Home Mangalorean News Kannada News ಮುಖ್ಯಮಂತ್ರಿಗಳ ಭರವಸೆಯಂತೆ ಮೂಡಬಿದಿರೆ ಶಿಕ್ಷಕಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ

ಮುಖ್ಯಮಂತ್ರಿಗಳ ಭರವಸೆಯಂತೆ ಮೂಡಬಿದಿರೆ ಶಿಕ್ಷಕಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ

Spread the love

ಮುಖ್ಯಮಂತ್ರಿಗಳ ಭರವಸೆಯಂತೆ ಮೂಡಬಿದಿರೆ ಶಿಕ್ಷಕಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ

ಮಂಗಳೂರು : ಮೂಡುಬಿದಿರೆ ತಾಲೂಕು, ಶಿರ್ತಾಡಿ ಗ್ರಾಮದ ಜವಹರ್‍ಲಾಲ್ ನೆಹರು ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ ಪದ್ಮಾಕ್ಷಿ ಎನ್ ಇವರ ಆರೋಗ್ಯ ಚಿಕಿತ್ಸೆಯನ್ನು ಸರಕಾರವು  ಮುಖ್ಯಮಂತ್ರಿಗಳ ಸೂಚನೆಯಂತೆ ನೀಡಿದೆ.

ಸೆಪ್ಟೆಂಬರ್ 28 ರಂದು ಕೆಮ್ಮು, ಮೈಕೈನೋವು ಮತ್ತು ಸಣ್ಣ ಜ್ವರದಿಂದ ಬಳಲುತ್ತಿದ್ದರು, ಕೆಮ್ಮಿದಾಗ ಕಫದಲ್ಲಿ ರಕ್ತ ಬಂದಿದ್ದರಿಂದ ಸೆಪ್ಟೆಂಬರ್ 29 ರಂದು ಮೂಡಬಿದ್ರೆಯ ಸ್ಥಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿರುತ್ತಾರೆ. ಇದಕ್ಕೆ ಮುಂಚೆ 8-10 ದಿನದಿಂದ ಮೈಕೈನೋವು ಹಾಗೂ ತುಂಬಾ ಸುಸ್ತು ಇರುವುದಾಗಿ ತಿಳಿಸಿರುತ್ತಾರೆ. ಸೆಪ್ಟೆಂಬರ್ 29 ರಂದು ತಪಾಸಣೆ ಮಾಡಿದ ಸಂದರ್ಭದಲ್ಲಿ   ವೈದ್ಯರು ಕೋವಿಡ್ ಸೋಂಕನ್ನು ಸಂಶಯಿಸಿ ತಕ್ಷಣ ಇಂಡಿಯಾನಾ ಆಸ್ಪತ್ರೆಗೆ ದಾಖಲಿಸಲು(ರೆಫರ್) ಸೂಚಿಸುತ್ತಾರೆ. ಇಂಡಿಯಾನಾ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಅವರಿಗೆ ಐ.ಸಿ.ಯು ನಲ್ಲಿ 16 ದಿನಗಳ ಕಾಲ ಕೋವಿಡ್ ಚಿಕಿತ್ಸೆಯನ್ನು ನೀಡಿರುತ್ತಾರೆ.

ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತಿ ಶಶಿಕಾಂತ್ ವೈ ಮತ್ತು ಮಗ ಅನೈ 11 ವರ್ಷ ಇವರನ್ನು ಅಕ್ಟೋಬರ್ 2 ರಂದು ಕೋವಿಡ್ ಪರೀಕ್ಷೆ ಮಾಡಿದಾಗ ಕೋವಿಡ್ ಖಚಿತ ವರದಿ ಬಂದಿದ್ದರಿಂದ ಅವರಿಗೆ ಹೋಮ್ ಐಸೋಲೆಶನ್‍ನಲ್ಲಿ ಚಿಕಿತ್ಸೆ ನೀಡಿ ಸಂಪೂರ್ಣ ಗುಣಮುಖರಾಗಿರುತ್ತಾರೆ.

ಪದ್ಮಾಕ್ಷಿ ಎನ್ ಇವರ ಗಂಟಲು ದ್ರವ ಪರೀಕ್ಷೆಯನ್ನು ಅಕ್ಟೋಬರ್ 13 ರಂದು ನಡೆಸಲಾಗಿದ್ದು ನೆಗೆಟಿವ್ ವರದಿಯ ಬಂದಿರುತ್ತದೆ. ಆದ್ದರಿಂದ ಅವರನ್ನು ಕೋವಿಡ್ ವಿಭಾಗದಿಂದ ಜನರಲ್ ವಿಭಾಗಕ್ಕೆ ಸ್ಥಳಾಂತರಿಸಲಾಗಿದ್ದು ಶ್ವಾಸಕೋಶದ ತೊಂದರೆ ಇರುವುದರಿಂದ ಆಕ್ಸಿಜನ್ ಥೆರಪಿಯನ್ನು ನೀಡಲಾಗುತ್ತಿದೆ. ಇವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವು ಭರಿಸಲು ಕ್ರಮಕೈಗೊಳ್ಳಲಾಗಿದೆ.

ಅಕ್ಟೋಬರ್ 14 ರಂದು ಮುಖ್ಯಮಂತ್ರಿಗಳು ನೇರವಾಗಿ ಜಿಲ್ಲಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸರ್ಕಾರವು ಇವರ ಚಿಕಿತ್ಸೆಯ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಹಾಗೂ ಎಲ್ಲಾ ಉನ್ನತ ಮಟ್ಟದ ಚಿಕಿತ್ಸೆಯನ್ನು ನೀಡಲು ಸೂಚಿಸಿರುತ್ತಾರೆ. ಅದರಂತೆ ಜಿಲ್ಲಾಧಿಕಾರಿಗಳು ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಆಸ್ಪತ್ರೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಎಲ್ಲಾ ರೀತಿಯ ಉತ್ತಮ ಚಿಕಿತ್ಸೆ ನೀಡುವಂತೆ ಚಿಕಿತ್ಸೆಗೆ ತಗಲುವ ಖರ್ಚು ವೆಚ್ಚವನ್ನು ಸರ್ಕಾರ ಭರಿಸುವುದಾಗಿ ತಿಳಿಸಿದ್ದಾರೆ. ಹಾಗೂ ರೋಗಿಯ ಮನೆಯವರಿಂದ ಯಾವುದೇ ವೆಚ್ಚವನ್ನು ಸ್ವೀಕರಿಸದಂತೆ ಸೂಚಿಸಿದ್ದಾರೆ.

ಪದ್ಮಾಕ್ಷಿ ಎನ್ ಅವರ ಮಗಳು ಐಶ್ವರ್ಯರನ್ನು ಜಿಲ್ಲಾಧಿಕಾರಿಯವರು ದೂರವಾಣಿಯಲ್ಲಿ ಸಂಪರ್ಕಿಸಿ ಎಲ್ಲಾ ರೀತಿಯ ಉನ್ನತ ಚಿಕಿತ್ಸೆಯನ್ನು ಇಂಡಿಯಾನಾ ಆಸ್ಪತ್ರೆಯಲ್ಲಿ ನೀಡುವುದಾಗಿ ಹಾಗೂ ಇದರ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ತಿಳಿಸುತ್ತಾ ಸಾಂತ್ವನವನ್ನು ಮಾಡಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version