ಯೋಧ ಎಕನಾಥ ಶೆಟ್ಟಿಯವರ ಸಮವಸ್ತ್ರ ಹುಟ್ಟೂರಿಗೆ
ಮಂಗಳೂರು: ಯೋಧ ಎಕನಾಥ ಶೆಟ್ಟಿಯವರ ಸಮವಸ್ತ್ರವನ್ನು ಅವರ ಹುಟ್ಟೂರು ಗುರುವಾಯನಕೆರೆಗೆ ಶುಕ್ರವಾರ ತರಲಾಯಿತು. ಮಂಗಳೂರಿಗೆ ಆಗಮಿಸಿದ ಯೋಧರ ಸಮವಸ್ತ್ರವನ್ನು ನಗರದ ಪೋಲಿಸ್ ಮೈದಾನದಲ್ಲಿ ಗೌರವ ಸಲ್ಲಿಸಲಾಯಿತು.
ಯೋಧ ಎಕನಾಥ್ ಶೆಟ್ಟಿ ಬಳಸುತ್ತಿದ್ದ ಸಮವಸ್ತ್ರ ಶೂ, ಟವೆಲ್ ಹಾಗೂ ಇನ್ನಿತರ ವಸ್ತುಗಳನ್ನು ರೈಲಿನ ಮೂಲಕ ಮಂಗಳೂರಿಗೆ ತರಲಾಯಿತು. ಬಳಿಕ ಅದನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಕಚೇರಿಗೆ ತಂದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎಸ್ಪಿ ಭೂಷಣ್ ಬೋರಸೆ, ಎಸಿಪಿ ಉದಯ್ ನಾಯಕ್ ಹಾಗೂ ಇತರರು ಗೌರವ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಎಕನಾಥ್ ಶೆಟ್ಟಿಯವರು ದೇಶಕ್ಕಾಗಿ ದುಡಿದ್ದಿದ್ದು ಅವರ ಬರುವಿಕೆಗಾಗಿ ಮನೆಯವರು ಕಾಯುತ್ತಿದ್ದರು. ಆದರೆ ಅವರು ಇತರ 29 ಸೈನಿಕರ ಜೊತೆ ವಿಮಾನದಲ್ಲಿ ನಾಪತ್ತೆಯಾಗಿದ್ದು ಈಗ ಅವರು ಮರಣ ಹೊಂದಿದ್ದಾರೆ ಎಂದು ಘೋಷಿಸಲಾಗಿದೆ ಎಂದರು.
ಸಚಿವ ರಮಾನಾಥ ರೈ ಮಾತನಾಡಿ ಹಲವಾರು ಸೈನಿಕರು ತಮ್ಮ ಜೀವನವನ್ನು ದೇಶಕ್ಕಾಗಿ ಅರ್ಪಿಸಿದ್ದು ಅದರಲ್ಲಿ ಏಕನಾಥ್ ಶೆಟ್ಟಿ ಕೂಡ ಒಬ್ಬರು. ಅವರು ಜೀವಂತ ಇದ್ದಾರೋ ಇಲ್ಲವೋ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅದರೆ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಅವರಿಗೆ ನಾವು ನಮ್ಮ ಗೌರವವನ್ನು ಸಲ್ಲಿಸಿದ್ದೇವೆ. ದೇವರು ಅವರ ಕುಟುಂಬಕ್ಕೆ ಆದ ದುಖವನ್ನು ಸಹಿಸಲು ಶಕ್ತಿ ನೀಡಲಿ ಎಂದರು.
ಈ ವೇಳೆ ಏಕನಾಥ್ ಶೆಟ್ಟಿಯವರ ತಂದೆ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಬಳಿಕ ಸಮವಸ್ತ್ರವನ್ನು ಗುರುವಾಯನಕೆರೆಗೆ ಕೊಂಡೊಯ್ಯದ್ದು, ಗೌರವ ಸಲ್ಲಿಸಲಾಯಿತು.