ಮೂಡುಬಿದಿರೆ: ರಾಷ್ಟ್ರೀಯ ಭಾವೈಕ್ಯತೆಗೆ ನಾಂದಿ ಹಾಡಿದ ಸಂಭ್ರಮದ ಗಣರಾಜ್ಯೋತ್ಸವ

Spread the love

ಆಳ್ವಾಸ್ ಶಿಕ್ಷಣ  ಪ್ರತಿಷ್ಠಾನದಲ್ಲಿ ನಡೆದ ಅಪರೂಪದ ಆಚರಣೆ/ ಸಂಭ್ರಮಕ್ಕೆ ಸಾಕ್ಷಿಯಾದ ಇಪ್ಪತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು

ಮೂಡುಬಿದಿರೆ: ವಿಶಾಲ ಬಯಲು ರಂಗಮಂದಿರ…. ಆ ವಿಶಾಲ ಸ್ಥಳದಲ್ಲಿ ನೆರೆದ 20,000ಕ್ಕೂ ಅಧಿಕ ವಿದ್ಯಾರ್ಥಿಗಳು..ಸಮವಸ್ತ್ರಧಾರಿಗಳಾಗಿ ಕೈಯಲ್ಲಿ ರೈಫಲ್ ಹಿಡಿದು ನಿಂತ ಎನ್‍ಸಿಸಿಯ ಶಿಸ್ತಿನ ಕೆಡೆಟ್‍ಗಳು….ಸೇರಿದ ಎಲ್ಲರ ಮನದಲ್ಲೂ ಭದ್ರವಾಗಿ ಮನೆಮಾಡಿದ ದೇಶಪ್ರೇಮ….ಇದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆದ 67ನೇ ಗಣರಾಜ್ಯೋತ್ಸವ ಆಚರಣೆಯ ಸಂಭ್ರಮ.

2-alvas-001 3-alvas-002

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆ ಈ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಯಿತು. ಚಿಕ್ಕದಾಗಿ ಆದರೆ ಅಷ್ಟೇ ಚೊಕ್ಕವಾಗಿ ನಡೆದ ಗಣರಾಜ್ಯೋತ್ಸವದ ಆಚರಣೆಯು ಸಂಸ್ಥೆಯ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಿಸಿತು. ಆಳ್ವಾಸ್ ಶಿಕ್ಷಣ ಸಮೂಹಗಳ 20 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು, ಬೇರೆ ಬೇರೆ ಕಾಲೇಜುಗಳಿಂದಆಗಮಿಸಿದ್ದ 600 ಎನ್‍ಸಿಸಿ ಕೆಡೆಟ್‍ಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಈ ಆಚರಣೆಯಲ್ಲಿ ಪಾಲ್ಗೊಂಡಿತು.

1-alvas

ಮುಖ್ಯ ಅತಿಥಿಯಾಗಿದ್ದ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಮಾತನಾಡಿ, `ಎಲ್ಲಾ ರಾಜಕೀಯ ವ್ಯವಸ್ಥೆಗಳನ್ನು ಹೋಲಿಕೆ ಮಾಡಿ ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಶ್ರೇಷ್ಠವಾದುದು. ಅಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನದ ರೂಪದಲ್ಲಿ ಸ್ವೀಕೃತವಾದ ದಿನ ಇದು. ಇಂತಹ ವ್ಯವಸ್ಥೆಯನ್ನು ನಾವೆಲ್ಲ ಕಾಪಾಡಿಕೊಂಡು ಹೋಗಬೇಕಾದ ಅವಶ್ಯಕತೆ ಇದೆ. ಅದನ್ನು ಸರಿಯಾಗಿ ನಿರ್ವಹಿಸುವುದು ನಿಮ್ಮಂತಹ ಯುವಜನಾಂಗದ ಕರ್ತವ್ಯ’ ಎಂದರು.

ಕಾರ್ಯಕ್ರಮದ ಮೆರುಗು ಹೆಚ್ಚಿಸಿದ ವಿಶೇಷತೆಗಳು

ಸುಮಾರು ಮೂವತ್ತು ಸಾವಿರ ಜನ ಸೇರಬಲ್ಲ ಅತ್ಯಂತ ವಿಶಾಲ ಬಯಲು ರಂಗಮಂದಿರ ಈ ಬಾರಿಯ ಆಚರಣೆಯ ವಿಶೇಷ ಆಕರ್ಷಣೆ. ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಸುಮಾರು 600 ಎನ್‍ಸಿಸಿ ಕೆಡೆಟ್‍ಗಳು ಹಾಗೂ ಆರ್ಮಿಯ ಲೆಫ್ಟಿನೆಂಟ್ ಅಧಿಕಾರಿಗಳು, ಸ್ಕೌಟ್ಸ್ ಹಾಗೂ ಗೈಡ್ಸ್ ಕಾರ್ಯಕ್ರಮದ ಶಿಸ್ತು ಹೆಚ್ಚುವಂತೆ ಮಾಡಿದ್ದರು. ಇನ್ನು `ಕೋಟಿ ಕಂಠೋ ಸೆ….’ ಎಂಬ ರಾಷ್ಟ್ರೀಯ ಭಾವೈಕ್ಯತೆಯ ಗೀತೆಗೆ ನೆರೆದ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ರಾಷ್ಟ್ರಧ್ವಜ ಬೀಸಿದ್ದು ಅದ್ಭುತ ಘಳಿಗೆಯನ್ನು ನಿರ್ಮಿಸಿತು. ಇನ್ನು ಬಯಲು ರಂಗಮಂದಿರದಲ್ಲಿ 3000 ವಿದ್ಯಾರ್ಥಿಗಳಿಂದ ನಿರ್ಮಿತವಾದ ಅಶೋಕ ಚಕ್ರ  ಇನ್ನೂ ಆಕರ್ಷಕವಾಗಿ ಕಾಣುವಂತೆ ಮಾಡಿತ್ತು. ಕಾರ್ಯಕ್ರಮದ ಮಧ್ಯೆ ಆಕಾಶಕ್ಕೆ ಹಾರಿ ಬಿಟ್ಟ ತ್ರಿವರ್ಣಗಳಲ್ಲಿದ್ದ ಬೆಲೂನುಗಳು ಹಾಗೂ 2000 ವಿದ್ಯಾರ್ಥಿಗಳು ತ್ರಿವರ್ಣ ವಸ್ತ್ರಧಾರಿ ವಿದ್ಯಾರ್ಥಿಗಳು ಆಚರಣೆಯ ಅಂದವನ್ನು ಹೆಚ್ಚಿಸಿದ್ದರು.

4-alvas-003

ಧ್ವಜಾರೋಹಣ ಕಾರ್ಯಕ್ರಮದ ಬಳಿಕ ನಡೆದ ಅಂತರ್ ಕಾಲೇಜು ಡ್ರಿಲ್ ಸ್ಪರ್ಧೆ ನಡೆಯಿತು. ಎನ್‍ಸಿಸಿಯ ವಿವಿಧ ಗ್ರೂಪ್‍ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ಉಪಕುಲಪತಿ ರಮಾನಂದ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಟ್ರಸ್ಟಿಗಳಾದ ಮಾಜಿ ಸಚಿವ ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ವಿವೇಕ್ ಆಳ್ವ ಉಪಸದ್ಥಿತರಿದ್ದರು.


Spread the love