ಮೇಯರ್ ಅವರಿಗೆ ಧೈರ್ಯವಿದ್ದಲ್ಲಿ ಸಿಸಿಟಿವಿಯ ಸಂಪೂರ್ಣ ದೃಶ್ಯಾವಳಿ ಬಿಡುಗಡೆ ಮಾಡಿ; ರೂಪಾ ಡಿ ಬಂಗೇರಾ
ಮಂಗಳೂರು: ನಗರದ ಗೌರವಯುತ ಸ್ಥಾನದಲ್ಲಿರುವ ಮೇಯರ್ ಕಾವಲುಗಾರನ ಪತ್ನಿಯ ಮೇಲೆ ಅವರ ಮನೆಯೊಳಗೆ ನುಗ್ಗಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಮೇಯರ್ ಅವರಿಗೆ ಧೈರ್ಯವಿದ್ದಲ್ಲಿ ಆ ಕುರಿತಾದ ಸಿಸಿಟಿವಿಯ ಸಂಪೂರ್ಣ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಿ ಇಲ್ಲವಾದಲ್ಲಿ 2 ದಿನಗಳಲ್ಲಿ ನಾವು ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಇದರ ಸುರತ್ಕಲ್ ಬ್ಲಾಕ್ ಅಧ್ಯಕ್ಷೆ ಪೂಜಾ ಪೈ ಸವಾಲು ಹಾಕಿದ್ದಾರೆ.
ಮೇಯರ್ ಕವಿತಾ ಸನಿಲ್ ತಮ್ಮ ವಾಸದ ಫ್ಲಾಟಿನ ಕಾವಲುಗಾರನ ಪತ್ನಿ ಹಾಗೂ ಮಕ್ಕಳಿಗೆ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣದ ಕುರಿತು ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 26 ರಂದು ತಾನು ಸಭೆಯೊಂದರಲ್ಲಿ ಭಾಗವಹಿಸಿದ ವೇಳೆ ವಾಚ್ ಮೆನ್ ಪತ್ನಿಗೆ ಹಲ್ಲೆ ನಡೆಸಿದ ಕುರಿತು ದೂರವಾಣಿ ಕರೆಬಂದಿತ್ತು. ಹಲ್ಲೆ ನಡೆಸಿದ ವ್ಯಕ್ತಿ ನಗರದ ಮೇಯರ್ ಕವಿತಾ ಸನಿಲ್ ಎಂದು ದೂರವಾಣಿ ಕರೆ ಮಾಡಿದ ವ್ಯಕ್ತಿ ಹೇಳಿದ್ದು, ನಗರದ ಜನತೆಗೆ ರಕ್ಷಣೆ ನೀಡಬೇಕಾದ ಮೇಯರ್ ಸ್ವತಃ ಹಲ್ಲೆ ನಡೆಸಿದ್ದಲ್ಲದೆ ಕಾನೂನನ್ನು ಕೈಗೆತ್ತಿ ಕೊಂಡಿರುವುದು ಖಂಡನೀಯ. ಮೇಯರ್ ಅವರು ತಾನು ಮಾಡಿದ ಕೃತ್ಯಕ್ಕೆ ಕ್ಷಮೆಯಾಚಿಸುವುದರೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾವಲು ಗಾರನ ಪತ್ನಿಗೆ ನ್ಯಾಯ ದೊರಕುವ ವರೆಗೆ ಬಿಜೆಪಿ ಮಹಿಳಾ ಮೋರ್ಚಾ ಹೋರಾಟ ನಡೆಸಲಿದೆ ಎಂದರು.
ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಒದಗಿಸಬೇಕೆಂಬ ದಿಸೆಯಿಂದ ತಾವು ಕಾವಲುಗಾರನ ಮನೆಗೆ ಭೇಟಿ ನೀಡಿ ಆತ ಹಾಗೂ ಹಲ್ಲೆಗೊಳಗಾದ ಆತನ ಪತ್ನಿಯಿಂದ ಮಾಹಿತಿ ಸಂಗ್ರಹಿಸಿದ್ದೇವೆಯೇ ಹೊರತು ಇದರಲ್ಲಿ ರಾಜಕೀಯದ ಪ್ರಶ್ನೆ ಇಲ್ಲ. ನಮಗೆ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ನಾವು ಬಹಿರಂಗಪಡಿಸಲು ಇಚ್ಚೆ ಪಡುವುದಿಲ್ಲ ಕಾರಣ ಬಳಿಕ ಆ ವ್ಯಕ್ತಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಮೇಯರ್ ಇಂತಹ ದೌರ್ಜನ್ಯ ನಡೆಸಿರುವುದು ಇದೇ ಮೊದಲಲ್ಲ ಹಿಂದಿನ ಕಾವಲುಗಾರನ ಮೇಲೆಯೂ ಕೊಲೆ ಬೆದರಿಕೆ ಹಾಕಿದ ಬಗ್ಗೆ ದೂರು ಕೂಡ ದಾಖಲಾಗಿದೆ. ನಮ್ಮಲ್ಲಿ ಸಾಕ್ಷಾಧಾರಗಳು ಇದ್ದು ಅವುಗಳನ್ನು ಮುಂದೆ ಬಿಡುಗಡೆ ಮಾಡುವುದಾಗಿ ಹೇಳಿದರು.
ಕಾರ್ಪೋರೇಟರ್ ರೂಪಾ ಡಿ ಬಂಗೇರ ಮಾತನಾಡಿ ನಮಗೆ ಮೇಯರ್ ಬಗ್ಗೆ ಗೌರವವಿದ್ದು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ ಬಡ ಮಹಿಳೆಗೆ ಹಲ್ಲೆ ನಡೆಸುವುದು ಖಂಡನೀಯ. ಮೇಯರ್ ಹೇಳುವ ಪ್ರಕಾರ ನಾವು ಪ್ರಕರಣವನ್ನು ರಾಜಕೀಯಗೊಳಿಸಿದ್ದೇವೆ ಅಂದಮೇಳೆ ಮೆಯರ್ ಅವರಿಗೆ ಧೈರ್ಯವಿದ್ದಲ್ಲಿ ಇಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.