ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಫಾರ್ಮೆಸಿ ಡೆ ಕ್ವಲೈಟ್ ಸರ್ಟಿಫಿಕೇಶನ್ ಗೌರವ

Spread the love

ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಫಾರ್ಮೆಸಿ ಡೆ ಕ್ವಲೈಟ್ ಸರ್ಟಿಫಿಕೇಶನ್ ಗೌರವ

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಗುಣಮಟ್ಟದ ಆರೋಗ್ಯ ಸೇವೆಗೆ ಹೆಸರಾಗಿದ್ದು, ಇದೀಗ “ಫಾರ್ಮೆಸಿ ಡೆ ಕ್ವಲೈಟ್ ಸರ್ಟಿಫಿಕೇಶನ್” ಗೌರವಕ್ಕೆ ಪಾತ್ರವಾಗುವುದರೊಂದಿಗೆ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಲಭಿಸಿದಂತಾಗಿದೆ. ಫಾರ್ಮಸಿ ಕಾರ್ಯಾಚರಣೆಯಲ್ಲಿ ಉತ್ತಮ ರೂಢಿಗಳ ಅನುಸರಣೆ ಮತ್ತು ಶ್ರೇಷ್ಠತೆಗಾಗಿ ಈ ಗೌರವ ಸಂದಿದೆ. ಕರ್ನಾಟಕದಲ್ಲೇ ಈ ಮಾನ್ಯೆ ಪಡೆದ ಮೊಟ್ಟಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಫಾದರ್ ಮುಲ್ಲರ್ಸ್ ಪಾತ್ರವಾಗಿದೆ. ಇಡೀ ದೇಶದಲ್ಲೇ ಈ ಗೌರವಕ್ಕೆ ಪಾತ್ರವಾದ ಎರಡನೇ ಆಸ್ಪತ್ರೆ/ಸಂಸ್ಥೆಯಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಫಾದರ್ ಮುಲ್ಲರ್ ಚಾರಿಟಬಲ್ ಇನ್‍ಸ್ಟಿಟ್ಯೂಷನ್‍ಗೆ ಈಗಾಗಲೇ ಎನ್‍ಎಎಸಿ, ಎನ್‍ಎಬಿಎಚ್ & ಎನ್‍ಎಬಿಎಲ್ ಮಾನ್ಯತೆ ದೊರಕಿದ್ದು, ಈ ಅತ್ಯುತ್ಕøಷ್ಟ ಗೌರವವು ಫಾದರ್ ಮುಲ್ಲರ್ ಕಾಲೇಜು ಆಸ್ಪತ್ರೆ ಫಾರ್ಮಸಿಯ ಗರಿಮೆಯನ್ನು ಹೆಚ್ಚಿಸಿದೆ. ಅತ್ಯಂತ ಕನಿಷ್ಠ ಅಪಾಯ ಸಾಧ್ಯತೆ ಹೊಂದಿರುವ ಅತ್ಯುತ್ತಮ ಫಾರ್ಮಸಿ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.

ದ ಫಾರ್ಮಸಿ ಡೆ ಕ್ವಲೈಟ್ ಪ್ರಮಾಣಪತ್ರವು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನಿಸಿರುವ ಉತ್ತಮ ಫಾರ್ಮಸಿ ರೂಡಿಗಳು ಹಾಗೂ ಅಂತರರಾಷ್ಟ್ರೀಯ ಫಾರ್ಮಸಿಸ್ಟ್‍ಗಳ ಒಕ್ಕೂಟವು ನಿಗದಿಪಡಿಸಿದ ಮಾನದಂಡಗಳಿಗೆ ಅನುಸಾರವಾಗಿರುತ್ತದೆ. ಫಾರ್ಮಸಿಯ ಉತ್ತಮ ರೂಢಿ, ಗರಿಷ್ಠ ಸೇವೆ ಮತ್ತು ರೋಗಿಗಳಿಗೆ ಪುರಾವೆ ಆಧರಿತ ಸೇವೆ ಒದಗಿಸುವುದು ಇದರ ಮುಖ್ಯ ಅಂಶವಾಗಿದೆ. ಅಬೋಟ್ ಹೆಲ್ತ್‍ಕೇರ್ ಹಾಗೂ ಬ್ಯೂರೊ ಆಫ್ ವೆರಿಟಸ್ ಸಹಯೋಗದಲ್ಲಿ ಈ ಪ್ರಮಾಣೀಕರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ರೋಗಿಗಳ ಉತ್ತಮ ಆರೈಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ. ಈ ಪ್ರಮಾಣಪತ್ರ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಿರ್ವಹಿಸಲಾಗುತ್ತದೆ. ಪೂರ್ವ ಮೌಲ್ಯಮಾಪನ ಮತ್ತು ವೆರ್ಟಿಯನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನಿಂದ ಅಂತಿಮ ಪರಿಶೋಧನೆ ಇರುತ್ತದೆ. ಇದು ಜಾಗತಿಕ ಪರೀಕ್ಷೆ, ವೈಯಕ್ತಿಕ ತಪಾಸಣೆ ಮತ್ತು ಪ್ರಮಾಣಪತ್ರ ಸೇವಾ ಪೂರೈಕೆ ಮಡುವ ಸಂಸ್ಥೆಯಾಗಿದ್ದು. ಫಾರ್ಮಸಿಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ರೂಪಿಸುವುದು ಇದರ ಗುರಿ.

ಈ ಮಾನ್ಯತಾ ಪ್ರದಾನ ಸಮಾರಂಭ 2018ರ ಫೆಬ್ರುವರಿ 12ರಂದು ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಕೌನ್ಸಿಲ್ ಹಾಲ್‍ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಅಬೋಟ್ ಹೆಲ್ತ್‍ಕೇರ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಪೊರೇಟ್ ಆಸ್ಪತ್ರೆ ವಿಭಾಗದ ವಿಭಾಗೀಯ ಮಾರಾಟ ವ್ಯವಸ್ಥಾಪಕ ಮುರುಗೇಶನ್ ಭಾಗವಹಿಸಿದ್ದರು. ಈ ಮಾನ್ಯತಾ ಪ್ರಮಾಣಪತ್ರವನ್ನು ಸಂಥೆಯ ನಿರ್ದೇಶಕ ರೆವರೆಂಡ್ ಫಾದರ್ ರಿಚರ್ಡ್ ಎ.ಕೊಯೆಲ್ಹೊ ಅವರಿಗೆ ಹಸ್ತಾಂತರಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿಗಳು ಮತ್ತು ಫಾರ್ಮಸಿ ಎಕ್ಸಿಕ್ಯೂಟಿವ್‍ಗಳು ಈ ಸಂದರ್ಭ ಉಪಸ್ಥಿತರಿದ್ದರು.

ಇಂಥ ವಿಶ್ವದರ್ಜೆಯ ಪ್ರಮಾಣಪತ್ರ ಪ್ರಕ್ರಿಯೆಗೆ ಭಾರತದಲ್ಲಿ ಚಾಲನೆ ನೀಡಿರುವ ಪ್ರಮಾಣಪತ್ರ ಮಂಡಳಿಯನ್ನು ಸಂಸ್ಥೆಯ ನಿರ್ದೇಶಕರು ಶ್ಲಾಘಿಸಿದರು. ಇದು ಗುಣಮಟ್ಟದ ಫಾರ್ಮಸಿ ಸೇವೆಗಳನ್ನು ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ನಿಡುವಲ್ಲಿ ಸಹಕಾರಿಯಾಗಲಿದೆ. ಫಾರ್ಮಸಿ ಸೇವೆಯ ಪ್ರಮಾಣೀಕರಣವನ್ನು ಆರಂಭಿಸಿ, ಮೌಲ್ಯಮಾಪನ ನಡೆಸಿ, ಪರಿಶೋಧನೆ ನಡೆಸಿದ ಅಬೊಟ್ ಹೆಲ್ತ್‍ಕೇರ್ ಪ್ರೈವೇಟ್ ಲಿಮಿಟೆಡ್ ಹಾಗೂ ಬ್ಯೂರೊ ವೆರಿಟಸ್ ಸೇವೆಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ಇದು ಸೇವೆಯ ಗುಣಮಟ್ಟವನ್ನು ಹೆಚ್ಚು ಎತ್ತರಕ್ಕೆ ಒಯ್ಯುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟರು. ಈ ಅಸಾಧಾರಣ ಮೈಲುಗಲ್ಲನ್ನು ಸಾಧಿಸಿದ ಫಾರ್ಮಸಿ ತಂಡವನ್ನು ಅಭಿನಂದಿಸಿದರು.


Spread the love