ಮೂಡಬಿದ್ರೆ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿ ನಿಗೂಡ ಸಾವು ಸಮಗ್ರ ತನಿಖೆಗೆ ಎಸ್.ಡಿ.ಪಿ.ಐ ಆಗ್ರಹ
ಮಂಗಳೂರು: ಮೂಡಬಿದ್ರೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದ ಕಾವ್ಯ(15) ಜುಲೈ 20 ರಂದು ಹಾಸ್ಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಕ್ಕೆ ಎಡೆಮಾಡಿದೆ.ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ವಿದ್ಯಾರ್ಥಿನಿಯ ಈ ನಿಗೂಢ ಸಾವು ಸಾರ್ವಜನಿಕ ವಲಯದಲ್ಲಿ ಮತ್ತು ವಿದ್ಯಾರ್ಥಿನಿಯ ಪೋಷಕರಲ್ಲಿ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಬಲವಾದ ಸಂಶಯಗಳು, ಆರೋಪಗಳು ಕೇಳಿಬರುತ್ತಿದೆ. ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷವು ಇಂತಹ ಘಟನೆಗಳು ಮರುಕಳಿಸುತ್ತಿದೆ.ಆದರೆ ಇದರ ಹಿಂದಿರುವ ನೈಜತೆಯನ್ನು ಬಯಲಿಗೆಳೆಯದೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮರೆಮಾಚುತ್ತಿರುವ ವಿಚಾರ ಚರ್ಚೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವಿದ್ಯಾರ್ಥಿನಿಯರ ತಾಯಂದಿರು ನ್ಯಾಯ ಮರೀಚಿಕೆಯಾಗಿ ಕಣ್ಣೀರಿಡುತ್ತಿದ್ದಾರೆ.ಸೌಜನ್ಯ,ಅಕ್ಷತಾ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಲ್ಲಿ ನಡೆದ 500ರಷ್ಟು ಅಸಹಜ ಸಾವುಗಳು ನ್ಯಾಯ ಸಿಗದೆ ಮರೀಚಿಕೆಯಾಗಿಯೇ ಉಳಿದಿದೆ.
ಕಾವ್ಯ ನಿಗೂಢ ಸಾವಿನ ಬಗ್ಗೆ ಧ್ವನಿಯೆತ್ತದೆ ಮೌನ ವಹಿಸಿದರೆ ಈ ಘಟನೆಯು ನ್ಯಾಯ ಮರೀಚಿಕೆಯ ಸಾಲಿನಲ್ಲಿ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಾವ್ಯಳ ನಿಗೂಢ ಸಾವು ಮೇಲ್ನೋಟಕ್ಕೆ ಕೊಲೆ ಎಂದು ಕಾಣುತ್ತಿದ್ದರು ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸದೆ ಘಟನೆಯನ್ನು ಗೌಪ್ಯವಾಗಿ ಮುಚ್ಚುವ ಕೆಲಸದಲ್ಲಿ ತಲ್ಲಿನ ಆಗಿರುವುದು ಅಪಾಯಕಾರಿ ಬೆಳವಣಿಗೆ ಆಗಿದೆ.
ಆದುದರಿಂದ ಇದರ ಸತ್ಯಾಸತ್ಯತೆ ಬಯಲಾಗಬೇಕಾದರೆ ರಾಜ್ಯ ಸರಕಾರವು ಈ ಎಲ್ಲಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು ಮತ್ತು ಕಾವ್ಯಳ ಕುಟುಂಬಕ್ಕೆ ಸರಕಾರವು ಕೂಡಲೇ ಪರಿಹಾರ ಧನ ವನ್ನು ನೀಡಬೇಕೆಂದು ಒತ್ತಾಯಿಸುತ್ತದೆ.
ಅದೇ ರೀತಿ ಕಾವ್ಯಳ ಕುಟುಂಬಕ್ಕೆ ನ್ಯಾಯ ಸಿಗದೆ ಇದ್ದಲ್ಲಿ ಜಿಲ್ಲೆಯ ಎಲ್ಲಾ ಪ್ರಜ್ಞಾವಂತ ನಾಗರಿಕರು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.