ಮುಕ್ಕದಲ್ಲಿ ಬಾವಾ ಚುರುಕಿನ ಪ್ರಚಾರ, ಎ.23 ರಂದು ನಾಮಪತ್ರ ಸಲ್ಲಿಕೆ
ಮಂಗಳೂರು: ಕಳೆದ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿರುವ ಚುನಾವಣಾ ಪ್ರಣಾಳಿಕೆಯ ಬಹುತೇಕ ಯೋಜನೆಗಳನ್ನು ಸಿದ್ಧರಾಮಯ್ಯ ನೇತೃತ್ವದ ಸರಕಾರ ಅನುಷ್ಠಾನಗೊಳಿಸಿದೆ. ಮಾತ್ರವಲ್ಲದೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಇಳಿಯುವ ಅವಕಾಶವನ್ನು ಪಕ್ಷ ನೀಡಿದೆ. ಈ ಹಿನ್ನೆಲೆಯಲ್ಲಿ ತಾನು ಏ. ೨೩ರಂದು ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎ. ಮೊಹಿಯುದ್ದೀನ್ ಬಾವಾ ಹೇಳಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಚಟುವಟಿಕೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾವಾ, ಎ.೨೩ರಂದು ನಾಮಪತ್ರ ಸಲ್ಲಿಸಲಿದ್ದೇನೆ.ಬೆಂಬಲಿಗರೊಂದಿಗೆ ಸೇರಿ ಮೆರವಣಿಗೆಯಲ್ಲಿ ಚುನಾವಣಾ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬೆಮಬಲಿಗರು,ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಮೊದಲ ದಿನ ಎನ್ಐಟಿಕೆ, ಮುಕ್ಕದಲ್ಲಿ ಪಾದಯಾತ್ರೆ ನಡೆಸಿ ಮತದಾರರಲ್ಲಿ ಮತಯಾಚಿಸಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಕೆಲಸ ಮಾಡಿದ್ದೇನೆ. ಪ್ರತ್ಯಕ್ಷವಾಗಿ ನಿಮಗೆ ನನ್ನ ಕೆಲಸ ಕಾಣುತ್ತಿದೆ. ಬಡಾವಣೆಗಳ ರಸ್ತೆ ಶಾಶ್ವತವಾಗಿ ಉಳಿಯಲು ಕಾಂಕ್ರಿಟೀಕರಣ ಮಾಡಲಾಗಿದೆ. ಅಭಿವೃದ್ಧಿ ನೋಡಿ ಮತಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮನೆ ಮನೆಗೆ ತೆರಳಿ ನೇರವಾಗಿ ಮತದಾರರನ್ನು ಭೇಟಿ ಮಾಡುತ್ತಿದ್ದೇನೆ. ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಮೂಲ ಸೌಕರ್ಯಗಳ ಬಗ್ಗೆ ಮತದಾರರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಮುಂದಿನ ಬಾರಿಯೂ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮಂಗಳೂರು ಉತ್ತರ ಸೇರಿದಂತೆ ಕರಾವಳಿಯಲ್ಲಿ ಕಾಂಗ್ರೆಸ್ ಎಂಟು ಸ್ಥಾನದಲ್ಲಿಯೂ ಜಯ ಬೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಮುಖಂಡರಾದ ಕೆ.ಸದಾಶಿವ ಶೆಟ್ಟಿ, ಅಣ್ಣಯ್ಯ ಅಂಚನ್, ಅಕ್ಬರ್ ಆಲಿ ಮುಕ್ಕ,ಪುರುಷೋತ್ತಮ್ ಮುಕ್ಕ, ಬಶೀರ್ ಅಹ್ಮದ್ ಬೈಕಂಪಾಡಿ, ಗೋವರ್ದನ್ ಶೆಟ್ಟಿಗಾರ್, ವಿಜಯ್ ಆಚಾರ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.