ಯಕ್ಷಧ್ರುವ ಪಟ್ಲ ಸಂಭ್ರಮ 1 ಲಕ್ಷ ಸದಸ್ಯರನ್ನು ನೋಂದಾವಣೆಗೆ ಯೋಜನೆ
ಮಂಗಳೂರು: ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‍ನ ವತಿಯಿಂದ ಮೇ 22ರಂದು ಭಾನುವಾರ ಬೆಳಗ್ಗೆ 9ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಯಕ್ಷ ಧ್ರುವ ಪಟ್ಲ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
ಮೇ 22ರಂದು ಪುರಭವನದಲ್ಲಿ ಬೆಳಿಗ್ಗೆ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಕಲಾವಿದರಿಗೆ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
ಹದಿನೈದು ಮಂದಿ ಅಸಕ್ತ ಕಲಾವಿದರಿಗೆ ತಲಾ 50 ಸಾವಿರ ರೂಪಾಯಿ ಗೌರವಧನ, ಓರ್ವ ಅರ್ಹ ಕಲಾವಿದನಿಗೆ ಒಂದು ಲಕ್ಷ ರೂಪಾಯಿ ಜತೆಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪಟ್ಲ ಪೌಂಡೇಶನ್ ಟ್ರಸ್ಟ್‍ನ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅವರು ಬಲ್ಲಾಲ್‍ಬಾಗ್‍ನಲ್ಲಿರುವ ಪತ್ತುಮುಡಿ ಸೌಧದಲ್ಲಿ ಆಯೋಜಿಸಲಾದ ಟ್ರಸ್ಟ್‍ನ ಸಭೆಯಲ್ಲಿ ತಿಳಿಸಿದರು.
ಸಮಾರಂಭದಲ್ಲಿ ಕಲಾವಿದರಿಗೆ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಲ್ಲದೆ ಸಮಾರಂಭದಲ್ಲಿ ಯಕ್ಷಗಾನ ವೈಭವ, ತಾಳಮದ್ದಳೆ, ಬಯಲಾಟ ರಾಧಾವಿಲಾಸ ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜತೆಗೆ ಟ್ರಸ್ಟ್‍ಗೆ ಒಂದು ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಇದೆ ಎಂದು ಸತೀಶ್ ಶೆಟ್ಟಿ ಪಟ್ಲ ತಿಳಿಸಿದರು. ಸಭೆಯಲ್ಲಿ ಟ್ರಸ್ಟ್‍ನ ಗೌರವಾಧ್ಯಕ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸುಧೀರ್‍ಭಟ್ ಎಕ್ಕಾರ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಕೋಶಾಧಿಕಾರಿ ಸಿ.ಎ. ಸುದೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.