ಯುವಕರು ಸೈನ್ಯಕ್ಕೆ ಸೇರಲು ಕಾರ್ಗಿಲ್ ಯುದ್ಧವು ಪ್ರೇರಣಾ ಶಕ್ತಿಯಾಗಿದೆ- ವಿಲಾಸ್ ನಾಯಕ್

Spread the love

ಯುವಕರು ಸೈನ್ಯಕ್ಕೆ ಸೇರಲು ಕಾರ್ಗಿಲ್ ಯುದ್ಧವು ಪ್ರೇರಣಾ ಶಕ್ತಿಯಾಗಿದೆ- ವಿಲಾಸ್ ನಾಯಕ್

ಉಡುಪಿ: ಪ್ರತಿಯೊಬ್ಬ ಸೈನಿಕನು ತನ್ನ ಸಾಮಥ್ರ್ಯವನ್ನು ವ್ಯಕ್ತಪಡಿಸಿದರ ಫಲವಾಗಿ ಆಪರೇಶನ್ ವಿಜಯ್ ಯಶಸ್ವಿಯಾಯಿತು. ಇನ್ನಷ್ಟು ಯುವಕರು ಸೈನ್ಯಕ್ಕೆ ಸೇರುವಂತಾಗಲು ಕಾರ್ಗಿಲ್ ಯುದ್ಧವು ಪ್ರೇರಣಾ ಶಕ್ತಿಯಾಗಿದೆ ಎಂದು ಹನುಮಾನ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಿಲಾಸ್ ನಾಯಕ್ ಹೇಳಿದರು.

ಅವರು ಸ್ವಚ್ಛ ಭಾರತ್ ಫ್ರೆಂಡ್ಸ್, ಲಯನ್ಸ್ ಕ್ಲಬ್ ಸಂತೆಕಟ್ಟೆ ಮತ್ತು ಸ್ಪಂದನಾ ಸೇವಾ ಸಂಸ್ಥೆ ಬೆಂಗಳೂರು ಜಂಟಿ ಆಶ್ರಯದಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕರ ಸ್ಮಾರಕದಲ್ಲಿ ಜುಲೈ 26 ರಂದು ನಡೆದ ಕಾರ್ಗಿಲ್ ವಿಜಯ ದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಕ್ಷಣವೂ ದೇಶದ ಒಳಿತಿಗಾಗಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಿಗೂ ಸವಾಲೊಡ್ಡಿ ದೇಶದ ಗಡಿ ಕಾಯುವ ನಮ್ಮ ಹೆಮ್ಮೆಯ ಯೋಧರನ್ನು ಪ್ರತಿದಿನವೂ ಸ್ಮರಿಸಲೇಬೇಕು. ದೇಶದಲ್ಲಿದ್ದುಕೊಂಡೇ ಈ ನೆಲದ ಸಾರ್ವಭೌಮತೆಗೆ ಧಕ್ಕೆ ತರಲು ಹುನ್ನಾರ ನಡೆಸುವವರು ನಮ್ಮ ಸೈನಿಕರನ್ನು ಅವಹೇಳನ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಅಂತಹ ವ್ಯಕ್ತಿಗಳು ಈ ದೇಶದಲ್ಲಿರಲು ಯೋಗ್ಯರಲ್ಲ ಎಂದರು.

ಭಾರತೀಯ ವಾಯುಪಡೆಯ ನಿವೃತ್ತ ಯೋಧ ಪಿ. ದಿನೇಶ್ ನಾಯಕ್ ಕಾರ್ಗಿಲ್ ವಿಜಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ಉಡುಪಿ ನಗರಸಭಾ ಸದಸ್ಯರಾದ ಶ್ಯಾಮ್‍ಪ್ರಸಾದ್ ಕುಡ್ವ ಮಾತನಾಡಿ, ದೇಶದ ಸೈನಿಕರ ವಿರುದ್ಧ ಮಾತನಾಡುವವರಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕು. ಪ್ರಜೆಗಳು ಶಾಂತಿಯಿಂದ ಉಸಿರಾಡಲು ಯೋಧರೇ ಕಾರಣ ಎಂದು ಅಭಿಪ್ರಾಯಪಟ್ಟರು.

ಬಳಿಕ ಮಾತನಾಡಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಕಾರ್ಗಿಲ್ ವಿಜಯ ದಿನವು ದೇಶದ ಬಲಿಷ್ಠ ಸೇನಾ ಬಲವು ಅನಾವರಣಗೊಂಡ ದಿನ, ಯೋಧರು ನಿವೃತ್ತರಾದ ಬಳಿಕ ಅವರಿಗೂ ಅವರ ಕುಟುಂಬ ಸದಸ್ಯರಿಗೂ ಪರಿಣಾಮಕಾರಿಯಾದ ಸೌಲಭ್ಯಗಳನ್ನು ಸರಕಾರಗಳು ವಿಳಂಬ ನೀತಿಯನ್ನು ಅನುಸರಿಸದೇ ನೀಡುವುದರಿಂದ ಇನ್ನಷ್ಟು ಯುವಜನರು ಸೇನೆಯ ಕಡೆಗೆ ಆಕರ್ಷಿತರಾಗುತ್ತಾರೆ ಎಂದರು.

ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರಸ್ತುತ ಮಾಜಿ ಸೈನಿಕರ ವೇದಿಕೆಯ ಕಾರ್ಯದರ್ಶಿಯಾಗಿರುವ ಕೆ. ಗಣೇಶ್ ರಾವ್ ಇವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ ಸಂತೆಕಟ್ಟೆ ಕಾರ್ಯದರ್ಶಿ ಸಂದೀಪ್ ನಾಯಕ್, ಹರಿಪ್ರಸಾದ್, ಬಾಲಕೃಷ್ಣ ಶೆಟ್ಟಿ, ಚೇತನಾ ಶೆಣೈ, ಸುಷ್ಮಾ ನಾಯ್ಕ್, ರಂಜಿತ್ ಶೆಟ್ಟಿ, ತಾರನಾಥ್, ನಾಗರಾಜ್ ಭಂಡಾರ್ಕರ್, ಜ್ಯೋತಿ ಶೇಟ್, ಪ್ರಸನ್ನ ಕುಮಾರ್, ಮಾಜಿ ಸೈನಿಕರು ಉಪಸ್ಥಿತರಿದ್ದರು. ಗಣೇಶ್ ಪ್ರಸಾದ್ ಜಿ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು, ಕೆ. ಮಹೇಶ್ ಶೆಣೈ ಸ್ವಾಗತಿಸಿ ನಿರೂಪಿಸಿದರು.


Spread the love