ಮೋದಿ ಧರ್ಮಸ್ಥಳ ಭೇಟಿ – ಅ. 28-29 ಭಕ್ತರಿಗೆ ದೇವರ ದರ್ಶನಕ್ಕೆ ನಿಷೇಧ; ಬಿಗಿ ಭದ್ರತೆಗೆ ಸಿದ್ದತೆ
ಮಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 29 ರಂದು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುವ ಸಮಯದಲ್ಲಿ ಅಕ್ಟೋಬರ್ 28 ರ ಮಧ್ಯಾಹ್ನದಿಂದ 29 ಮಧ್ಯಾನ ತನಕ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶವನ್ನು ನಿಷೇಧಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ದೇವಸ್ಥಾನದ ಆಡಳಿತಮಂಡಳಿ ಅಕ್ಟೋಬರ್ 28 ರ ಮಧ್ಯಾಹ್ನ 2 ಗಂಟೆಯಿಂದ 29 ರ ಮಧ್ಯಾಹ್ನ 2 ಗಂಟೆಯ ತನಕ ಶ್ರೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ. ಇದರಿಂದ ಭಕ್ತಾದಿಗಳಿಗಾಗುವ ಅನಾನುಕೂಲತೆಗೆ ಸಹಕರಿಸುವಂತೆ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅ.29 ಧರ್ಮಸ್ಥಳಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಭದ್ರತೆಗೆ ಸಿದ್ಧತೆ ನಡೆಸಿದೆ. ಪ್ರಧಾನಿ ಮೋದಿ ಆಗಮಿಸುವ ಬಗ್ಗೆ ಪ್ರಧಾನಿ ಕಾರ್ಯಾಲಯದಿಂದ ಸಂದೇಶ ಬರುವ ಮುನ್ನವೇ ಜಿಲ್ಲೆಯಲ್ಲಿ ಆಡಳಿತಾತ್ಮಕ ಸಿದ್ಧತೆ, ಭದ್ರತಾ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಾದ ಬೆಳ್ತಂಗಡಿ-ಕಾರ್ಕಳ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆಯಿರುವ ಕಾರಣ ಈ ಪ್ರದೇಶದ ಮೇಲೆ ಹೆಚ್ಚಿನ ನಿಗಾ ಇಟ್ಟು ನಕ್ಸಲ್ ಕೂಂಬಿಂಗ್ಗೆ ಸಿದ್ಧತೆ ಮಾಡಲಾಗಿದೆ.
ಭದ್ರತಾ ವ್ಯವಸ್ಥೆಗೆ ಸಕಲ ರೀತಿಯಲ್ಲಿ ಸನ್ನದ್ಧರಾಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮಂಗಳವಾರವೇ ಎಲ್ಲ ಠಾಣಾ ವ್ಯಾಪ್ತಿಯ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ. ಬಿಡಿಪಿಎಸ್ (ಬಾಂಬು ಪತ್ತೆ ಹಚ್ಚುವ ತಂಡ) ತಂಡ ಈಗಾಗಲೇ ಹೆಲಿಪ್ಯಾಡ್, ಉಜಿರೆ, ಧರ್ಮಸ್ಥಳ ಸುತ್ತಮುತ್ತ ತಪಾಸಣೆ ನಡೆಸಿದೆ. ಇದು ಮಾತ್ರವಲ್ಲದೆ ತಪಾಸಣೆ ನಡೆಸಿದ ಸ್ಥಳಗಳಲ್ಲಿ ನಿಗಾ ಇಡಲು ಸಿಬ್ಬಂದಿ ನೇಮಕ ಮಾಡುವಂತೆ ಸೂಚನೆ ನೀಡಲಾಗಿದೆ.
ಆ.29ರಂದು ಉಜಿರೆಯಲ್ಲಿ ಲಕ್ಷಾಂತರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆಗೆ ಸದ್ಯ 2500 ಪೊಲೀಸರು, 150 ಕ್ಕೂ ಅಧಿಕ ಅಧಿಕಾರಿಗಳ ಯೋಜನೆ ರೂಪಿಸಲಾಗಿದೆ. ಕಾರ್ಯಕ್ರಮದ ರೂಪುರೇಷೆ ಹಾಗೂ ಬಾಕಿ ಸಿದ್ಧತೆಗಳನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ಪಶ್ಚಿಮ ವಲಯ ಹೊರತುಪಡಿಸಿ ಉಳಿದ ವಲಯಗಳಿಂದಲೂ ಸಿಬ್ಬಂದಿ ತರಿಸಿಕೊಳ್ಳಲಾಗುವುದು ಎಂದು ಎಸ್ಪಿಯವರು ಹೇಳಿದ್ದಾರೆ.