ಮೋದಿ ವಿರುದ್ಧ ಲಾಠಿ ಹಿಡಿದ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು; ಮೂಕ ಪ್ರೇಕ್ಷಕರಾದ ಪೊಲೀಸ್!

Spread the love

ಮೋದಿ ವಿರುದ್ಧ ಲಾಠಿ ಹಿಡಿದ ಉಡುಪಿ ಕಾಂಗ್ರೆಸ್ ಕಾರ್ಯಕರ್ತರು; ಮೂಕ ಪ್ರೇಕ್ಷಕರಾದ ಪೊಲೀಸ್!

ಉಡುಪಿ : ಪ್ರಧಾನಿ ಮೋದಿ ವಿರುದ್ಧ ಬೀದಿಗಿಳಿದಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟವಾಗಿ ಲಾಠಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಅಚ್ಚರಿ ಮೂಡಿಸಿದರು.

ಕೈಗಳಲ್ಲಿ ಲಾಠಿಯನ್ನು ಹಿಡಿದು ಮೋದಿ ವಿರುದ್ದ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು “ನೀಮ್ ಕಾ ಪತ್ತಾ ಕಡುವಾ ಹೈ.. ನರೇಂದ್ರ ಮೋದಿ ಬಡವಾ ಹೈ…” “ಗಲಿ ಗಲಿ ಮೇ ಶೋರ್ ಹೈ ನರೇಂದ್ರ ಮೋದಿ ಚೋರ್ ಹೈ” ಎಂಬಿತ್ಯಾದಿ ಮೋದಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಯ ಬಳಿ ಮೋದಿ ಭಾವಚಿತ್ರಕ್ಕೆ ಲಾಠಿಯೇಟು ನೀಡಿ, ಧಿಕ್ಕಾರ ಕೂಗಿದರು.

ಪ್ರತಿಭಟನೆಯಲ್ಲಿ ನೂರಾರು ಲಾಠಿ ಪ್ರದರ್ಶನ ಮಾಡಿ ಪೊಲೀಸರಿಗೆ ಅಚ್ಚರಿ ಮೂಡಿಸಿದರು. ಮಣಿಪಾಲದ ಟೈಗರ್ ಸರ್ಕಲ್ ನಿಂದ ಆರಂಭವಾದ ಪ್ರತಿಭಟನಾ ಜಾಥಾ ಜಿಲ್ಲಾಧಿಕಾರಿ ಕಚೇರಿ ತನಕ ಹೋಯ್ತು. ಲಾಠಿಯನ್ನು ನೆಲಕ್ಕೆ ಬಡಿಯುತ್ತಾ ನಡೆದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಆಕ್ರೋಷ ವ್ಯಕ್ತಗೊಳಿಸಿದರು.

ಭಾರತೀಯ ವಾಯುಸೇನೆಗೆ ರಫೇಲ್ ಯುದ್ಧ ವಿಮಾನ ಹಗರಣ ಖಂಡಿಸಿ ಪ್ರತಿಭಟನೆ ನಡೆಯಿತು. ಈ ವೇಳೆ ಮೋದಿ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು, ರಫೆಲ್ ಹಗರಣ, ವಿಮಾನಕ್ಕೆ ತಗಲಿರುವ ಮೊತ್ತದ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು. ರಕ್ಷಣಾ ಸಚಿವೆ ಹಗರಣದ ಬಗ್ಗೆ ಗೊತ್ತಿದ್ದರೂ ಪ್ರಧಾನಿ ಮೋದಿಯವರಿಗೆ ಭಯಗೊಂಡು ತುಟಿ ಬಿಚ್ಚುತ್ತಿಲ್ಲ. ಇದು ಇಡೀ ದೇಶಕ್ಕೆ ಮಾಡಿದ ಅಪಮಾನ ಅಂತ ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಕ್ರೋಷ ವ್ಯಕ್ತಪಡಿಸಿದರು.

ಪೊಲೀಸರ ಎದುರೇ ಕಾಂಗ್ರೆಸ್ ಕಾರ್ಯಕರ್ತರಯ ಲಾಠಿ ಬಡಿಯುತ್ತಾ, ಕೋಲಾಟ ಆಡುತ್ತಿದ್ದರೆ ಕ್ರಮ ಕೈಗೊಳ್ಳಲೂ ಆಗದೆ, ಸುಮ್ಮನಿರಲು ಆಗದೆ ಮೂಕಪ್ರೇಕ್ಷಕರಾಗಿ ಚಡಪಡಿಸಿದರು. ವಾರದ ಹಿಂದೆ ನಡೆದ ಭಾರತ್ ಬಂದ್ ವೇಳೆ ಪೊಲೀಸರು ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಮೇಲ ಲಾಠಿಚಾರ್ಜ್ ಮಾಡಿದ್ದರು. ಅದನ್ನು ಅಣಕಿಸಲು ಹೀಗೆ ಮಾಡಿದ್ರಾ ಅಂತ ಕೇಳಿದ್ರೆ ಕೆಲವರು ನಕ್ಕು ಸುಮ್ಮನಾದರು. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಪ್ರತಿಭಟಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಗಮನ ಸೆಳೆದ ಅಣಕು ರಫೆಲ್: ರಫೆಲ್ ಯುದ್ಧ ವಿಮಾನದ ಮಾದರಿ ಹಿಡಿದು ಬಂದಿದ್ದ ಪ್ರತಿಭಟನಾಕಾರನೊಬ್ಬ ಎಲ್ಲರ ಗಮನಸೆಳೆದ. ಅಲ್ಲಲ್ಲಿ ವಿಮಾನ ಲ್ಯಾಂಡ್ ಮಾಡಿ ಪ್ರತಿಭಟನೆಯ ಕೇಂದ್ರಬಿಂದುವಾದ. ಕಾಂಗ್ರೆಸ್ ಬಾವುಟಕ್ಕೆ ವಿಮಾನ ಸಿಕ್ಕಿಸಿ ಧಿಕ್ಕಾರ ಕೂಗಿ ತನ್ನ ಆಕ್ರೋಷ ವ್ಯಕ್ತಪಡಿಸಿದ.

ಮೂಕ ಪ್ರೇಕ್ಷಕರಾದ ಪೊಲೀಸ್ ಇಲಾಖೆ
ಲಾಠಿ ಬೀಸುತ್ತಾ ಪಾದಯಾತ್ರೆ ನಡೆಸಲು ಪೊಲೀಸ್ ಅನುಮತಿ ಇರಲಿಲ್ಲ. ಪ್ರತಿಭಟನೆಯಲ್ಲಿ ಸಾಮೂಹಿಕ ಲಾಠಿ ಪ್ರದರ್ಶನ ಮಾಡಿದ್ದರಿಂದ ಪೊಲೀಸರಿಗೂ ತಕ್ಷಣದ ಮಟ್ಟಿಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಮುಂದಿನ ಸಾಲಿನಲ್ಲಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ,ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಕೂಡ ಕಾರ್ಯಕರ್ತರ ಲಾಠಿ ಪ್ರದರ್ಶನ ಕಂಡು ಸುಮ್ಮನಿರಬೇಕಾಯಿತು. ಪೊಲೀಸರು ಹೆಚ್ಚಿನ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಿದರು. ಈ ನಡುವೆ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತ್ರ ತನ್ನ ಪಕ್ಷ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸದೆ ದೂರ ಉಳಿದರು.


Spread the love