ಮೊಬೈಲ್ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮೈಸೂರಿನ ವಿದ್ಯಾರ್ಥಿನಿ
ಮೈಸೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮವಾಗುತ್ತಿದೆ. ಒಂದು ಸಣ್ಣ ಘಟನೆಯನ್ನು ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಶಾಲೆಯಲ್ಲಿ ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಿಖಿತಾ (17) ಸಾವನ್ನಪ್ಪಿದ ವಿದ್ಯಾರ್ಥಿ. ಗಣಪತಿ ಸಚ್ಚಿದಾನಂದ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ನಿಖಿತಾ ತಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಅಮ್ಮನ ಜೊತೆಯಲ್ಲಿ ನಿಖಿತಾ ಮೈಸೂರಿನಲ್ಲಿ ವಾಸವಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಾಳೆ.
ರಜೆ ಸಿಕ್ಕಾಗೆಲ್ಲಾ ಹೆಂಡತಿ, ಮುದ್ದು ಮಗಳನ್ನು ತಂದೆ ನೋಡಿಕೊಂಡು ಹೋಗುತ್ತಿದ್ದರು. ಕಳೆದ ಬಾರಿ ಬಂದಾಗ ಮುದ್ದಿನ ಮಗಳ ಜೊತೆ ಯಾವಾಗಲೂ ಮಾತನಾಡಲು ತಾವು ಬಳಸಲು ತೆಗೆದುಕೊಂಡ ಹೊಸ ಆ್ಯಂಡ್ರಾಯ್ಡ್ ಮೊಬೈಲ್ನನ್ನು ಕೊಟ್ಟಿ ಹೋಗಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮೊಬೈಲ್ ಕೊಂಡು ಹೋಗಿದ್ದ ನಿಖಿತಾ ಮೊಬೈಲ್ ಕಳೆದುಕೊಂಡಿದ್ದಾಳೆ. ಎಷ್ಟು ಹುಡುಕಿದರೂ ಮೊಬೈಲ್ ಮಾತ್ರ ಸಿಕ್ಕಿಲ್ಲ. ಇದರಿಂದ ಆಕೆ ಮನನೊಂದಿದ್ದಾಳೆ.
ಅಪ್ಪನ ಪ್ರೀತಿಯ ಉಡುಗೊರೆಯನ್ನು ಕಳೆದುಕೊಂಡ ಬಗ್ಗೆ ಯುವತಿ ಖಿನ್ನತೆಗೆ ಜಾರಿದ್ದಾಳೆ. ಜೊತೆಗೆ ದುಬಾರಿ ಬೆಲೆಯ ಮೊಬೈಲ್ ಕಳೆದುಕೊಂಡರೆ ಮನೆಯಲ್ಲಿ ಬೈಗುಳ ತಿನ್ನಬೇಕು ಎಂದು ಹೆದರಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಕರಣದ ಕುರಿತು ಎನ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.