Home Mangalorean News Kannada News ಯಕ್ಷಗಾನ ಕಲಾರಂಗ ಮಳೆಗಾಲದ ವಿಶೇಷ ಯಕ್ಷಗಾನ – ‘ಶ್ರೀ ಕಲ್ಯಾಣ’ ಕಥಾನಕದ ಪ್ರದರ್ಶನ

ಯಕ್ಷಗಾನ ಕಲಾರಂಗ ಮಳೆಗಾಲದ ವಿಶೇಷ ಯಕ್ಷಗಾನ – ‘ಶ್ರೀ ಕಲ್ಯಾಣ’ ಕಥಾನಕದ ಪ್ರದರ್ಶನ

Spread the love

ಯಕ್ಷಗಾನ ಕಲಾರಂಗ ಮಳೆಗಾಲದ ವಿಶೇಷ ಯಕ್ಷಗಾನ – ‘ಶ್ರೀ ಕಲ್ಯಾಣ’ ಕಥಾನಕದ ಪ್ರದರ್ಶನ

ಉಡುಪಿ: ಯಕ್ಷಗಾನ ಕಲಾರಂಗ ಮಳೆಗಾಲದ ವಿಶೇಷ ಯಕ್ಷಗಾನ ಪ್ರದರ್ಶನವಾಗಿ ‘ಶ್ರೀ ಕಲ್ಯಾಣ’ ಕಥಾನಕವು ಇತ್ತೀಚೆಗೆ ಕಲಾರಂಗ-ಐವೈಸಿ ಸಭಾಂಗಣದಲ್ಲಿ ಸಂಪನ್ನಗೊಂಡಿದ್ದು ಸುಮಾರು ಐವತ್ತು ಮಂದಿ ರಂಗಕಲಾವಿದರು, ನೇಪಥ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

‘ಶ್ರೀ ಕಲ್ಯಾಣ’ ಯಕ್ಷಗಾನ ಕಥಾನಕವನ್ನು ಭವಿಷ್ಯೋತ್ತರ ಪುರಾಣವೂ ಸೇರಿದಂತೆ ಹಲವು ಕಥಾಮೂಲಗಳಿಂದ ಆಯ್ದುಕೊಳ್ಳಲಾಗಿದೆ. ಮಧ್ಯಕಾಲೀನ ಸಂದರ್ಭದ ಭಕ್ತಿಪಂಥದ ಚಳುವಳಿಯಿಂದ ಪ್ರಭಾವಕ್ಕೊಳಗಾಗಿರುವ ಈ ಕಥಾನಕವು ದೇವರು ಮತ್ತು ಲೌಕಿಕರ ನಡುವಿನ ಸಂಬಂಧವನ್ನು ಹೆಚ್ಚು ಹತ್ತಿರವಾಗಿಸುವುದಕ್ಕೆ ದೃಷ್ಟಾಂತದಂತಿದೆ. ಕಲಿಯುಗದ ಯುಗಧರ್ಮಕ್ಕೆ ಅನುಸಾರವಾಗಿ ದೇವರೇ ಭಕ್ತರ ಮಟ್ಟಕ್ಕಿಳಿದು, ಲೋಕದಲ್ಲಿ ಭಕ್ತಿಯ ಅನುಸಂಧಾನವನ್ನು ಜಾಗೃತಗೊಳಿಸುವುದು ಈ ಕಥಾನಕದ ಆಶಯ. ಆದ್ದರಿಂದಲೇ ದೇವರು ಇಲ್ಲಿ ಸಾಮಾನ್ಯನಂತೆ ಪಾಡುಪಡುತ್ತ ಸಾಲ ಮಾಡಿ ಮದುವೆಯಾಗುವುದಕ್ಕೆ ಮುಂದಾಗಿ, ಆ ಸಾಲವನ್ನು ಭಕ್ತರ ಕೈಯಿಂದ ತೀರಿಸಿಕೊಳ್ಳುವ ಬದ್ಧತೆಗೊಳಗಾಗಿ, ಆ ಮೂಲಕ ಭಕ್ತರನ್ನು ತನ್ನ ಸಾಮೀಪ್ಯದಲ್ಲಿಯೇ ಇರಿಸಿಕೊಳ್ಳುತ್ತಾನೆ. ಪ್ರದರ್ಶನದ ಕೊನೆಗೆ ಪ್ರಸ್ತುತಿಗೊಂಡ ‘ವೇಂಕಟೇಶ್ವರ-ಪದ್ಮಾವತಿ ಕಲ್ಯಾಣ ಮಹೋತ್ಸವ’ ವು ಸಹೃದಯ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು. ಕೊನೆಗೆ ಭಕ್ತಾದಿಗಳು ಭಜನೆ ಹಾಡುತ್ತ ಭಕ್ತಿಭಾವನೆಯನ್ನು ಪ್ರಕಟಪಡಿಸುವುದರ ಮೂಲಕ ಕಥಾನಕಕ್ಕೆ ಮಂಗಳ ಹಾಡುವ ದೃಶ್ಯದೊಂದಿಗೆ ಪ್ರದರ್ಶನ ಸಮಾಪನಗೊಂಡಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರದರ್ಶನವನ್ನು ಸಂಯೊೋಜಿಸಿದರೆ, ಆರಂಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವೀರಾಜ ಕವತ್ತಾರು ಅವರು ಪೂರ್ಣಕಥಾನಕವನ್ನು ಸಂಕಲನಗೊಳಿಸಿ, ಪ್ರದರ್ಶನದ ನಿರ್ದೇಶನ ನೀಡಿದರು. ಎಸ್. ಗಣರಾಜ ಭಟ್ ರಂಗಸಜ್ಜಿಕೆಯನ್ನು ನಿರ್ವಹಿಸಿದರು. ವಿದ್ಯಾಪ್ರಸಾದ್ ಅವರು ವಿಸ್ತೃತವಾದ ಮೂಲಕಥನವನ್ನು ರಂಗಪಠ್ಯವಾಗಿಸುವಲ್ಲಿ ಸಹಕರಿಸಿದರು.


Spread the love

Exit mobile version