Home Mangalorean News Kannada News ಯು ಎ ಈ ಹವ್ಯಕ ಸಂಘಕ್ಕೆ 20 ರ ಸಂಭ್ರಮ

ಯು ಎ ಈ ಹವ್ಯಕ ಸಂಘಕ್ಕೆ 20 ರ ಸಂಭ್ರಮ

Spread the love

ಯು ಎ ಈ ಹವ್ಯಕ ಸಂಘಕ್ಕೆ 20 ರ ಸಂಭ್ರಮ

ಕರ್ನಾಟಕದ ದಕ್ಷಿಣೋತ್ತರ ಹಾಗು ಶಿವಮೊಗ್ಗ ಜಿಲ್ಲೆಗಳಿಂದ ಬಂದು ಕೊಲ್ಲಿ ರಾಷ್ಟ್ರ ಗಳಲ್ಲೊಂದಾದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ  ನೆಲೆಸಿದ ಹವ್ಯಕರೆಲ್ಲರೂ ಸೇರಿ 1997 ರಲ್ಲಿ ಕಟ್ಟಿ ಬೆಳೆಸಿದ ಹವ್ಯಕ ಸಂಘದ 20 ನೆಯ ವಾರ್ಷಿಕೋತ್ಸವ ದಿನಾಂಕ  12 ಮೇ 2017, ಶುಕ್ರವಾರ ದುಬೈನ ಕೆ ಜಿ ಎಸ್ ಶಾಲೆಯ ಸಭಾಭವನದಲ್ಲಿ ಜರುಗಿತು.

ಕಾರ್ಯಭಾರ ನಿಮಿತ್ತವಾಗಿ ಹುಟ್ಟೂರನ್ನು ಬಿಟ್ಟು ಅರಬ್ ನಾಡಿನಲ್ಲಿ ನೆಲೆಸಿ ಇಲ್ಲಿರುವ ಹವ್ಯಕರನ್ನ ಸಂಘಟಿಸಿ ಇಪ್ಪತ್ತು ವರ್ಷಗಳಿಂದ ಸ್ನೇಹಕೂಟ, ಹಲವು ಪಂದ್ಯಾವಳಿಗಳು, ಪ್ರವಾಸ, ವಾರ್ಷಿಕ ಪೂಜೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತ ಬಂದಿರುವದನ್ನ ನೋಡುವಾಗ ನಿಜವಾಗಿ “ಹವ್ಯಕರಲ್ಲಿ ಒಗ್ಗಟ್ಟಿಲ್ಲ” ಎನ್ನುವ ಅಪವಾದಕ್ಕೆ ಹುರುಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಹಿರಿಯ ಸದಸ್ಯರುಗಳ ಮಾರ್ಗದರ್ಶನ, ಕಿರಿಯ ಉತ್ಸಾಹಿಗಳ ತೊಡಗುವಿಕೆ ಎಲ್ಲದಕ್ಕಿಂತ ಹೆಚ್ಚಾಗಿ ಸಂಘದ ಮಹಿಳಾ ಸದಸ್ಯೆಯರ ಕೈಜೋಡಿಸುವಿಕೆ ಈ ಸುಧೀರ್ಘ ಪ್ರಯಾಣದ ಯಶಸ್ಸಿನ ಗುಟ್ಟು ಎನ್ನುವುದು ಮೇಲ್ನೋಟಕ್ಕೆ ಕಂಡರೂ ಸಂಘದ ಸಂಘಟಕರಲ್ಲೊಬ್ಬರಾದ ಶ್ರೀ ಎಮ್ ಆರ್. ಹೆಗಡೆಯವರ ಅಭಿಪ್ರಾಯದ ಪ್ರಕಾರ ಸಂಘಕ್ಕೆ ಅಧ್ಯಕ್ಷ ಕಾರ್ಯದರ್ಶಿ ಹೀಗೆ ಯಾವುದೇ ಪದವಿಗಳಿಲ್ಲ ಪ್ರತಿಯೊಬ್ಬ ಸದಸ್ಯನಿಗೂ ತನ್ನದ್ದಾದಂತಹ ಅಭಿಪ್ರಾಯ ಸ್ವಾತಂತ್ರ್ಯ, ಹೊಣೆಗಾರಿಕೆಯ ಅರಿವು, ಹವ್ಯಕಪರ ಕಳಕಳಿ ಸಮಾಜಮುಖಿ ಮನೋಭಾವ ಮುಂತಾದವುಗಳೇ ಈ ಯಶಸ್ಸಿಗೆ ಕಾರಣ.

1997 ರ ಅಕ್ಟೋಬರ್ ನಲ್ಲಿ ಶ್ರೀ ಅನುರಾಧ ಭಟ್ ಅವರ ಮನೆಯಲ್ಲಿ ನಡೆದ ಮೊದಲ ಕಾರ್ಯಕ್ರಮ ಶ್ರೀ ಅನುರಾಧ ಭಟ್ ಸೋಂದಿ, ವಿಶ್ವಪತಿ ಮೊಳೆಯಾರು, ಶ್ರೀ ಸುಬ್ಬಪ್ಪಯ್ಯ ವಡ್ಯ, ಶ್ರೀ ಬಾಲಚಂದ್ರ ಕೆ.ಸಿ, ಶ್ರೀ ಶಂಕರನಾರಾಯಣ ಭಟ್, ಶ್ರೀ ಎಸ್.ಎನ್.ಭಟ್, ಶ್ರೀ ಗೋವಿಂದ ಭಟ್, ಶ್ರೀ ಗಣಪತಿ ಭಟ್  ಹಾಗು ಶ್ರೀ ರಾಜಾರಾಮ ಇವರುಗಳ ಪ್ರಾಯೋಜಕತ್ವದಲ್ಲಿ ಜರುಗಿ, ಈ ಸುಧೀರ್ಘ ಪ್ರಯಾಣದ ಮುನ್ನುಡಿಯಾಯಿತು. ಕ್ರಿಯಾಶೀಲರ ಒಂದು ತಂಡ ತನ್ನ ಸಂಘಟನಾ ಚಾತುರ್ಯದಿಂದ 20 ವರ್ಷಗಳಲ್ಲಿ ಸುಮಾರು 120 ಕಿಂತ ಹೆಚ್ಚು ಸದಸ್ಯರನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ. ಯು ಎ ಈ ಯಲ್ಲಿ ನೆಲೆಸಿರುವವರಲ್ಲದೆ ಊರಿನಿಂದ ಬರುವ ಸಂಗೀತ, ಸಾಹಿತ್ಯ, ಜಾನಪದ, ಯಕ್ಷಗಾನ, ಮುಂತಾದ ಪ್ರಾಕಾರಗಳ ಸಾಂಸ್ಕೃತಿಕ ರಾಯಬಾರಿಗಳನ್ನ ಸಂಘ ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಿದೆ.

20 ನೆಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀಮತಿ ಸ್ಮಿತಾ ನೂಜಿಬೈಲ್ ಅವರ ಹಂಸಧ್ವನಿರಾಗದ ಗಣಪತಿ ಸ್ತುತಿ ಯಿಂದ ಮೊದಲ್ಗೊಂಡು ಅಬಾಲವೃದ್ಧರಾದಿಯಾಗಿ ಹಾಡು, ನೃತ್ಯ, ಮಿಮಿಕ್ರಿ, ನಾಟಕ, ಮಂತ್ರಪುಷ್ಪ, ಮೃದಂಗ  ವಾದನ ಹಾಗು ಕೀಬೋರ್ಡ್ ವಾದನಗಳೇ ಮುಂತಾದ ಕಾರ್ಯಕ್ರಮಗಳು ಸಭಾಸದರನ್ನ  ಕಾರ್ಯಕ್ರಮದ್ದುದ್ದಕ್ಕೂ ಹಿಡಿದಿಟ್ಟರೆ  ಶ್ರೀಮತಿ ರಜನಿ ಭಟ್ ಹಾಗು ಶ್ರೀಮತಿ ಪ್ರಿಯಾಂಕಾ ಪತ್ರೆಯವರ  ನಿರೂಪಣೆ ಇಡೀ ಕಾರ್ಯಕ್ರಮಕ್ಕೆ ಕಳೆಕಟ್ಟಿತು.

5 ವರ್ಷದ ಬಾಲಕಿ ನಿನಾದ ತನ್ನ ಅಣ್ಣನೊಟ್ಟಿಗೆ ಹಾಡಿದ ಎಲೆ ಮಾಮರವೇ ಹಾಡನ್ನ ಕೇಳಿದವರಿಗೆ ನಿನಾದ ಎನ್ನುವುದು ಅವಳ ಅಂಕಿತನಾಮವೂ ಹೌದು ಅನ್ವರ್ಥನಾಮವೂ ಹೌದು ಎನಿಸಿದ್ದು ಸುಳ್ಳಲ್ಲ. ಶಾಲಾದಿನಗಳಲ್ಲಿ ಕಲಿತ ಮೋಹಿನಿಯಾಟ್ಟಂ ಅನ್ನು ಎಷ್ಟೋವರ್ಷಗಳ ನಂತರ ಪ್ರದರ್ಶಿಸಿದ ವಿದ್ಯಾಸರಸ್ವತಿ ಯವರನ್ನು ನೋಡುವಾಗ ಕಲಿತ ಯಾವುದೇ ಕಲೆ ಯಾವುದೇ ಕಾಲಕ್ಕೂ ಪ್ರಯೋಜನಕ್ಕೆ ಬರುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ.

ನಿರೂಪಕಿಯರ ಬಾಯಿಂದ ಯಕ್ಷಗಾನ ಎನ್ನುವ ಶಬ್ಧ ಹೊರಟಾಗಿನಿಂದ ವಿನಾಯಕ ಹೆಗಡೆಯವರು ನಡೆಸಿಕೊಟ್ಟ ಯಕ್ಷಗಾನ ಮುಗಿಯುವ ವರೆಗಿನ ಪ್ರೇಕ್ಷಕನ ಸ್ಪಂದನೆ ಯನ್ನ ನೋಡುವಾಗ ಯಕ್ಷಗಾನದ ಮೇಲಿನ ಅನಿವಾಸಿ ಭಾರತೀಯರ ಆಸಕ್ತಿ  ಬೆರಗಾಗುವಂತೆ ಮಾಡಿದೆ. ಯಕ್ಷಗಾನದಂತಹಾ ಕಲೆಗೆ ಕಲಾಭಿಮಾನಿಗಳ ಆಸಕ್ತಿ ಗಮನಿಸಿ  ಮುಂಬರುವ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ಸ್ವಲ್ಪ ಹೆಚ್ಚಿನ ಕಾಲಾವಕಾಶ ಕೊಡುವ ನಿಟ್ಟಿನಲ್ಲಿ ಯೋಚಿಸಬೇಕು ಎನ್ನುವುದು ಹಲವರ  ಅಭಿಪ್ರಾಯ.

ಸ್ತ್ರೀ ಭ್ರೂಣಹತ್ಯೆಯ ಬಗ್ಗೆ ತಿಳುವಳಿಕೆ ಮೂಡಿಸುವ ಕಥಾಹಂದರವನ್ನ ಹೊಂದಿದ ನಾಟಕ “ಮಾಡಿದ್ದುಣ್ಣೋ ಮಹರಾಯ ” ಸಮಾಜಕ್ಕೆ ಸಂದೇಶ ವನ್ನ ಸಾರಿದರೆ, ಶ್ರೀ ಮಂಜುನಾಥ ಗಂಗೊಳ್ಳಿ ಯವರ ನಿರ್ದೇಶನದ ಹಾಸ್ಯಭರಿತ ನಾಟಕ ” ಹೇಳ್ವೋರ್ ಮಳ್ಳೊ   ಕೇಳವೋರ್ ಮಳ್ಳೊ” ಹೊನ್ನಾವರ ಪ್ರಾಂತ್ಯದ ಹವ್ಯಕರ ಭಾಷೆ ಸಂಸ್ಕೃತಿ ಗಳನ್ನ ಬಿಂಬಿಸುವಂತಿತ್ತು.

ಸಾಂಸ್ಕೃತಿಕ ಕಾರ್ಯಕ್ರಮದುದ್ದಕ್ಕೂ ಶ್ರೀ ಘನಶ್ಯಾಮ್ ಹೆಗಡೆಯವರು ತಬಲಾ ಹಾಗು ಕೀಬೋರ್ಡ್ ನಲ್ಲಿ ಸಹಕರಿಸಿದರೆ ಶ್ರೀ ಆನಂದ್ ಹೆಗಡೆಯವರು ತಾಂತ್ರಿಕ ಸಹಾಯ ನೀಡಿದ್ದರು.

ಪ್ರೇಕ್ಷಕರ ಸಹನೆ ಯನ್ನ ಒರೆಗೆ ಹಚ್ಚುವಂತಹ ಉದ್ದದ ಸಭಾ ಕಾರ್ಯಕ್ರಮ, ಸಂಘದ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಳ್ಳುವುದು ಫೋಟೋಸೆಶನ್ ಗಳೇ ಮುಂತಾದ ಯಾವುದೇ ಆಡಂಬರಗಳಿಲ್ಲದೆ ಒಂದು ಕಾರ್ಯಕ್ರಮವನ್ನ ಹೇಗೆ ನಡೆಸಬಹುದು ಎನ್ನುವುದಕ್ಕೆ ಮೇ 12 ರಂದು ದುಬೈ ನಲ್ಲಿ ನಡೆದ ಈ ಕಾರ್ಯಕ್ರಮ ಒಂದು ಮಾದರಿಯಾಗಿದೆ.

ಹೀಗೆ ಹಲವಾರು ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಂಘಟಿತವಾಗುವಂತಾಗಲಿ ಹೆಚ್ಚು ಹೆಚ್ಚು ಸದಸ್ಯರು ಸೇರುವಂತಾಗಲಿ ರಕ್ತದಾನ ಶಿಬಿರ ದಂತಹ ಸಮಾಜ ಮುಖಿ ಕಾರ್ಯಕ್ರಮಗಳೂ ಹವ್ಯಕ ಸಂಘದಿಂದ ನಡೆಯಲ್ಪಡಲಿ ಎಂದು ಹಾರೈಸುತ್ತೇನೆ.

ವರದಿ: ಮೂರ್ತಿ ಹೊಸಬಾಳೆ


Spread the love
3 Comments
Inline Feedbacks
View all comments
Prakash Rao
7 years ago

It was a very memorable evening indeed! Thank you for posting such a comprehensive report on the event.

Prasad Vedavaahini
7 years ago

Fantastic mind blowing performance from Kids and all other participants..Enjoyed each and every moment of the function…Thanks for organising such beautiful event..

Amarnath Noojibail
7 years ago

Thoroughly enjoyed for being the part of this fentabulous event…..congratulations to each n every participant of the event n thank u all to the volunteers of the event……Last but not the least, brilliant n perfect write up of the event, thank u Shri Moorthy Hasabaleyavare

wpDiscuz
Exit mobile version