ಯು.ಎ.ಇ: ಗಣೇಶ್ ರೈ ಅವರದ್ದು ಬಹುಮುಖ ಪ್ರತಿಬೆ. ಅವರು ಜನಿಸಿದ್ದು ಕಾವೇರಿ ನದಿಯ ಉಗಮಸ್ಥಾನ ಕೊಡಗಿನಲ್ಲಿ. ಭಾರತಕ್ಕೆ ಶೂರ – ವೀರರನ್ನು ಕರುಣಿಸಿದ ಗಂಡು ಮೆಟ್ಟಿದ ನೆಲದಲ್ಲಿ. ಅಲ್ಲಿಯ ಪ್ರಕೃತಿಸಿರಿಯ ಏಲಕ್ಕಿ ಕಾಫಿ ತೋಟದ ಕಂಪಿನ ಮದ್ಯದಲ್ಲಿಯೇ ಅವರು ಕಾವೇರಿ ನೀರು ಕುಡಿದು ಬೆಳೆದವರು. ಆದರೆ ಅವರು ಉದ್ಯೋಗ ಅರಸಿ ಆಗಮಿಸಿದ್ದು ಅರಬ್ಬ ನಾಡಿಗೆ. ಅದು ಸುಂದರ ಭವಿಷ್ಯದ ಕನಸೋ ಅಥವಾ ಆಕಸ್ಮಿಕವೋ ತಿಳಿದಿಲ್ಲ! ಆದರೆ ಅವರ ಆಗಮನದಿಂದ ಲಾಭವಾಯಿತೇ ವಿನಹ ನಷ್ಟವಾಗಲಿಲ್ಲ. ಇಲ್ಲಿಯ ಮರುಭೂಮಿಯ ಬಿಸಿಲ ಧಾರೆಗೆ ಕನ್ನಡದ ಕೊಡೆ ಹಿಡಿದು ನಿಂತಿರುವ ಅವರ ಬಳಿ ಯಾರೇ ಬಂದರೂ ನೆರಳು ನೀಡಿದ್ದಾರೆ. ತನ್ನ ಸೇವೆ ಅದು ಕನ್ನಡ ಮಾತೆಗೆ ಅರ್ಪಿಸುವ ಕರ್ತವ್ಯ ಎಂದು ಸಹಾಯ ಹಸ್ತ ನೀಡಿದ್ದಾರೆ. ಈ ಕಾರಣಕ್ಕಾಗಿಯೇ ಅವರನ್ನು ಹತ್ತಾರು ಸಂಘ ಸಂಸ್ಥೆಗಳು ಗಣೇಶ್ ಅಣ್ಣ “ನಮ್ಮವ” ಎಂದು ಅಭಿಮಾನವನ್ನು ತಾಳಿದ್ದಾರೆ. ಯು.ಎ.ಇ. ಯ ಯಾವುದೇ ಸಭೆ ಸಮಾರಂಭಗಳ ವೇದಿಕೆ ಇರಲಿ, ನಾಟಕ ರಂಗಭೂಮಿಯಾಗಲಿ, ಪೂಜಾ ಮಂದಿರದ ಪಾವನ ನೆಲೆಯಾಗಿರಲಿ, ಅಥವಾ ಸಾಹಿತ್ಯ ಸಮ್ಮೇಳನದ ಮಂಟಪವಾಗಲಿ ಅಲ್ಲಿ ರೈಯವರ ಸೃಜನಶೀಲತೆಯ ಕೊಡುಗೆಗಳು ಎದ್ದು ಕಾಣುತ್ತದೆ.
ಗಣೇಶ್ ರೈಯವರ ಜನ್ಮಭೂಮಿಯ ಸಾಧನೆ, ಕರ್ಮಭೂಮಿಯ ಸಾಧನೆಗಾಗಿ ಈ ಬಾರಿ ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ “ವಿಶ್ವ ಮಾನ್ಯ ಪ್ರಶಸ್ತಿ” ನೀಡಿ ಗೌರವಿಸುತ್ತಿದೆ. “ಕನ್ನಡವೇ ಸತ್ಯ – ಕನ್ನಡವೇ ನಿತ್ಯ” ಎಂದು ಉಸಿರು ಮಾಡಿಕೊಂಡಿರುವ ರೈಯವರಿಗೆ ಈ ಪ್ರಶಸ್ತಿ ಗೌರವವೂ ಹೌದು, ಸಾರ್ಥಕವೂ ಹೌದು.
ಶ್ರೀ ಕೃಷ್ಣಪ್ಪ ರೈ ಮತ್ತು ತುಳಸಿಯಮ್ಮ ದಂಪತಿಗಳ ಸುಪುತ್ರರಾದ ಗಣೇಶ್ ಅವರು ಸಾಹಿತ್ಯ ಕಲೆಯ ಕುರಿತು ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡವರು. ಮಡಿಕೇರಿಯಲ್ಲಿಯೇ ವಾಣಿಜ್ಯ ಶಾಸ್ತ್ರದಲ್ಲಿ ಪದವಿಯನ್ನು ಮುಗಿಸಿ ನಂತರ ಚಿತ್ರಕಲೆಯಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನು ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಪಡೆದರು. ಶಿಲ್ಪಕಲೆಯಲ್ಲಿ ಪರಿಣಿತಿಯನ್ನು ಹೊಂದಿ ಶಿಲ್ಪಶಾಸ್ತ್ರವನ್ನು ಅಭ್ಯಾಸಮಾಡಿದರು. ತನ್ನ ಜ್ಞಾನವನ್ನು ಇತರರಿಗೂ ಹಂಚಬೇಕೆಂದು ಶಿಕ್ಷಣ ಕ್ಷೇತ್ರವನ್ನೇ ಆಯ್ಕೆ ಮಾಡಿ ಅದರಲ್ಲೇ ದುಡಿದವರು. ಅವರ ವಸ್ತುನಿಷ್ಠ ಶಿಕ್ಷಣ ಸೇವೆಯನ್ನು ಗುರುತಿಸಿಕೊಂಡ ಕರ್ನಾಟಕ ಸರ್ಕಾರವು ಅವರಿಗೆ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು 1993 ರಲ್ಲಿ ನೀಡಿ ಪುರಸ್ಕರಿಸಿತ್ತು. ಇದು ಅವರ ಸೇವೆ ಇನ್ನಷ್ಟು ಸ್ಪೂರ್ತಿ ತುಂಬಿತ್ತು.
ತನ್ನ ತಾಯಿನಾಡಿನಲ್ಲಿ ಗಣೇಶ್ ರೈಯವರು ಹಸ್ತಕೌಶಲ್ಯದಿಂದ ಕೆತ್ತಿದ ಶಿಲ್ಪಗಳು, ಲೋಹ, ಕಾಷ್ಠ, ಪ್ಲಾಸ್ಟರ್ ಆಫ್ ಪ್ಯಾರಿಸ್, ಪೇಪರ್ ಪಲ್ಪ್ ಕಲಾಕೃತಿಗಳು ಮಡಿಕೇರಿ ದಸರಾ ಉತ್ಸವದಲ್ಲಿ ಪೂಜಿಸಲ್ಪಟ್ಟರೆ, ಗಣಪತಿ ಮೂರ್ತಿಯಿಂದ ಹಿಡಿದು ಮೇರಿಮಾತೆ, ಜೀಸಸ್, ಸಂತಮೈಕೆಲರ ವಿಗ್ರಹ ಇನ್ನಿತರ ಹಲವಾರು ದೇವತಾ ಮೂರ್ತಿಗಳು ಮಂದಿರ, ಇಗರ್ಜಿಗಲಲ್ಲಿ ಪೂಜಿಸಲ್ಪಡುತಿದೆ.
ಓರ್ವ ಕಲಾಕಾರನಿಗೆ ಇದಕಿಂತ ದೊಡ್ಡ ಸನ್ಮಾನ ಬೇಕೆ?
ಇವರು ನಿರ್ಮಿಸಿಕೊಟ್ಟಿರುವ ದೇವಾತಾ ಮೂರ್ತಿಗಳು ನೂರಾರು, ಮಹಾಧ್ವಾರಗಳು ಹಲವಾರು. ಅವರು ರಚಿಸಿದ ತೈಲವರ್ಣ, ಜಲವರ್ಣ ಚಿತ್ರಗಳು ಹಲವು ಬಾರಿ ಕಲಾಪ್ರದರ್ಶನಗಳಲ್ಲಿ ಪ್ರದರ್ಶನಗೊಂಡು ದೇಶ ವಿದೇಶಗಳ ಸಂಗ್ರಹದಲ್ಲಿದೆ.
ಗಣೇಶ್ ರೈ ಉತ್ತಮ ಸಂಘಟನಕಾರ ಜೊತೆಗೆ ಭಾಷಣಗಾರ. ಶಾರ್ಜಾ ಕರ್ನಾಟಕ ಸಂಘದಲ್ಲಿ 2004 – 2006 ಅವಧಿಯಲ್ಲಿ ಅಧ್ಯಕ್ಷರಾಗಿ ದುಡಿದ ಅನುಭವಿ. ಯು.ಎ.ಇ.ಯಲ್ಲಿ ನೆಲೆಸಿರುವ ಸಾಧನೆ ಮಾಡಿರುವ ಕನ್ನಡಿಗರನ್ನು, ಸಂಘ ಸಂಸ್ಥೆಗಳನ್ನು ಸಂದರ್ಶನ ಮಾಡಿ “ಸಾಧನೆ” ಸಂಪುಟವನ್ನು ವಿನ್ಯಾಸಗೊಳಿಸಿ ಪ್ರಥಮ ಬಾರಿಗೆ ಯು.ಎ.ಇ.ಯಲ್ಲೇ ಕನ್ನಡ ಭಾಷೆಯಲ್ಲಿ ಮುದ್ರಿಸಿ ಬಿಡುಗಡೆ ಗೊಳಿಸಿದ ಸಾಧನೆ ಇವರದ್ದಾಗಿದೆ. ತನ್ನ ಜವಾಬ್ಧಾರಿಯ ಅವಧಿಯಲ್ಲೇ ಪ್ರಥಮ ಬಾರಿಗೆ ಗಲ್ಫ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಶಾರ್ಜಾ ಮಿನಿಸ್ಟ್ರಿ ಆಫ್ ಹೆಲ್ತ್ ಸಹಯೋಗದೊಂದಿಗೆ ಶಾರ್ಜಾ ಕರ್ನಾಟಕ ಸಂಘದ ಪ್ರಥಮ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಹಿನ್ನೆಲೆಯಲ್ಲಿ ಯು.ಎ.ಇ. ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ರಕ್ತದಾನ ಶಿಬಿರ ಏರ್ಪಡಿಸುವಂತೆ ಪ್ರೇರೆಪಿಸಿದ ಫಲವಾಗಿ ಇಂದು ಯು.ಎ.ಇ. ಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ರಕ್ತದಾನ ಅಭಿಯಾನ ಜರಗುತ್ತಿದೆ.
ರೈಯವರ ತಮ್ಮ ಉದ್ಯೋಗದಲ್ಲಿ ಸಿಗುವ ವಿರಾಮದ ವೇಳೆಯನ್ನು ಸಮಾಜ ಸೇವೆಗಾಗಿಯೆ ವಿನಿಯೋಗಿಸಿಕೊಂಡು ಸದಾ ಕನ್ನಡ ಪರ ಚಟುವಟಿಕೆಯಲ್ಲಿ ಕೈ ಜೋಡಿಸಿರುವ ಉತ್ಸಾಹಿ ಚಿಲುಮೆ. ದಣಿವು ಎನೆಂದೇ ಅರಿಯದ ಸರದಾರ. ಯು.ಎ.ಇ.ಯ ಯಾವುದೇ ಮೂಲೆಯಲ್ಲಿ ಕನ್ನಡ ಕಾರ್ಯಕ್ರಮವಿದ್ದರೆ, ನೂರಾರು ಕಿ.ಮಿ. ದೂರಗಳನ್ನು ಗಮನಿಸದೆ ದಾವಿಸಿ ಬರುತ್ತಾರೆ. ಎರಡು ಸವಿ ಮಾತನ್ನು ನುಡಿದು ಶುಭವನ್ನು ಹಾರೈಸುತ್ತಾರೆ.
ಅಂದು ತಾವು ಕಲಾ ತರಭೇತಿ ಮುಗಿಸಿ ಊರಿಗೆ ಬಂದಾಗ ತಾನು ಕಲಿತ ವಿದ್ಯಾಸಂಸ್ಥೆಯ ಪ್ರಾಂಶುಪಾಲರು ಮಹಾಧ್ವಾರದಲ್ಲಿ ಶಿಲ್ಪಾಕಲಾಕೃತಿಗಳನ್ನು ರಚಿಸಲು ಅವಕಾಶ ನೀಡಿದರು. ಆ ಯಶಸ್ಸು ಅವರ ಕಲಾ ಜೀವನಕ್ಕೆ ಭದ್ರ ಬುನಾದಿ ದೊರಕಿಸಿಕೊಟ್ಟಿತು. ಮಹಾಧ್ವಾರ ಕಲಾಕೃತಿಗಳನ್ನು ಭಾರತದ ಮಹಾ ಸೇನಾನಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರು ಉದ್ಘಾಟಿಸಿದರು. ಅಂದು ರೈಯವರಿಗೆ ಸನ್ಮಾನ ಮಾಡಿ ಗೌರವಿಸಿದ್ದು, ಅವರ ಪ್ರಥಮ ಸನ್ಮಾನವಾಗಿತ್ತು. ಅಂದಿನಿಂದ ಇಂದಿನವರೆಗೆ ಹಲವಾರು ಸಂಘ ಸಂಸ್ಥೆಗಳಿಂದ ನೂರಾರು ಸನ್ಮಾನ ಹಲವಾರು ಪ್ರಶಸ್ತಿ ಬಿರುದು ಪಡೆದು ಅವರು ಇತ್ತಿಚೆಗೆ ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ ರಾಜ್ಯೋತ್ಸವದ ಸಮಾರಂಭದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆ ಅವರಿಂದ ಸನ್ಮಾನ ಸ್ವೀಕರಿಸಿದರು.
ಯು.ಎ.ಇ.ಯಲ್ಲಿ ಕಳೆದ ಎರಡು ದಶಕಗಳಿಂದ ಕರ್ನಾಟಕ ಪರ ಭಾಷಾ ಸಂಘಟನೆ, ಜಾತಿ ಸಮುದಾಯಗಳ ಸಂಘಟನೆ, ನೆರೆಯ ರಾಜ್ಯಗಳ ತಮಿಳು, ಮಲಯಾಳಂ ಸಂಘಟನೆಗಳಿಗೆ ಲಾಂಛನ ವಿನ್ಯಾಸ, ಅಹ್ವಾನ ಪತ್ರ ವಿನ್ಯಾಸ, ವೇದಿಕೆಯ ಬೃಹತ್ ಚಿತ್ರಪಟ ವಿನ್ಯಾಸ, ಸನ್ಮಾನ ಪತ್ರ ವಿನ್ಯಾಸ, ಸ್ಮರಣ ಸಂಚಿಕೆ ವಿನ್ಯಾಸ, ಪ್ರಶಸ್ತಿ ಪತ್ರ ವಿನ್ಯಾಸ, ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಗಣ್ಯವ್ಯಕ್ತಿಗಳ ಸಂದರ್ಶನ ಲೇಖನಗಳನ್ನು ಹಲವು ವೆಬ್ ಮಾಧ್ಯಮಗಳಲ್ಲಿ ಪ್ರಕಟಿಸುವುದರ ಜೊತೆಗೆ ಸಾಹಿತ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರ ಭಾಷೆ ಕಲೆ ಸಂಸ್ಕೃತಿಯ ಮೇಲಿರುವ ಅಭಿಮಾನಕ್ಕೆ, ಇವರ ಸೇವೆಗೆ ಶಾರ್ಜಾ ಕರ್ನಾಟಕ ಸಂಘ 2009 ರಲ್ಲಿ ಪ್ರತಿಷ್ಠಿತ “ಮಯೂರ ಪ್ರಶಸ್ತಿ” ನೀಡಿ ಗೌರವಿಸಿದೆ. ದುಬಾಯಿ ಕರ್ನಾಟಕ ಸಂಘದ ಆಶ್ರಯದಲ್ಲಿ 2009 ರಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ “ಪ್ರತಿಭಾ ಪುರಸ್ಕಾರ” ನೀಡಿ ಸನ್ಮಾನಿಸಿದೆ. ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮತ್ತು ಕುವೆಂಪು ಕಲಾ ಉತ್ಸವದಲ್ಲಿ ” ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ. ನಮ ತುಳುವೆರ್ ಸಂಘಟನೆ 2012ರಲ್ಲಿ ತುಳುವೆರೆ ಪರ್ಬದಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ. ಯು.ಎ.ಇ. ತುಳು ಕೂಟ ತನ್ನ ರಜತ ಮಹೋತ್ಸವದಲ್ಲಿ ಸನ್ಮಾನಿ ಗೌರವಿಸಲಾಗಿದೆ. ತುಳು ಸಿರಿ ದುಬಾಯಿ “ತುಳುಸಿರಿ ಐಸಿರ” ದಲ್ಲಿ ಮತ್ತು ಕನ್ನಡಿಗರು ದುಬಾಯಿ ರಾಜ್ಯೋತ್ಸವ ಸಮಾರಂಭ – 2015, ದುಬಾಯಿಯಲ್ಲಿ ಸನ್ಮಾನಿಸಿ ಗೌರವಿಸಿದ್ದಾರೆ. ಇದೆ ರೀತಿ ಹಲವು ಸಂಘ ಸಂಸ್ಥೆಗಳಿಂದ ಹಲವಾರು ಬಾರಿ ಸನ್ಮಾನಿಸಲ್ಪಟ್ಟಿದ್ದಾರೆ.
“ವಿಶ್ವ ಮಾನ್ಯ ಪ್ರಶಸ್ತಿ” ಗಣೇಶ್ ರೈಯವರ ಸಾಧನೆಗೆ ದೊರೆತ ಪುರಸ್ಕಾರ
ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಕರ್ನಾಟಕ ವಿಶ್ವ ಕನ್ನಡ ಸಂಸ್ಕೃತಿ ಸಮಿತಿಯ ಆಶ್ರಯದಲ್ಲಿ ಶಾರ್ಜಾದಲ್ಲಿ 20 ನವೆಂಬರ್ 2015 ರಂದು ಅದ್ಧೂರಿಯಾಗಿ ನಡೆಯಲಿರುವ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಗಣೇಶ್ ರೈಯವರ ನಾಲ್ಕು ದಶಕಗಳಲ್ಲಿ ತಮ್ಮ ತಾಯಿನಾಡಿನಲ್ಲಿ ಮತ್ತು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಲ್ಲಿಸಿರುವ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಸೇವೆಯನ್ನು ಗುರುತಿಸಿ “ವಿಶ್ವ ಮಾನ್ಯ ಪ್ರಶಸ್ತಿ” ನೀಡಿ ಗೌರವಿಸಲಿದ್ದಾರೆ. ” ವಿಶ್ವ ಮಾನ್ಯ ಕನ್ನಡಿಗ”ದ ಇನ್ನೊಂದು ಗರಿ ರೈಯವರ ಕೀರಿಟಕ್ಕೆ ಹಚ್ಚುತ್ತಿದೆ.
ಶ್ರೀಮತಿ ಮಂಜುಳಾ ಗಣೇಶ್ ರೈ ಇವರ ಧರ್ಮ ಪತ್ನಿ ಓರ್ವ ಯಶಸ್ವಿ ಪುರುಷನ ಹಿಂದಿರುವ ಶಕ್ತಿಯಾಗಿದ್ದಾರೆ. ಮಗ ಮೋನಿಶ್ ರೈ ಮಗಳು ಐಶ್ವರ್ಯ ರೈ ಸುಖಿ ದಾಂಪತ್ಯದಲ್ಲಿ ಅರಳಿದ ಮೊಗ್ಗುಗಳು. ಇಬ್ಬರು ಮಕ್ಕಳು ಮಾತಾ ಪಿತೃರಂತೆ ಅಪ್ಪಟ ಮಾತೃ ಭಾಷಾ ಅಭಿಮಾನಿಗಳು. ಇಬ್ಬರೂ ಭರತನಾಟ್ಯ ಕಲಾವಿದರು, ಮಗ ಸಿ. ಎ. ಅಂತಿಮ ವರ್ಷದಲ್ಲಿ ವ್ಯಾಸಂಗದಲ್ಲಿದ್ದರೆ, ಮಗಳು ಬಿ.ಬಿ.ಎ. ಪದವಿ ಮುಗಿಸಿ ಎಂ.ಬಿ.ಎ. ವ್ಯಾಸಂಗಕ್ಕೆ ಸಿದ್ದತೆ ಮಾಡುತ್ತಿದ್ದಾಳೆ.
ಡಾ| ಬಿ. ಆರ್. ಶೆಟ್ಟಿಯವರ ಎನ್. ಎಂ. ಸಿ. ಸಮೂಹ ಸಂಸ್ಥೆಯ ಅಧೀನದಲ್ಲಿರುವ ಗಲ್ಫ್ ಪಬ್ಲಿಕ್ ರಿಲೇಶನ್ಸ್ ಜಾಹಿರಾತು ಸಂಸ್ಥೆಯಲ್ಲಿ ಕ್ರಿಯಾತ್ಮಕ ಕಲಾ ನಿರ್ದೇಶಕರು, ವ್ಯವಸ್ಥಾಪಕರಾಗಿ ಸಲ್ಲಿಸುತ್ತಿದ್ದಾರೆ. “ವಿಶ್ವ ಮಾನ್ಯ” ಪುರಸ್ಕಾರದಿಂದ ಇವರ ವ್ಯಕ್ತಿತ್ವಕ್ಕೆ ಇನ್ನಷ್ಟು ಛಲ, ಬಲ ಬರಲಿ. ಅದು ನಾಡಿಗೆ ಕೀರ್ತಿ ತರಲಿ ಎಂದು ನಮ್ಮೆಲ್ಲರ ಶುಭಹಾರೈಕೆಗಳು.