Home Mangalorean News Kannada News ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ 

ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ 

Spread the love

ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ಬೇಡ, ಪರೀಕ್ಷೆಗೆ ಒಳಗಾಗಿ- ಡಾ. ನವೀನ್‍ಚಂದ್ರ 

ಮಂಗಳೂರು : ಯಾವುದೇ ಜ್ವರದ ಬಗ್ಗೆ ನಿರ್ಲಕ್ಷ್ಯ ತೋರದೆ, ತಕ್ಷಣ ಪರೀಕ್ಷೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಆರೋಗ್ಯ ರಕ್ಷಣೆಗೆ ಉತ್ತಮವಾಗಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಹೇಳಿದರು.

ಅವರು ಮಂಗಳವಾರ ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ, ಮಲೇರಿಯ ಮತ್ತು ಡೇಂಗ್ಯೂ ನಿಯಂತ್ರಣದ ಕುರಿತು ಮಾಧ್ಯಮ ಮಿತ್ರರಿಗೆ ಮಾಹಿತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.

ಕೇವಲ ಚರಂಡಿ ನೀರಿನಿಂದ ಮಾತ್ರ ಸೊಳ್ಳೆ ಉತ್ಪತ್ತಿಯಾಗುವುದಿಲ್ಲ ಮನೆಯ ಅಸುಪಾಸಿನಲ್ಲಿ ಸ್ವಚ್ಛ ನಿಂತ ನೀರಿನಿಂದ ಕೂಡ ಡೆಂಗ್ಯೂ, ಮಲೇರಿಯಾ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಆದುದರಿಂದ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಜನರು ಜ್ವರದ ಬಗ್ಗೆ ನಿರ್ಲಕ್ಷ್ಯ ತೋರದೆ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ಉಚಿತ ಪರೀಕ್ಷೆ ನಡೆಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ವರ್ಷ ನಗರದಲ್ಲಿ 594 ಮಲೇರಿಯಾ ಪ್ರಕರಣಗಳು ಹಾಗೂ ಗ್ರಾಮೀಣ ಭಾಗದಲ್ಲಿ 59 ಮಲೇರಿಯಾ ಪ್ರಕರಣಗಳು ದೃಢಪಟ್ಟಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇನ್ನು ಮುಂದಿನ ದಿನಗಳಲ್ಲಿ ಮಲೇರಿಯಾ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಕಟ್ಟಡದ ಮೇಲ್ಛಾಗದಲಿ,್ಲ ಒವರ್‍ಹೆಡ್ ಟ್ಯಾಂಕ್, ಸಿಮೆಂಟ್ ಟ್ಯಾಂಕ್, ಮನೆಯ ಸುತ್ತಮುತ್ತ ಎಸೆದ ಪ್ಲಾಸ್ಟಿಕ್, ಟಯರ್, ಹೂವಿನ ಕುಂಡ, ತೆಂಗಿನ ಚಿಪ್ಪು, ಅಡಿಕೆ ಮರದ ಹಾಳೆ, ರಬ್ಬದ ತೊಗಟೆ, ಬಂದರು ಪ್ರದೇಶಗಳಲ್ಲಿ ದೋಣಿ, ಗುಜರಿ ಅಂಗಡಿಗಳ ನಿರುಪಯುಕ್ತ ಸಾಮಾಗ್ರಿ ಇತ್ಯಾದಿ ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿದ್ದು, ಇವುಗಳನ್ನು ಗಮನಿಸಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಜೊತೆಗೆ ಬಾವಿ, ಕೆರೆಗಳಿಗೆ ಲಾರ್ವಾಹಾರಿ ಗಪ್ಪಿ ಮೀನುಗಳನ್ನು ಸಾಕಬೇಕು ಎಂದು ಡಾ. ನವೀನ್‍ಚಂದ್ರ ಹೇಳಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉಚಿತ ಮಲೇರಿಯಾ ಪರೀಕ್ಷೆಗೆ ಮತ್ತು ಚಿಕಿತ್ಸೆಗೆ 9448556872 ಕರೆ ಮಾಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ರೋಗ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವುದು ರೋಗ ನಿಯಂತ್ರಣದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಜಿಲ್ಲಾ ವಾರ್ತಾಧಿಕಾರಿ ಬಿ. ಎ. ಖಾದರ್ ಷಾ, ಜಿಲ್ಲಾ ಕೀಟಶಾಸ್ತ್ರಜ್ಞೆ ಮಂಜುಳಾ. ಬಿ. ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಭಾಸ್ಕರ ರಾವ್ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version