ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಟೆ ಸರಿಯೇ?; ನಾಗರಿಕ ಡಾ. ಚಂದ್ರಶೇಖರ್ ಶೆಟ್ಟಿ ಪ್ರಶ್ನೆ

Spread the love

ರಸ್ತೆಯ ವಿಚಾರದಲ್ಲಿ ಒಣ ಪ್ರತಿಷ್ಟೆ ಸರಿಯೇ?; ನಾಗರಿಕ  ಡಾ. ಚಂದ್ರಶೇಖರ್ ಶೆಟ್ಟಿ ಪ್ರಶ್ನೆ

ಇತ್ತೀಚೆಗೆ ಮಂಗಳೂರಿನ ಒಂದು ಪ್ರತಿಷ್ಟಿತ ರಸ್ತೆಗೆ ಮರುನಾಮಕರಣ ವಿವಾದದಿಂದಾದ ಗೊದಲದಿಂದ ಮನನೊಂದು ನಾಗರಿಕರಾದ ಡಾ. ಚಂದ್ರಶೇಖರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಒಂದು ಸಣ್ಣ ವಿವಾದ, ಅದೂ, ಕೆಲವು ಅಧಿಕಾರಿಗಳ ಜ್ಞಾನದ ಕೊರತೆಯಿಂದಾಗಿ ಉಂಟಾಗಿದ್ದು, ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದದ್ದು ಬೇಸರ ತರಿಸುತ್ತದೆ. ನಾನು ಕಳೆದ 19 ವರ್ಷಗಳಿಂದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಧ್ಯಾಪಕನಾಗಿ ದುಡಿಯುತ್ತಿದ್ದು, ನನಗೆ ತಿಳಿದ ಪ್ರಕಾರ ಕಾಲೇಜಿನ ಶತಮಾನೋತ್ಸವ ಸಂದರ್ಭದಲ್ಲಿ, ಲೈಟ್‍ಹೌಸ್ ರಸ್ತೆಗೆ ‘ಸಂತ ಅಲೋಶಿಯಸ್ ಕಾಲೇಜು ರಸ್ತೆ’ ಎಂದು ನಾಮಕರಣ ಮಾಡಲಾಯಿತು. ಅದರ ನಾಮಫಲಕವನ್ನು ಕಸ್ತೂರ್ಬಾ ಕಾಲೇಜಿನ ಆವರಣದಲ್ಲಿ ಹಾಕಿರುವುದು ಆ ಸಂಸ್ಥೆಯವರು ಕಾಲೇಜಿನ ಬಗ್ಗೆ ತೋರುವ ಗೌರವವನ್ನು ಸೂಚಿಸುತ್ತದೆ. ಸಂತ ಅಲೋಶಿಯಸ್ ಸಂಸ್ಥೆಗೆ 137 ವರ್ಷಗಳ ಇತಿಹಾಸವಿದ್ದು ಸಹಸ್ರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿಉದ್ಯೋಗ ಪಡೆದಿದ್ದಾರೆ. ಈ ರಸ್ತೆಯಲ್ಲಿರುವ ಈ ಸಂಸ್ಥೆ ಮಂಗಳೂರಿನ ಗೌರವ ಹೆಚ್ಚಿಸಿದೆ. ವಿಶ್ವ ಪ್ರಸಿದ್ದ ಚಾಪೆಲ್ ಒಂದು ಪ್ರವಾಸಿ ತಾಣವಾಗಿದ್ದು ದೇಶವಿದೇಶಗಳಿಂದ ಪ್ರವಾಸಾರ್ತಿಗಳು ಪ್ರತಿ ವರುಷ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಾರೆ.

ಅದಕ್ಕೂ ಮಿಗಿಲಾಗಿ ಮುಲ್ಕಿ ಸುಂದರರಾಮ ಶೆಟ್ಟಿಯವರಂತಹ ಧೀಮಂತ ವ್ಯಕ್ತಿಯ ಹೆಸರಲ್ಲಿ ಈ ವಿವಾದ ಉಂಟಾಗಿರುವುದು ಮನಸ್ಸಿಗೆ ನೋವುಂಟು ಮಾಡುತ್ತದೆ. ಸುಂದರರಾಮ ಶಟ್ಟಿಯವರು ಒಂದು ಆರ್ಥಿಕ ಸಂಸ್ಥೆಯನ್ನು ಹುಟ್ಟು ಹಾಕಿದವರು. ಅವರ ಅಭಿಮಾನಿಗಳು ಎಲ್ಲಾ ಜಾತಿ ಧರ್ಮದಲ್ಲಿಯೂ ಇದ್ದಾರೆ.

ಅವರಂತಹ ಶ್ರೇಷ್ಟ ವ್ಯಕ್ತಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ದತ್ತಿ ಉಪನ್ಯಾಸಗಳನ್ನು ಪ್ರತೀ ವರ್ಷ ಏರ್ಪಡಿಸಿ ಹೊಸ ಜಾÐನಾರ್ಜನೆಗೆ ಅವಕಾಶ ಮಾಡಿಕೊಡಬೇಕು. ಅವರ ಹೆಸರಿನಲ್ಲಿ ವಿಧ್ಯಾರ್ಥಿವೇತನಗಳನ್ನು ಸ್ಥಾಪಿಸಬಹುದು. ಅಷ್ಟೇ ಏಕೆ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನೇ ಸ್ಥಾಪಿಸಬಹುದು. ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ರಸ್ತೆ ವಿವಾದವನ್ನು ಒಂದು ಪೃತಿಷ್ಟೆಯ ವಿಚಾರವನ್ನಾಗಿ ಮಾಡಬಾರದಾಗಿ ನನ್ನ ಅರಿಕೆ.

ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಬೆರೆಸುವುದು, ಒಂದಿಬ್ಬರು ರಾಜಕಾರಣಿಗಳನ್ನು ಹರಕೆಯ ಕುರಿಯಾಗಿಸುವುದು, ಉಳಿದವರು ತಮ್ಮ ರಾಜಕಾರಣದ ಚಾಣಾಕ್ಷತೆ ತೋರಿಸುವುದು ಮಂಗಳೂರಿಗೆ ಶೋಭೆ ತರುವುದಿಲ್ಲ. ಇನ್ನೊಂದು ಕಡೆ ಕಾಲೇಜಿನ ವಿಧ್ಯಾರ್ಥಿಗಳು ರಸ್ತೆ ಮರುನಾಮಕರಣವನ್ನು ವಿರೋದಿಸಿದರೇ ಹೊರತು ಮುಲ್ಕಿ ಸುಂದರರಾಮ ಶೆಟ್ಟಿಯವರನ್ನು ಅಲ್ಲ. ಸಂತ ಅಲೋಶಿಯಸ್‍ನ ಹೆಸರು ಸಂಸ್ಥೆಯ ಹೆಸರಾಗಿ ಮಾತ್ರವಲ್ಲದೇ ಒಬ್ಬ ಮನುಕುಲದ ಸೇವೆಯಲ್ಲಿ ಜೀವನವನ್ನು ಅರ್ಪಿಸಿದ ಸಂತರ ಹೆಸರೂ ಹೌದು. ಅವರ ಆದರ್ಶಗಳಿಂದ ಪ್ರೇರಣೆಗೊಂಡವರಲ್ಲಿ ಮಣಿಪಾಲದ ನಿರ್ಮಾತ್ರ ಟಿ ಎಂ ಎ ಪೈ, ನಿಟ್ಟೆಯ ಕನಸುಗಾರ ವಿನಯ ಹೆಗ್ಡೆಯವರು, ಕ್ರಾಂತಿಕಾರಿ ರಾಜಕಾರಣಿ ಜಾರ್ಜ್ ಪೆರ್ನಾಂಡಿಸ್ ರವರು, ಏನೆಪೋಯ ಅಬ್ದುಲ್ಲ ಕುಞಃ ಯವರು, ಇನ್ನೂ ಅನೇಕರು, ಅಗಣಿತ ಸಂಖ್ಯೆಯ ಅಲೋಶಿಯಸ್ ಕಾಲೇಜಿನ ಹಳೆವಿಧ್ಯಾರ್ಥಿಗಳ ಸಮುದಾಯ ಯಾವಾಗಲೂ ಕಾಲೇಜಿನ ಅಭಿಮಾನಿಗಳು ಮಾತ್ರವಲ್ಲ ಆಸ್ತಿಯೂ ಕೂಡಾ. ಸಂಸ್ಥೆಯನ್ನು ಪ್ರತಿನಿಧಿಸುವ ಏಸು ಸಭೆಯ ಸದಸ್ಯರು ಯಾವಾಗಲೂ ಯಾರೊಂದಿಗೂ ದ್ವೇಷ ಬಯಸಿದವರಲ್ಲ. ಯಾವ ಸಮೂದಾಯದೊಂದಿಗೂ ನಿಷ್ಟುರವಾಗಿ ನಡೆದುಕೊಂಡವರಲ್ಲ, ಅದರಲ್ಲಿ ಬಂಟ ಸಮೂದಾಯವೂ ಸೇರಿದೆ. ಕೆಲವೇ ಕೆಲವು ವ್ಯಕ್ತಿಗಳು ಬಂಟ ಸಮುದಾಯವನ್ನು ಶಿಕ್ಷಣ ಸಂಸ್ಥೆಯ ವಿರುದ್ದ ಎತ್ತಿ ಕಟ್ಟಲು ಪ್ರಯತ್ನ ಮಾಡುತ್ತಿರುವುದು ವಿಷಾದನೀಯ.

ಅಂತಿಮವಾಗಿ ತಪ್ಪುಗಳು ಎರಡೂ ಪಂಗಡಗಳಲ್ಲಿ ನಡೆದಿರಬಹುದು. ತಪ್ಪುಗಳನ್ನು ಸರಿಪಡಿಸಲು ಮತ್ತಷ್ಟು ತಪ್ಪುಗಳಿಂದ ಸಾಧ್ಯವಿಲ್ಲ. ಈ ವಿವಾದಕ್ಕೆ ಎಲ್ಲರೂ ಸೇರಿ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದನ್ನು ಮಂಗಳೂರು ಜನತೆ ಕಾತರದಿಂದ ಎದುರು ನೋಡುತ್ತಿದೆ


Spread the love