Home Mangalorean News Kannada News ರಂಗೋತ್ಸವ ಸಾಂಸ್ಕೃತಿಕ ಸ್ಪರ್ಧೆಯ ಪಟ್ಟಿಯಿಂದ ಭೂತಾರಾಧನೆಯನ್ನು ಕೈ ಬಿಡುವಂತೆ ಆಗ್ರಹ

ರಂಗೋತ್ಸವ ಸಾಂಸ್ಕೃತಿಕ ಸ್ಪರ್ಧೆಯ ಪಟ್ಟಿಯಿಂದ ಭೂತಾರಾಧನೆಯನ್ನು ಕೈ ಬಿಡುವಂತೆ ಆಗ್ರಹ

Spread the love

ರಂಗೋತ್ಸವ ಸಾಂಸ್ಕೃತಿಕ ಸ್ಪರ್ಧೆಯ ಪಟ್ಟಿಯಿಂದ ಭೂತಾರಾಧನೆಯನ್ನು ಕೈ ಬಿಡುವಂತೆ ಆಗ್ರಹ

ಮಂಗಳೂರು: ಶಾಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ರಂಗೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಭೂತಾರಾಧನೆಯ ಉಲ್ಲೇಖವನ್ನು ಕೈ ಬಿಡುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ದೇಶದ ವಿಭಿನ್ನ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿರುಚಿ ಮೂಡಿಸುವ ಸಲುವಾಗಿ ಆಯೋಜಿಸಿರುವ ರಂಗೋತ್ಸವ ಕಾರ್ಯಕ್ರಮವು ಒಂದು ಉತ್ತಮ ಪರಿಕಲ್ಪನೆಯಾಗಿದೆ. ರಂಗೋತ್ಸವದ ಸಲುವಾಗಿ ಯಾವೆಲ್ಲ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಿದೆ ಎಂಬ ಬಗ್ಗೆ ಉದಾಹರಣೆಗಾಗಿ ನೀಡಲಾಗಿರುವ ಪಟ್ಟಿಯಲ್ಲಿ ಭೂತಾರಾಧನೆಯನ್ನು ಉಲ್ಲೇಖ ಮಾಡಿರುವುದು ಇಲಾಖೆಯ ಸರಿಯಾದ ನಡೆಯಾಗಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಸುತ್ತೋಲೆಯಿಂದ ಭೂತಾರಾಧನೆಯ ಹೆಸರನ್ನು ಕೈ ಬಿಟ್ಟು ಪ್ರತ್ಯೇಕ ಸುತ್ತೋಲೆಯನ್ನು ಪ್ರಕಟಿಸಬೇಕೆಂದು ಆಗ್ರಹಿಸಿದ್ದಾರೆ. ಭೂತಾರಾಧನೆಯು ಕರಾವಳಿಯ ಅತ್ಯುನ್ನತ ಸಾಂಸ್ಕೃತಿಕ ಹಾಗೂ ಆರಾಧನಾ ಪರಂಪರೆಯಾಗಿರುತ್ತದೆ. ಆದರೆ ಭೂತಾರಾಧನೆಯನ್ನು ಸಾಂಸ್ಕೃತಿಕ ಸ್ಪರ್ಧೆಯ ಭಾಗವಾಗಿ ಪರಿಗಣಿಸುವುದು ಸೂಕ್ತವಲ್ಲ. ಆರಾಧನ ಪ್ರಕಾರ ಒಂದನ್ನು ಶಾಲೆಗಳ ಸ್ಪರ್ಧಾ ವೇದಿಕೆಗೆ ತಂದಾಗ ಜನರ ನಂಬಿಕೆಗೆ ಘಾಸಿಯಾಗುವುದು ಸಹಜ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇಲಾಖೆಯು ತಕ್ಷಣ ಈಗಾಗಲೇ ಹೊರಡಿಸಿರುವ ಸುತ್ತೋಲೆಯನ್ನು ಪುನರ್ ಪರಿಶೀಲನೆ ಮಾಡಿ ಉದಾಹರಣೆಗಾಗಿ ನೀಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಭೂತಾರಾಧನೆಯ ಹೆಸರನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.


Spread the love

Exit mobile version