ಮೊಯ್ಲಿ, ಭಂಡಾರಿ ವಿರುದ್ದ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ : ಮುನಿಯಾಲು ಉದಯ ಶೆಟ್ಟಿ
ಕಾರ್ಕಳ : ಕಾರ್ಕಳ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ದಿ ನಡೆಸಿ, ಸಿಇಟಿ ಮೂಲಕ ಮನೆಮನೆಯ ಬೆಳಕನ್ನು ಬೆಳಗಿಸಿದ ಡಾ.ಎಂ.ವೀರಪ್ಪ ಮೊಯ್ಲಿ ಅವರನ್ನು ಬಿಜೆಪಿಗರು ಕೀಳುಮಟ್ಟದಲ್ಲಿ ನಿಂದಿಸಿಸುವ ಮೂಲಕ ಭಾರತೀಯ ಜನತಾ ಪಕ್ಷ ಕಾರ್ಕಳದಲ್ಲಿ ಕೀಳು ಮಟ್ಟದ ರಾಜಕಾರಣಕ್ಕೆ ಕೈ ಹಾಕಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಹೇಳಿದ್ದಾರೆ.
ಬುಧವಾರ ಯುವ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ನಾಯಕರ ವಿರುದ್ದ ಬಿಜೆಪಿಯ ಅವಳಹೇಳನವನ್ನು ಖಂಡಿಸಿ ಬಂಡೀ ಮಠ ಬಸ್ಸು ನಿಲ್ದಾಣ ಬಳಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ರಾಷ್ಟ್ರ ಮಟ್ಟದಲ್ಲಿ ಮಿಂಚಿ ನಾಯಕರಾಗಿದ್ದು, ಅವರದೇ ಹಾದಿಯಲ್ಲಿ ಸಾಗಿದ ಸಜ್ಜನ ಭ್ರಷ್ಟಾಚಾರರಹಿತ ಆಡಳಿತ ನೀಡಿದ ಮಾಜಿ ಶಾಸಕ ಗೋಪಾಲ ಭಂಡಾರಿಯವರುಗಳ ಬಗ್ಗೆ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಲ್ಲದೆ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ.
ಸಿದ್ದರಾಮಯ್ಯ ನೇತೃತ್ವದ ಸರಕಾರದ ಯೋಜನೆಗೆಗಳು ಎಲ್ಲಾರ ಮನೆ ಮನೆಗೆ ತಲುಪಿದೆ, ಕಳೆದ 9 ವರ್ಷಗಳ ಬಳಿಕ ರಾಜ್ಯದಲ್ಲಿದ್ದ ರೇಶನ್ ಕಾರ್ಡ್ ಸಮಸ್ಯೆ ನೀಗಿಸಿ, ಹೆಚ್ಚಿನ ಎಲ್ಲಾ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಿದ್ದಾರೆ. ಇದರಿಂದ ಉಚಿತ ಅಕ್ಕಿಯನ್ನು ಜನತೆ ಪಡೆಯುವಂತಾಗಿದೆ. ಹಸಿವು ಮುಕ್ತ ರಾಜ್ಯವನ್ನಾಗಿಸಿದ ಕೀರ್ತಿಯ ಸಿದ್ದರಾಮಯ್ಯಗೆ ಸಲ್ಲುತ್ತದೆ.
ಕಾರ್ಕಳ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ದಿ ನಡೆಸಿ, ಸಿಇಟಿ ಮೂಲಕ ಮನೆಮನೆಯ ಬೆಳಕನ್ನು ಬೆಳಗಿಸಿದ ಕೀರ್ತಿ ವೀರಪ್ಪ ಮೊಯ್ಲಿಗೆ ಸಲ್ಲತ್ತದೆ ಅಂತ ನಾಯಕರ ಬಗ್ಗೆ ಟೀಕೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ.
ಕಾರ್ಕಳ ಶಾಸಕರು ಜಾತಿ ದರ್ಮಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಜನರ ಒಗ್ಗಟ್ಟು ಹೊಡೆದು ಹಾಕಿ ಅವರ ನಡುವೆ ದ್ವೇಷ ಭಾವನೆ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ. ಮುಂದಿನಗಳಲ್ಲಿ ಚುನಾವಣೆ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದೇವೆ.
ಮಂಗಳೂರು ವಿವಿ ಸೆನೆಟ್ ಸದಸ್ಯ ಅಮೃತ್ಶೆಣೈ ಮಾತನಾಡಿ, ಪುರಭವನ ಹುಡುಕುದನ್ನು ಬಿಟ್ಟು ಈ ಬಾಗದ ಸಂಸದೆ ಶೋಭ ಕರಂದಾಜ್ಲೆಯನ್ನು ಮೊದಲು ಹುಡುಕಿಕೊಡಿ. ಈ ಕ್ಷೇತ್ರ ಬಿಟ್ಟು ಸ್ಥಳೀಯ ಜಿಲ್ಲೆಯಲ್ಲಿ ಸಂಸದೆಗೆ ಏನು ಕೆಲಸ. ಕಾರ್ಕಳ ಶಾಸಕರು ಮೊದಲು ರಾಮಮಂದಿರವನ್ನು ಹುಡುಕಿಕೊಡಿ.
ಲಲಿತ್ ಮೋದಿ, ವಿಜಯ್ ಮಲ್ಯ ಸಾವಿರ ಕೊಟಿ ರೂ ಪಂಗನಾಮ ಹಾಕಿದ ಬಗ್ಗೆ ಮೋದಿ ಮಾತನಾಡಲ್ಲ.ಈ ದೇಶದಲ್ಲಿ ಕಾಂಗ್ರೆಸ್ ಸರಕಾರ ಹೊರತುಪಡಿಸಿ, ಅನ್ಯ ಸರಕಾರಗಳು ಮರು ಅಧಿಕಾರಕ್ಕೆ ಬಂದ ಉದಾಹರಣೆಗಳಿಲ್ಲ. ಇದರಿಂದ ಅನ್ಯ ಪಕ್ಷಗಳ ಮೇಲೆ ಜನತೆಗೆ ನಂಬಿಕೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಯುವ ಕಾಂಗ್ರೆಸ್ ಕಾರ್ಯದರ್ಶಿ ವಿಘ್ನೇಶ್ ಕಿಣಿ, ಕಾಂಗ್ರೆಸ್ ಪ್ರಮುಖರಾದ ಅವೆಲಿನ್ ಆರ್.ಲೂಯಿಸ್, ಡಾ. ಸಂತೋಷ್ ಕುಮಾರ್ ಶೆಟ್ಟಿ, ವೆರೋನಿಕ ಕರ್ನೇಲಿಯೋ, ಮುರಳಿ ಶೆಟ್ಟಿ, ನೇಮಿರಾಜ ರೈ ನಿಟ್ಟೆ, ಸುಧಾಕರ ಶೆಟ್ಟಿ ಮುಡಾರು, ಎಂ.ಪಿ.ಮೊಯ್ದಿನಬ್ಬ ಇನ್ನ, ಅಶ್ಪಕ್ ಅಹ್ಮದ್ ಕಾರ್ಕಳ, ಜೋನ್ ಡಿಸಿಲ್ವ ಕುಂಟಲ್ಪಾಡಿ, ದೀಪಕ್ ಕೋಟ್ಯಾನ್ ಇನ್ನ, ಪ್ರತಿಮಾ ಕಾರ್ಕಳ, ರೆಹಮತ್ ಎನ್.ಶೇಖ್ ಕಾರ್ಕಳ, ಸಂತೋಷ್ ಶೆಟ್ಟಿ ಹಿರ್ಗಾನ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.