೆಯಲ್ಲಿ ಬರಲು ಸಾಧ್ಯವಾಗುತ್ತಿಲ್ಲ ಎಂದರು ಅದಕ್ಕೆ ಎಸ್ಪಿ ಉತ್ತರಿಸಿ ಇದರ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದರು.
ಸಿಂಡೀಕೇಟ್ ಸರ್ಕಲ್ ಬಳಿಯೀಂದ ಬಿಗ್ ಬಜಾರ್ ವರೆಗೂ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಪಾದಾಚಾರಿಗಳು ನಡೆದಾಡುವುದು ಕಷ್ಟವಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಯವರು ಕೂಡಲೇ ಪಾರ್ಕಿಂಗ್ ತೆರೆವು ನೆಡಸಲಾಗುವುದು ಎಂದರು.
ಕೊಡವೂರಿನಲ್ಲಿ ರಸ್ತೆಯಲ್ಲಿಯೇ ಸಂಜೆ ಹೊತ್ತು ಕುಡಿದು ಸಾರ್ವಜನಿಕರಿಗೆ ತೊಂದರೆಯಾಗುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜೀವ್ ಪಾಟೀಲ್ ಸಂಬಂಧಪಟ್ಟ ಪೋಲಿಸ್ ಠಾಣೆಯ ಸಿಬಂಧಿಗಳಿಂದ ಸೂಕ್ತ ಕ್ರಮ ತೆಗೆದುಕೊಳ್ಳವುದಾಗಿ ಹೇಳಿದರು.
ಕುಂದಾಪುರದ ಉಳ್ಳೂರು ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಯಾವುದೇ ರೀತಿಯ ಪರವಾನಿಗೆ ಇಲ್ಲ ಈ ಕುರಿತು ಕ್ರಮ ಕೈಗೊಳ್ಳೂವಂತೆ ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಈ ಕುರಿತು ಗಣಿ ಇಲಾಖೆ ಹಾಗೂ ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಕೋಟ, ಬ್ರಹ್ಮಾವರ ಪ್ರದೇಶದಲ್ಲಿ ಇನ್ನೂ ಕೂಡ ಮಟ್ಕಾ ಬರೆಯುತ್ತಿದ್ದು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದರು. ಕುಂದಾಪುರ ತಾಲೂಕು ಜನ್ನಾಡಿಯಲ್ಲಿ ಶಾಲೆಯ ಪಕ್ಕದಲ್ಲಿಯೇ ಕಲ್ಲು ಕೋರೆಗಳು ಮಕ್ಕಳಿಗೆ ಆಪಾಯವಾಗುವ ಸಂಭವಿದೆ. ಕೂಡಲೇ ಕೋರೆಗಳಿಗೆ ಬೇಲಿ ಹಾಕುವಂತೆ ಸಾರ್ವಜನಿಕರೊಬ್ಬರು ವಿನಂತಿಸಿದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಅಲ್ಲದೆ ಅಕ್ರಮ ಸಾರಾಯಿ ಮಾರಾಟ, ಗಾಂಜಾ ಮಾರಾಟ, ಟ್ರಾಫಿಕ್ ಸಮಸ್ಯೆ, ಸಮಯಕ್ಕೆ ಸರಿಯಾಗಿ ಬಸ್ಸುಗಳು ಬಾರದೇ ಇರುವ ವಿಚಾರಕ್ಕೆ ಸಂಬಂಧಿಸಿ ಸಾರ್ವಜನಿಕರು ಕರೆಗಳನ್ನು ಮಾಡಿದರು.
ಬಳಿಕ ಮಾತನಾಡಿದ ಸಂಜೀವ್ ಪಾಟೀಲ್ ಅವರು ಕಳೆದ ವಾರದ ಫೋನ್ ಕರೆಯ ಬಳಿಕ ಒಟ್ಟು 14 ಮಟ್ಕಾ ಪ್ರಕರಣಗಳು ದಾಖಲಾಗಿದ್ದು 17 ಮಂದಿ ಬಂಧಿಸಲಾಗಿದೆ. 3 ಜೂಜಾಟ ಪ್ರಕರಣಗಳಲ್ಲಿ 18 ಮಂದಿಯನ್ನು ಬಂಧಿಸಲಾಗಿದೆ ಅಲ್ಲದೆ ಅಕ್ರಮ ಸಾರಾಯಿ ಮಾರಾಟಕ್ಕೆ ಸಂಬಂಧಿಸಿ 1 ಪ್ರಕರಣ ದಾಖಲಾಗಿದ್ದು 1 ಬಂಧನವಾಗಿದೆ ಎಂದರು.
ಕಳೆದ ದಿನಗಳಲ್ಲಿ ಕೆಲವೊಂದು ವ್ಯಕ್ತಿಗಳು ಮಧ್ಯಾಹ್ನದ ಸಮಯದಲ್ಲಿ ಕರೆ ಮಾಡಿ ತಾವು ಬ್ಯಾಂಕಿನವರೆಂದು ಹೇಳಿ ಹಿಂದಿಯಲ್ಲಿ ಮಾತನಾಡಿ ಬ್ಯಾಂಕಿನ ಎಟಿಎಮ್ ಕಾರ್ಡಿನ ಮಾಹಿತಿ ಕೇಳುವ ಕುರಿತು ದೂರುಗಳು ಬರುತ್ತಿದ್ದು ಸಾರ್ವಜನಿಕರು ಎಚ್ಚರವಾಗಿರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ತಮ್ಮ ಎಟಿಎಮ್ ಅಥವಾ ಬ್ಯಾಂಕಿಗೆ ಸಂಬಂಧಿಸಿದ ವಿವರಗಳನ್ನು ಫೋನಿನಲ್ಲಿ ಯಾರಿಗೂ ನೀಡಬಾರದು ಅಲ್ಲದೆ ಇದಕ್ಕೆ ಸಂಬಂಧಿಸಿ ಯಾವುದೇ ಬ್ಯಾಂಕಿನವರು ಫೋನ್ ಮೂಲಕ ಮಾಹಿತಿ ಪಡೆದುಕೊಳ್ಳುವುದಿಲ್ಲ ಆದ್ದರಿಂದ ಯಾವುದೇ ಅಂತಹ ಕರೆ ಬಂದರೂ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.