Home Mangalorean News Kannada News ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ: ಡಾ.ಅಶೋಕ್

ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ: ಡಾ.ಅಶೋಕ್

Spread the love

ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ: ಡಾ.ಅಶೋಕ್

ಉಡುಪಿ: ರಕ್ತದಾನದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮ ಮಟ್ಟದಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ, ವಿದ್ಯಾರ್ಥಿ ಸಮುದಾಯದಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ವಿಷಯಗಳಿಗಾಗಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್ ಹೆಚ್ ಹೇಳಿದ್ದಾರೆ.

ಅವರು ಮಂಗಳವಾರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಉಡುಪಿ, ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಉಡುಪಿ, ಹೆಚ್ಡಿಎಫ್ಸಿ ಬ್ಯಾಂಕ್, ಯುವ ರೆಡ್ಕ್ರಾಸ್, ಎನ್ಎಸ್ಎಸ್ ರೋಟರ್ಯಾಕ್ಟ್ ಕ್ಲಬ್ ಸರಕಾರಿ ಪಾಲಿಟೆಕ್ನಿಕ್ ಉಡುಪಿ, ಲಯನ್ಸ್ ಕ್ಲಬ್ ಪರ್ಕಳ, ಉಡುಪಿ ಮಿಡ್ಟೌನ್, ಐಟಿಐ ಉಡುಪಿ, ಎನ್.ಎಸ್.ಎಸ್ ಘಟಕ ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು, ಎನ್.ಎಸ್.ಎಸ್ ಘಟಕ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಹಾಗೂ ರೋಟರಿ ಕ್ಲಬ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ, ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ ಎಂಬ ಘೋಷ ವಾಕ್ಯದಡಿಯಲ್ಲಿ ಅಜ್ಜರಕಾಡು ಪುರಭವನದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ-ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದ.ಕ ಮತ್ತು ಉಡುಪಿ ಜಿಲ್ಲೆ ಮೀನು ಮಾರಾಟ ಸಂಘದ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಫಲಾಪೇಕ್ಷೆ ಇಲ್ಲದೇ ಯಾವುದನ್ನೂ ಬಯಸದೇ ಮಾಡುವ ದಾನ ರಕ್ತದಾನ. 5 ವರ್ಷಗಳಲ್ಲಿ ರಾಜ್ಯದಲ್ಲಿ ರಕ್ತದಾನದಲ್ಲಿ ಕ್ರಾಂತಿ ಮಾಡಿರುವ ಕೀರ್ತಿ ಉಡುಪಿ ಜಿಲ್ಲೆಗೆ ಸಲ್ಲುತ್ತದೆ. ಜಿಲ್ಲೆಯಲ್ಲಿನ ಅನೇಕ ಸಂಘ ಸಂಸ್ಥೆಗಳಿಂದ ರಕ್ತದಾನದ ಬಗ್ಗೆ ಅರಿವು ಮೂಡಿಸಿ, ರಕ್ತದಾನದಲ್ಲಿ ಭಾಗಿಯಾಗುವಂತೆ ಹುರಿದುಂಬಿಸಲಾಗುತ್ತಿದೆ ಎಂದರು.

ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸಬಹುದಾಗಿದೆ, ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂದು ಕಾಪು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಲಯನ್ಸ್ ಜಿಲ್ಲಾ ಗರ್ವನರ್ ವಿ.ಜಿ ಶೆಟ್ಟಿ ಮಾತನಾಡಿ, ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. 1 ಯುನಿಟ್ ರಕ್ತದಿಂದ 3 ಜೀವಗಳನ್ನು ಉಳಿಸಬಹುದಾಗಿದ್ದು, ಜೀವ ಉಳಿವಿಗಾಗಿ ರಕ್ತವನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ. ಇತರೆ ಜಿಲ್ಲೆಗಳಿಗಿಂತಲೂ ಉಡುಪಿ ಜಿಲ್ಲೆಯಲ್ಲಿ ರಕ್ತದಾನ ಹೆಚ್ಚಿನ ಮಟ್ಟದಲ್ಲಿ ನಡೆಯುತ್ತಿದ್ದು ಇದು ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಗೋವಾ ಕ್ವಾಲಿಟಿ ಎಕ್ಸ್ಪೋಟ್ಸ್ನ ಜನಾಬ್ ಎಂ ಎಂ ಇಬ್ರಾಹಿಂ, ದುಬೈ ಮತ್ತು ಮುಂಬೈ ಪೆನಿನ್ಸುಲ ಗ್ರೂಪ್ಆಫ್ ಹೋಟೆಲ್ನ ಅಧ್ಯಕ್ಷ ಕರುಣಾಕರ್ಆರ್ ಶೆಟ್ಟಿ, ದುಬೈ ನಜನಾಬ್ ಎ ಆರ್ ಬ್ಯಾರಿ, ಜಿಲ್ಲಾ ಮೊಗವೀರ ಸಂಘಟನೆಯ ಜಿಲ್ಲಾಧ್ಯಕ್ಷ ವಿನಯ್ ಕರ್ಕೆರಾ, ಗಂಗೊಳ್ಳಿ ರಕ್ತದಾನಿ ದಿವಾಕರ್ ಎನ್ ಖಾರ್ವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ಜಿ, ಮಣಿಪಾಲ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ, ಉಡುಪಿ ಹೆಚ್ಡಿಎಫ್ಸಿ ಬ್ಯಾಂಕ್ ಪ್ರಬಂಧಕ ಪ್ರಸನ್ನ ಕುಮಾರ್, ಅಜ್ಜರಕಾಡು ಡಾ.ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ರಾಜೇಂದ್ರ ಕೆ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾಕುಮಾರಿ, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಖಜಾಂಚಿ ಬಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಹೆಚ್ ಉದಯ್ ಕುಮಾರ್ ಶೆಟ್ಟಿ, ಜಗದೀಶ್, ಗಣಪತಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಸುಮಾ ಎಸ್ ಮತ್ತು ನಾಗರಾಜ್ ಜಿ.ಎಸ್ ನಿರೂಪಿಸಿದರು. ರಾಜ್ಯ ಪರಿಷತ್ ಸದಸ್ಯ ಕೆ. ಕಿರಣ್ ಹೆಗ್ಡೆ ವಂದಿಸಿದರು.


Spread the love

Exit mobile version