ಯಕ್ಷಾಶ್ರಯ ಯೋಜನೆಗೆ ನಟ ಪುನೀತ್ ರಿಂದ ನೆರವು
ಮಂಗಳೂರು : ಯಕ್ಷಧ್ರುವ ಪಟ್ಲ ಟ್ರಸ್ಟ್ ನ ಪಟ್ಲ ಟ್ರಸ್ಟ್ ನ ಕೆಲಸ ಕಾರ್ಯಗಳು ಶ್ಲಾಘನೀಯ. ಯಕ್ಷಗಾನ ಕಲಾವಿದರ ಬಗ್ಗೆ ಟ್ರಸ್ಟ್ ಗೆ ಇರುವ ಕಾಳಜಿ ಮತ್ತು ಟ್ರಸ್ಟ್‍ನ ಕಾರ್ಯ ಯೋಜನೆ ಮೆಚ್ಚುವಂತದ್ದು ಹೀಗಾಗಿ ಯಕ್ಷಧ್ರುವ ಪಟ್ಲ ಟ್ರಸ್ಟ್ ನ ಮನೆ ನಿರ್ಮಾಣದ ಯಕ್ಷಾಶ್ರಮ ಯೋಜನೆಗೆ 5 ಲಕ್ಷ ರೂಪಾಯಿ ಹಣವನ್ನು ನೀಡುವುದಾಗಿ ಖ್ಯಾತ ಚಿತ್ರನಟ ಪುನೀತ್ ರಾಜ್ ಕುಮಾರ್ ತಿಳಿಸಿದರು.
ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಗೆ 5 ಲಕ್ಷ ರೂಪಾಯಿ ಮೊತ್ತದ ಚೆಕ್ಕನ್ನು ಹಸ್ತಾಂತರಿಸಿ ಕಲಾವಿದರ ಬದುಕಿಗೆ ಟ್ರಸ್ಟ್ ಶಾಶ್ವತವಾಗಿ ಆಸರೆಯಾಗಲಿ ಎಂದರು.
ಯಕ್ಷಧ್ರುವ ಪಟ್ಲ ಟ್ರಸ್ಟ್ ನ ದುಬಾಯಿ ಘಟಕ ಮತ್ತು ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಜಂಟಿ ಆಶ್ರಯದಲ್ಲಿ ದುಬಾಯಿ ಕರಾಮದ ಶೇಖ್ ರಶೀದ್ ಆಡಿ ಟೋರಿಯಂನಲ್ಲಿ ಹಮ್ಮಿಕೊಂಡ ಪಟ್ಲ 2019 ಸಂಭ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರನ್ನು ದುಬಾಯಿ ಘಟಕ ಸನ್ಮಾನಿಸಿತು.
ವೇದಿಕೆಯಲ್ಲಿ ದುಬೈಯ ಖ್ಯಾತ ಉದ್ಯಮಿ, ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ಪ್ರಮುಖರಾದ ಸಿಎ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಸುಜಾತ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಅನಂತ ಶೆಣೈ, ಗುಣಶೀಲ ಶೆಟ್ಟಿ, ಹರೀಶ್ ಬಂಗೇರ, ವಾಸುದೇವ ಭಟ್ ಪುತ್ತಿಗೆ, ರಘುರಾಮ ಶೆಟ್ಟಿ ಪುತ್ತಿಗೆ, ರಘುರಾಮ ಶೆಟ್ಟಿ ಅಜಮಾನ್, ಪಟ್ಲ ಟ್ರಸ್ಟ್ ದುಬಾಯಿ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುದಾಬಿ ಮತ್ತು ಕೋಶಾಧಿಕಾರಿ ಹಾಗೂ ದುಬಾಯಿ ಯಕ್ಷಗಾನ ಅಭ್ಯಾಸ ತರಗತಿಯ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ಮೊದಲಾದವರು ಉಪಸ್ಥಿತರಿದ್ದರು
ಮುಖ್ಯ ಅತಿಥಿಗಳಾಗಿ ಭಾಗ ವಹಿಸಬೇಕಾಗಿದ್ದ ದುಬಾಯಿಯ ಪ್ರಖ್ಯಾತ ವಾಣಿಜ್ಯೋದ್ಯಮಿಗಳಾದ ರೊನಾಲ್ಡ್ ಕೊಲಾಸೊ ಮತ್ತು ಡಾ. ಬಿ. ಆರ್ ಶೆಟ್ಟಿಯವರು ಅನಿವಾರ್ಯ ಕಾರಣಗಳಿಂದ ಗೈರಾಗಿದ್ದರೂ ಪಟ್ಲ ಟ್ರಸ್ಟ್ ನ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ಘೋಷಿಸಿದ್ದಾರೆ.
ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಕಲಾವಿದರ ಏಳಿಗೆಗಾಗಿ ಹುಟ್ಟಿಕೊಂಡ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ದಾನಿಗಳು ನೀಡುವ ನೆರವಿನಿಂದ ಕಲಾವಿದ ಬದುಕು ಹಸನಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಮೂಲ ಆಶಯದಂತೆ 17 ಲಕ್ಷ ರೂ. ಗಳ ದೇಣಿಗೆಯನ್ನು ದುಬಾಯಿ ಘಟಕದ ವತಿಯಿಂದ ಘೋಷಿಸಲಾಯಿತು.
ಪ್ರಿಯ ಹರೀಶ್ ಶೆಟ್ಟಿ, ವಿಠಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ಕುತ್ತಾರು ವಂದಿಸಿದರು.
ಅತಿಥಿ ಕಲಾವಿದರಲ್ಲಿ ಕರುಣಾಕರ ಶೆಟ್ಟಿಗಾರ್ ಕಾಶೀಪಟ್ಣ ಮತ್ತು ಡಾ. ಪ್ರಖ್ಯಾತ್ ಶೆಟ್ಟಿ ಭಾಗವತಿಕೆಯಲ್ಲಿ ಪದ್ಮನಾಭ ಉಪಾ ಧ್ಯಾಯರು ಮತ್ತು ದಯಾನಂದ ಶೆಟ್ಟಿಗಾರ್ ಮಿಜಾರು ಚೆಂಡೆ-ಮದ್ದಳೆಯಲ್ಲಿ ತಮ್ಮ ಚಾಕಚಕ್ಯತೆ-ಕೈಚಳಕ ಸುಮಧುರ ಗಾಯನ ಗಳಿಂದ ನೆರೆದ ಸಭಾಸದರನ್ನು ರಂಜಿಸಿದರು.
ಹಾಸ್ಯ ವೈಭವದಲ್ಲಿ ಚಲನಚಿತ್ರ ನಟ ಅರವಿಂದ ಬೋಳಾರ್ ಮತ್ತು ಶ್ರೀಯುತ ದಿನೇಶ್ ಶೆಟ್ಟಿಗಾರ್ ಕೋಡಪದವು, ಕರುಣಾಕರ ಶೆಟ್ಟಿಗಾರ್, ಕಾಶೀಪಟ್ಣರ ಸುಮಧುರ ಹಾಡುಗಾರಿಕೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು.