Home Mangalorean News Kannada News ರಹೀಂ ಟೀಕೆ ಅವರ ರಸವಾದಿ ಪುಸ್ತಕ ಬಿಡುಗಡೆ

ರಹೀಂ ಟೀಕೆ ಅವರ ರಸವಾದಿ ಪುಸ್ತಕ ಬಿಡುಗಡೆ

Spread the love

ಮಂಗಳೂರು: ಪೌಲ್ ಕೊಯ್ಲೊ ಅವರ ದಿ ಆಕಿಮಿಸ್ಟ್ (The Alchemist) ಗ್ರಂಥವನ್ನು ಲೇಖಕ ಅಬ್ದುಲ್ ರಹೀಂ ಟೀಕೆ ಕನ್ನಡಕ್ಕೆ ರಸವಾದಿ ಹೆಸರಿನಲ್ಲಿ ಅನುವಾದಿಸಿದ್ದು ಈ ಪುಸ್ತಕದ ಬಿಡುಗಡೆ ಶನಿವಾರ ನಡೆಯಿತು.

SONY DSC

ರಸವಾದಿ ಪುಸ್ತಕವನ್ನು ಖ್ಯಾತ ಸಾಹಿತಿ ನೋರ್ಬೆರ್ಟ್ ಡಿಸೋಜ (ನಾ. ಡಿಸೋಜ) ಬಿಡುಗಡೆಗೊಳಿಸಿದರು. ನಂತರ ಪುಸ್ತಕದ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದ ನಾ.ಡಿಸೋಜ ಅವರು,ಲೇಖಕ ಪೌಲ್ ಕೊಯ್ಲೊ ಒಂದು ಸರಳವಾದ ಕತೆಯನ್ನು ಅರ್ಥಪೂರ್ಣವಾಗಿ ತನ್ನ ಆಕಿಮಿಸ್ಟ್ ಪುಸ್ತಕದಲ್ಲಿ ಹೇಳುತ್ತಾನೆ. ಪುಸ್ತಕವು ಜನಪದ, ಪ್ರವಾಸಿ ಕಥನ, ಪೌರಾಣಿಕ, ರಾಜಕೀಯ, ಸಾಮಾಜಿಕ ಇನ್ನಿತರ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರಪಂಚದ ಏಕೈಕ ಪುಸ್ತಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ವಿದ್ಯುನ್ಮಾನ ಮಾಧ್ಯಮಗಳು ಮಕ್ಕಳನ್ನು ಕಸಿಯುತ್ತಿದೆ. ಎಲ್ಲಾ ಮಕ್ಕಳು ಹಣದ ಹಿಂದೆ ಹೋಗುತ್ತಿದ್ದಾರೆ. ಪುಸ್ತಕದ ಕಥಾನಾಯಕ ಸಾಂಟಿಯಾಗೋ ಕನಸಿನಲ್ಲಿ ಕಂಡ ನಿಧಿಯನ್ನು ಹುಡುಕಿ ಹೋಗುತ್ತಾನೆ. ಕಡೆಗೆ ತನ್ನ ಹೃದಯದಲ್ಲೇ ನಿಧಿಯಿದೆ ಎಂಬುದನ್ನು ಅರಿಯುತ್ತಾನೆ. ಅದೇ ರೀತಿ  ಗೊತ್ತು ಗುರಿಯಿಲ್ಲದೆ ಮುನ್ನುಗುವ ಮಕ್ಕಳಿಗೆ ಈ ಪುಸ್ತಕ ದಾರಿ ದೀಪವಾಗಲಿದ್ದು ಗುರಿಯನ್ನು ತೋರಿಸಲಿದೆ ಎಂದು ಪುಸ್ತಕದ ಉದ್ದೇಶವನ್ನು ವಿವರಿಸಿದರು.

ರಸವಾದಿ ಪುಸ್ತಕ ಲೇಖಕ ಅಬ್ದುಲ್ ರಹೀಂ ಮಾತನಾಡಿ, ನಾನು 20 ವರ್ಷಗಳ ಸದ್ದಿಲ್ಲದ ಜೀವನದಲ್ಲಿ ಮಕ್ಕಳೊಂದಿಗೆ ಕಳೆಯುತ್ತಿದ್ದೆ. ಈ ಸಂದರ್ಭ ನಾನು ಕಂಡಿದ್ದು ಕನಸುಗಳಿಲ್ಲದ ಮಕ್ಕಳನ್ನು ಮಾತ್ರ. ರಸವಾದಿಯಲ್ಲಿ ಅದ್ಘುತ ಶಕ್ತಿಯಿದ್ದು ಕನಸುಗಳನ್ನು ಕಟ್ಟಿಕೊಡುವ ಶಕ್ತಿಯಿದೆ. ಈ ದೃಷ್ಠಿಯಲ್ಲಿ ಪುಸ್ತಕವನ್ನು ಅನುವಾದಿಸಿದ್ದು ಮುಂದಿನ 6 ತಿಂಗಳೊಳಗೆ ರಾಜ್ಯದೆಲ್ಲೆಡೆ ಕನಿಷ್ಠ 1,000 ಪುಸ್ತಕದ ಪ್ರತಿಗಳನ್ನು ಜನರಿಗೆ ತಲುಪಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ  ಆಕಾಶವಾಣಿ ಮಂಗಳೂರು ವಿಭಾಗದ ಮುಖ್ಯಸ್ಥರಾದ ಡಾ. ವಸಂತಕುಮಾರ್ ಪೇರ್ಲ, ಲೇಖಕಿ ಸಾರಾ ಅಬೂಬಕ್ಕರ್, ಪ್ರೋ.ವಿವೇಕ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಉಮರ್ ಟೀಕೆ ಸ್ವಾಗತಿಸಿ, ಪುಸ್ತಕ ಪರಿಚಯ ಮಾಡಿಕೊಟ್ಟರು.


Spread the love

Exit mobile version