ರಸ್ತೆಯಲ್ಲಿ ಮೀನಿನ ತಾಜ್ಯ ನೀರು; ಮೀನು ಸಾಗಾಟ ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ ಹಾಕುವಂತೆ ಒತ್ತಾಯ
ಮಂಗಳೂರು : ಮಂಗಳೂರು ಉಪ ಪೋಲೀಸ್ ಆಯುಕ್ತರ ಎಚ್ಚರಿಕೆಗೆ ಸೊಪ್ಪು ಹಾಕದೆ ನಿರಂತರ ರಸ್ತೆಯಲ್ಲಿ ತಾಜ್ಯ ನೀರು ಚೆಲ್ಲುತ್ತಾ ಪರಿಸರ ಮಾಲಿನ್ಯ ಹಾಗೂ ರಸ್ತೆ ಕೆಡಲು ಕಾರಣರಾದ ಮೀನು ಸಾಗಾಟ ಮಾಲಿಕರ ಮೇಲೆ ಕ್ರಿಮಿನಲ್ ಕೇಸ್ ಹಾಗೂ ವಾಹನದ ಪರವಾನಿಗೆ ರದ್ದು ಪಡಿಸಲು ಪೋಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು.
ಅವರು ಮಂಗಳೂರಿನ ಹೋಟೇಲ್ ವುಡ್‍ಲ್ಯಾಂಡ್ಸ್‍ನಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ತುಳುನಾಡಿನ ಪ್ರಮುಖ ಉದ್ಯಮಗಳಲ್ಲಿ ಮತ್ಸೋದ್ಯಮವು ಒಂದು. ಮೀನು ಮತ್ತು ಅದರ ಉತ್ಪನ್ನಗಳು ತುಳುನಾಡಿನ ಜನರ ಪ್ರಮುಖ ಆಹಾರ. ಮಂಗಳೂರಿನಲ್ಲಿ ಅನೇಕ ಮೀನು ಸಂಸ್ಕರಣ ಘಟಕಗಳಿದ್ದು, ಇಲ್ಲಿನ ಮೀನು ವಿದೇಶಗಳಿಗೆ ರಫ್ತಾಗುವುದರಿಂದ ವಿದೇಶದಲ್ಲೂ ಜನಮನ್ನಣೆ ಪಡೆದಿದೆ ಇಲ್ಲಿ ಪ್ರತಿ ನಿತ್ಯವೂ ದೂರದ ಊರಿನಿಂದ ಹಲವಾರು ಪ್ರವಾಸಿಗಳು – ವಿದ್ಯಾರ್ಥಿಗಳು ಆಗಮಿಸಿ ಇಲ್ಲಿನ ಪ್ರಕೃತಿ ಸೌಂದರ್ಯ ಸವಿದು ಹಾಗೂ ಮೀನಿನ ಖಾದ್ಯ ಸೇವಿಸಿ ವೈವಿಧ್ಯತೆಯನ್ನು ಕೊಂಡಾಡುತ್ತಾರೆ. ಆದರೆ ಇನ್ನೊಂದೆಡೆ ಮಂಗಳೂರಿನ ಹಳೆ ಬಂದರು ಪ್ರದೇಶದಿಂದ ಮೀನು ತುಂಬಿಸಿಕೊಂಡು ಪಾಂಡೇಶ್ವರ, ಎಮ್ಮೆಕೆರೆ, ಮಂಕಿಸ್ಟಾಂಡ್, ಮಂಗಳಾದೇವಿ, ಮೋರ್ಗನ್ಸ್‍ಗೇಟ್, ಜಪ್ಪಿನಮೊಗರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತ ತೊಕ್ಕೊಟ್ಟು, ಉಳ್ಳಾಲ ಹಾಗೂ ಕೇರಳದ ಕಡೆಗೆ ಸಾಗುವ ಮೀನು ಸಾಗಾಟ ಲಾರಿಗಳು ರಸ್ತೆಯುದ್ದಕ್ಕೂ ಅದರ ನಿರುಪಯುಕ್ತ ನೀರನ್ನು ಚೆಲ್ಲುತ್ತಾ, ವೇಗವಾಗಿ ಸಂಚರಿಸುತ್ತವೆ. ಈ ಉಪ್ಪು ಮಿಶ್ರಿತ ಶೀತಲ ನೀರಿನ ದುರ್ವಾಸನೆಯಿಂದ ಸುತ್ತಮುತ್ತಲು ವಾಸಿಸುವ ಜನರ, ವಾಹನ ಸವಾರರ, ಅಂಗಡಿ ಮಾಲಿಕರ ಸ್ವಾಸ್ತ್ಯ ಹಾಳಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಹಾಗೂ ಹೊರ ಬಿಡುವ ತಾಜ್ಯ ನೀರಿನಿಂದ ರಸ್ತೆಗಳು ಹಾಳಾಗುವುದಲ್ಲದೆ, ಮೂಕ ಪ್ರಾಣಿಗಳು ಇದರ ವಾಸನೆಯಿಂದ ಆಕರ್ಷಿತರಾಗಿ ವಾಹನಗಳ ಚಕ್ರಗಳಿಗೆ ಸಿಲುಕಿ ಪ್ರಾಣ ತ್ಯಜಿಸಿ ರಸ್ತೆಯಲ್ಲಿ ಬಿದ್ದಿರುವ ಪರಿಣಾಮವಾಗಿ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತಿವೆ. ತೈಲದ ಅಂಶವಿರುವ ತಾಜ್ಯ ನೀರಿನಿಂದಾಗಿ ಬೈಕ್ ಸವಾರರು ಟೈರ್ ಸ್ಕಿಡ್ ಆಗಿ ಅಪಘಾತಗಳಿಗೆ ಕಾರಣವಾಗಿ ಜೀವ ತೆತ್ತುಕೊಂಡಿದ್ದಾರೆ.
ಈ ಸಂಬಂಧ ತುಳುನಾಡ ರಕ್ಷಣಾ ವೇದಿಕೆಯು ಕಳೆದ ವರ್ಷ ಫೆಬ್ರವರಿ 5, 2016ರಂದು ಮೋರ್ಗನ್ಸ್ ಗೇಟ್ ಜಂಕ್ಷನ್ ಬಳಿ ಬೆಳಗ್ಗಿನ ಜಾವ ಮೀನು ಲಾರಿಗಳನ್ನು ತಡೆದು, ಪೋಲೀಸರ ಮುಖಾಂತರ ದಂಡ ವಿಧಿಸುವ ಮೂಲಕ ಪ್ರತಿಭಟನೆ ಹಾಗೂ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರತಿಭಟನೆಯ ಫಲವಾಗಿ ಕೆಲ ಸಮಯ ಮೀನಿನ ತಾಜ್ಯ ನೀರು ಸೋರಿಕೆಯು ಸ್ಥಗಿತಗೊಂಡಿತ್ತು. ಆದರೆ ಮತ್ತೆ ಈಗ ಕೆಲ ಸಮಯದಿಂದ ಮೀನಿನ ತಾಜ್ಯ ನೀರನ್ನು ರಸ್ತೆಗೆ ಬಿಡಲಾಗುತ್ತಿದೆ. ಸರಕಾರ ಮೀನಿನ ಲಾರಿಗಳಿಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಇದಾವುದನ್ನು ಈ ಲಾರಿ ಚಾಲಕರು ಹಾಗೂ ಮಾಲಕರು ಪಾಲಿಸುತ್ತಿಲ್ಲ. ಸ್ವಚ್ಛತೆ ಹಾಗು ನೈರ್ಮಲ್ಯದ ವಿಷಯದಲ್ಲಿ ಮಂಗಳೂರು ಕರ್ನಾಟಕದಲ್ಲಿ ಮುಂದಿದ್ದು ಆದರೆ ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಹಿಂದೆ ಸರಿಯುವ ಸಾಧ್ಯತೆ ಇದೆ.
ಕೆಲ ತಿಂಗಳ ಹಿಂದೆ ಮಂಗಳೂರಿನ ಉಪ ಪೋಲೀಸ್ ಆಯುಕ್ತರು ಮೀನಿನ ಲಾರಿಗಳ ಮಾಲೀಕರ ಸಭೆಯಲ್ಲಿ, ಸಾರ್ವಜನಿಕರಿಂದ ಮೀನಿನ ಲಾರಿಗಳು ರಸ್ತೆಗೆ ಚೆಲ್ಲುವ ತಾಜ್ಯ ನೀರಿನ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ತಾಜ್ಯ ನೀರನ್ನು ರಸ್ತೆಗೆ ಬಿಡಬಾರದು ಮತ್ತು ಅದರ ಸಂಗ್ರಹಕ್ಕೆ ಡ್ರಮ್ ಬಳಕೆ ಮಾಡಿ ನಿಗದಿತ ಪ್ರದೇಶದಲ್ಲಿ ಖಾಲಿ ಮಾಡಬೇಕು ಒಪನ್ ಟ್ರಕ್‍ಗಳಲ್ಲಿ ಮೀನು ಸಾಗಾಟ ಮಾಡುವಂತಿಲ್ಲ, ನೀತಿ ನಿಯಮಗಳನ್ನು ಪಾಲಿಸಬೇಕು, ಸೂಚನೆ ನೀಡಿದ ಬಳಿಕವೂ ಕಾನೂನು ಮೀರಿದರೆ ಅಂತಹ ಲಾರಿಗಳ ಮೇಲೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದಿದ್ದರು. ಆದರೆ, ಉಪ ಪೋಲೀಸ್ ಆಯುಕ್ತರ ಎಚ್ಚರಿಕೆಗೆ ಕ್ಯಾರ್ ಎನ್ನದೆ ಲಾರಿ ಮಾಲೀಕರು ಹಾಗೂ ಚಾಲಕರು ತಾಜ್ಯ ನೀರನ್ನು ರಸ್ತೆಗೆ ಚೆಲ್ಲುತ್ತ ಸಾಗುತ್ತಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯು ಲಾರಿ ಮಾಲೀಕರ ಈ ನಡವಳಿಕೆಯನ್ನು ಖಂಡಿಸುತ್ತಿದ್ದು ತಕ್ಷಣ ತಾಜ್ಯ ಮೀನಿನ ನೀರನ್ನು ರಸ್ತೆಗೆ ಚೆಲ್ಲುವುದನ್ನು ನಿಲ್ಲಿಸಿ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಸಂಪ್ ನಿರ್ಮಿಸಿ ಮೀನಿನ ಲಾರಿಗಳ ಕಲ್ಮಷ ತಡೆಯಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೀನಿನ ಲಾರಿಗಳನ್ನು ತಡೆದು ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದರು. ಅಲ್ಲದೆ ಪೋಲಿಸ್ ಇಲಾಖೆ ಕೂಡ ಮೃದು ಧೋರಣೆ ಅನುಸರಿಸುವುದನ್ನು ಬಿಟ್ಟು ಮೀನಿನ ತಾಜ್ಯ ನೀರನ್ನು ರಸ್ತೆಗೆ ಬಿಡುವ ಲಾರಿ ಮಾಲಿಕರ ವಿರುದ್ಧ ಕೇಸ್ ದಾಖಲಿಸಿ ಮತ್ತು ಅವರ ವಾಹನ ಪರವಾನಿಗೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು. ಹಾಗೂ ಈ ಬಗ್ಗೆ ಸರಕಾರ ಕಠಿಣ ಕಾನೂನು ಕ್ರಮ ತರಬೇಕಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ರೂಪದರ್ಶಿ ಹಾಗೂ ಚಲನಚಿತ್ರ ನಟಿ ಪೂಜಾ ಶೆಟ್ಟಿ, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ ಅಮೀನ್ ಅಡ್ಯಾರ್ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ. ಸಿರಾಜ್ ಅಡ್ಕರೆ, ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳಾದ ಗಂಗಾಧರ ಅತ್ತಾವರ, ನೇಮು ಕೊಟ್ಟಾರಿ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.