Home Mangalorean News Kannada News ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ

ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ

Spread the love

ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ

ಕಾರ್ಕಳ: ರಾಜಕೀಯ ಕ್ಷೇತ್ರವನ್ನು ನಾನು ಸೇವೆ ಮಾಡುವುದಕ್ಕಾಗಿ ಉಪಯೋಗಿಸಿಕೊಂಡಿದ್ದು ಅದನ್ನೇ ನಂಬಿಕೊಂಡವನು ನಾನು. ರಾಜಕೀಯ ಕ್ಷೇತ್ರ ಎನ್ನುವುದು ಒಂದಷ್ಟು ಜನರಿಗೆ ಸೇವೆ ಮಾಡಲು ಸಿಗುವ ಅವಕಾಶ ಎಂದು ಭಾವಿಸಿ ಸೇವೆ ನೀಡಿಕೊಂಡು ಬಂದವನು ನಾನು. ದರ್ಪ ದುರಂಹಕಾರ ಪ್ರತೀಕಾರ ತೀರಿಸುವ ಕೆಲಸ ನನ್ನ ಈ ವರೆಗಿನ ರಾಜಕೀಯ ಜೀವನದಲ್ಲಿ ಮಾಡಿಲ್ಲ. ಹಣ ಮಾಡಲು ಹೋಗಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ ಇದುವೇ ನನಗೆ ಈ ಚುನಾವಣೆಯಲ್ಲಿ ಶ್ರೀರಕ್ಷೆ ಆಗಲಿದೆ ಎಂಬ ಭಾವನೆಯಲ್ಲಿದ್ದೇನೆ ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟವರು ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿಯವರು.

 

ಅವರು ತಮ್ಮ ಚುನಾವಣಾ ಪ್ರಚಾರದ ವೇಳೆ ಮನಬಿಚ್ಚಿ ತಮ್ಮ ರಾಜಕೀಯ ಜೀವನದ ಏರಿಳಿತಗಳ ಕುರಿತು ಮೆಲುಕು ಹಾಕಿದ ಅವರು ನಾನು ನಡೆದು ಬಂದ ರಾಜಕೀಯ ಜೀವನವನ್ನು ಮುಂದಿಟ್ಟುಕೊಂಡು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡಿದ ಯೋಜನೆಗಳು ಹಾಗೂ ನನ್ನ ರಾಜಕೀಯ ಗುರುಗಳಾದ ವೀರಪ್ಪ ಮೊಯ್ಲಿಯಂತಹವರ ಆದರ್ಶಗಳನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದೇನೆ.

ನನ್ನ ರಾಜಕೀಯ ಜೀವನದಲ್ಲಿ ಈ ವರೆಗೆ ನಾನು ಹೇಗಿದ್ದೆ ಎನ್ನುವುದೇ ನನ್ನ ಗೆಲುವಿನ ಮಾನದಂಡ. ನನಗೆ ಯಾರು ಶತ್ರುಗಳಿಲ್ಲ, ಪ್ರತಿಕಾರದ ಮನೋಭಾವನೆಯಿಲ್ಲದೆ ದುರಂಹಕಾರ ತೋರ್ಪಡಿಸದೆ ಅಧಿಕಾರ ಸಿಕ್ಕಿದ ಸಂದರ್ಭದಲ್ಲಿ ಸಮಾನತೆ ಕಾಯ್ದುಕೊಂಡಿದ್ದೇನೆ. ಬದುಕಿಗಾಗಿ ರಾಜಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳದೆ ಅದನ್ನು ನನ್ನ ಸೇವಾ ಕ್ಷೇತ್ರ ಎಂದು ಪರಿಗಣಿಸಿದ್ದೇನೆ. ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ದನಾಗಿ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಸಮಾಜಮುಖಿಯಾದ ಚಟುವಟಿಕೆಗಳನ್ನು ನಿರ್ವಹಿಸದ ತೃಪ್ತಿ ಇದೆ

ಅವಕಾಶವಂಚಿತರಿಗೆ ಅವಕಾಶ ನೀಡುವುದೊರೊಂದಿಗೆ ಇಷ್ಟೊಂದು ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಿದಂತಹ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯನವರು. ಅವರು ನೀಡಿದ ಜನಪರ ಯೋಜನೆಗಳು ನನ್ನ ಗೆಲುವಿಗೆ ನೂರಕ್ಕೆ ನೂರು ಪೂರಕವಾಗಲಿದೆ. ಸಮಾಜದ 90% ಮನೆಗಳಿಗೆ ತಲುಪುವಂತಹ ಯೋಜನೆಗಳನ್ನು ರಾಜ್ಯಕ್ಕೆ ನೀಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯನವರು.

ಕಾರ್ಕಳದಲ್ಲಿ ಹೇಳುವಂತಹ ವಿಶೇಷ ಸಮಸ್ಯೆಗಳು ಇಲ್ಲದೆ ಹೋದರೂ ವಿಪರೀತ ಮಳೆ ಇಲ್ಲಿ ಬಂದರೂ ಕೂಡ ಕುಡಿಯುವ ನೀರಿನ ಸಮಸ್ಯೆಯನ್ನು ಬೇಸಿಗೆ ಕಾಲದಲ್ಲಿ ಅನುಭವಿಸುತ್ತೇವೆ. ಅಲ್ಲದೆ ರಸ್ತೆಗಳು ಹಾಗೂ ಇತರ ಅಭಿವೃದ್ಧಿ ಕೆಲಸಗಳು ಡಾ|ವೀರಪ್ಪ ಮೊಯ್ಲಿಯವರ ಕಾಲದಿಂದಲೂ ನಡೆದಿವೆ.

ಬಿಜೆಪಿಯವರು ಹಿಂದುತ್ವದ ಆಧಾರದಲ್ಲಿ ಪರಸ್ಪರ ಭಾವನೆಗಳನ್ನು ಕೆರಳಿಸಿ ಅಪನಂಬಿಕೆ ಹುಟ್ಟಿಸಿ ಮತಯಾಚನೆ ಮಾಡುತ್ತಿರುವುದು ಅವರ ವ್ಯವಸ್ಥೆ ಆಗಿರಬಹುದು. ಕಾಂಗ್ರೆಸ್ ಪಕ್ಷ ಜಾತ್ಯಾತೀತ ಮನೋಭಾವದ ಆಧಾರದ ಮೇಲೆ ಕಟ್ಟಿದ ಪಕ್ಷವಾಗಿದ್ದು ಎಲ್ಲಾ ಧರ್ಮ ಜಾತಿಯನ್ನು ಸೇರಿಕೊಂಡು ಸಂವಿಧಾನದ ಆಶಯದ ಮೇಲೆ ಎಲ್ಲರನ್ನೂ ಸಮಾನವಾಗಿ ಕಾಣುವುದು ನಮ್ಮ ಉದ್ದೇಶ ಅದರ ಆಧಾರದಲ್ಲಿಯೇ ಮತ ಕೇಳಲಿದ್ದೇನೆ.

ಟಿಕೇಟ್ ಹಂಚಿಕೆ ವೇಳೆ ಉಂಟಾದ ಗೊಂದಲಗಳು ಪರಿಹಾರಗೊಂಡಿದೆ. ಇದನ್ನು ಗೊಂದಲ ಎಂದು ಹೇಳಲು ಸಾಧ್ಯವಿಲ್ಲ ಆದರೆ ಟಿಕೇಟ್ ಪಡೆಯುವ ವೇಳೆ ಎಲ್ಲರಿಗೂ ಅವಕಾಶ ಪಡೆಯಬೇಕು ಎನ್ನುವ ಆಸೆ ಇರುವುದು ತಪ್ಪಲ್ಲ ಆದರೆ ಇರುವುದು ಒಬ್ಬರಿಗೆ ಮಾತ್ರ ಅವಕಾಶ ಆದ್ದರಿಂದ ಬೇಸರ ಸಹಜ. ಪಕ್ಷದ ವರಿಷ್ಟರು ಸೇರಿಕೊಂಡು ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡಿದ್ದಾರೆ.

ನನ್ನ ಪ್ರತಿಸ್ಪರ್ಧಿ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಇತ್ತೀಚೆಗೆ ನನ್ನ ವಿರುದ್ದ ಒಂದು ಹೇಳಿಕೆ ನೀಡಿದ್ದು ನಾನು ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದು ಹೇಳಿದ್ದಾರೆ. ಗೋಪಾಲ ಭಂಡಾರಿಯವರು ಕ್ಷೇತ್ರಕ್ಕೆ ಏನು ಮಾಡಿಲ್ಲ ಅವರು ಸ್ಪರ್ಧಾ ಕಣದಿಂದ ಹಿಂದೆ ಸರಿಯಬೇಕು ಎಂದಿದ್ದಾರೆ ನಾನು ಅವರ ಹಾಗೆ ದರ್ಪದ ಅಹಂಕಾರದ ಮಾತನ್ನು ಎಂದೂ ಆಡಿಲ್ಲ. ಅವರ ಹೇಳಿಕೆಯನ್ನು ನಾನು ಅರ್ಥ ಮಾಡಿಕೊಂಡಿರುವುದು ಹೇಗೆ ಎಂದರೆ ಗೋಪಾಲ ಭಂಡಾರಿಯವರು ರಾಜಕೀಯದಲ್ಲಿ ಯಾವತ್ತೂ ಹಣ ಮಾಡಿಲ್ಲ, ಭೃಷ್ಟಾಚಾರ ಅಂತೂ ಮಾಡೇ ಇಲ್ಲ ಗೋಪಾಲ ಭಂಡಾರಿಯವರ ಆಸ್ತಿ ಪ್ರಥಮ ಚುನಾವಣೆಯಲ್ಲಿ ಎಷ್ಟಿತ್ತೋ ಅದಕ್ಕಿಂತ ಕಡಿಮೆಯಾಗಿದೆಯೇ ಹೊರತು ಹೆಚ್ಚಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಮಂದಿ ಅಭ್ಯರ್ಥಿಗಳ ಪೈಕಿ ಅತೀ ಕಡಿಮೆ ಆಸ್ತಿ ಹೊಂದಿರುವವ ವ್ಯಕ್ತಿ ನಾನಾಗಿದ್ದೇನೆ.

ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರು ಕಳೆದ ಅವಧಿಯಲ್ಲಿ ಅಭಿವೃದ್ದಿ ಮಾಡುವುದರ ಬದಲು ಫ್ಲೆಕ್ಸ್ ಹಾಕಿಕೊಳ್ಳುವುದರಲ್ಲೇ ಸಮಯ ಕಳೆದಿದ್ದಾರೆ. ಪಕ್ಕದ ಉಡುಪಿ, ಕಾಪು, ಮೂಡಬಿದ್ರೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಿಗೆ ತಾಳೆ ಮಾಡಿದರೆ ಕಾರ್ಕಳ ಕ್ಷೇತ್ರ ಅಭಿವೃದ್ಧಿಯಲ್ಲಿ ತುಂಬಾ ಹಿಂದೆ ಇದ್ದಾರೆ. ಕೇಂದ್ರದಲ್ಲಿ ಇವರ ಸರಕಾರ ಇದ್ದರೂ ಯಾವುದೇ ಹಣ ತರಲು ಸಾಧ್ಯವಾಗಿಲ್ಲ ಆದರೆ ನಮ್ಮ ವಿನಂತಿಯ ಮೇರೆಗೆ ಸಿದ್ದರಾಮಯ್ಯನವರು ಬಾಹುಬಲಿ ಮಸ್ತಕಾಭಿಷೇಕ್ಕೆ ಅನುದಾನ ನೀಡಿದ್ದು ಅದರಿಂದ ಅಭಿವೃದ್ದಿ ಮಾಡಲಾಗಿದೆ ಹೊರತು ಇದರಲ್ಲಿ ಸುನೀಲ್ ಕುಮಾರ್ ಅವರ ಸಾಧನೆ ಏನೂ ಇಲ್ಲ.

ಕಾರ್ಕಳದ ಜನತೆ ನನಗೆ ಎರಡು ಬಾರಿ ಶಾಸಕನಾಗುವ ಅವಕಾಶ ನೀಡಿದ್ದು ಪ್ರಾಮಾಣಿಕಾವಾಗಿ ಅವರ ಸೇವೆ ಮಾಡಿದ್ದೇನೆ. ಕಳೆದ ಬಾರಿ ಹಣದ ಕೊರೆತೆಯಿಂದ ಅತೀ ಸಣ್ಣ ಅಂತರದಲ್ಲಿ ಸೋತಿದ್ದರೂ ಕೂಡ ಜನರೊಂದಿಗಿನ ಸಂಪರ್ಕವನ್ನು ನಿಲ್ಲಿಸಿಲ್ಲ. ಕಾರ್ಕಳದ ಜನ ಬಹಳ ಒಳ್ಳೆಯವರು ಅವರಿಗೆ ನನ್ನ ಮೇಲೆ ಅತೀವ ಪ್ರೀತಿ ವಿಶ್ವಾಸ ಇದೆ. ಕಳೆದ 2 ಬಾರಿ ಗೆಲ್ಲಿಸಿದ ಜನ ಮತ್ತೊಮ್ಮೆ ಈ ಬಾರಿ ಗೆಲ್ಲಿಸಬೇಕು ಎನ್ನುವುದು ಮಾತ್ರ ಅವರಲ್ಲಿ ನನ್ನ ಮನವಿಯಾಗಿದೆ. ನಾನು ಸೋತಾಗ ಗೆದ್ದಾಗ ಹೀಗೆಯೇ ಇದ್ದೇ ಮುಂದೆಯೂ ಹೀಗೆ ಇರುತ್ತೇನೆ ಎಂಬ ಮಾತಿಗೆ ನಾನು ಬದ್ಧನಿದ್ದೇನೆ. ಈ ಬಾರಿ ಕಾರ್ಕಳದ ಜನತೆ ನನ್ನನ್ನು ಆಯ್ಕೆ ಮಾಡಿದರೆ ಅವರ ನಿರೀಕ್ಷೆಗೆ ಮೀರಿ ವಿಧಾನಸಭೆಯಲ್ಲಿ ಅವರ ದನಿಯಾಗುವೆ ಎಂದರು.

ಗೋಪಾಲ ಭಂಡಾರಿಯವರ ಕಿರು ಪರಿಚಯ
ಗೇಣಿದಾರ ಕುಟುಂಬದ ದಿ.ನಂದ್ಯಪ್ಪ ಭಂಡಾರಿ-ದಿ.ಗಿರಿಜಮ್ಮ ಭಂಡಾರಿ ದಂಪತಿಯ ಪುತ್ರ ಗೋಪಾಲ ಭಂಡಾರಿ ಅವರು ಹೆಬ್ರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿ ತನ್ನ 19ನೇ ವಯಸ್ಸಿನಲ್ಲಿ ಭೂಮಸೂದೆ ಕಾಯ್ದೆಯಡಿ ಗೇಣಿದಾರ ಕುಟುಂಬದ ಪರ ಹೋರಾಟಕ್ಕೆ ಧುಮುಕುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1978ರಲ್ಲಿ ಭೂನ್ಯಾಯ ಮಂಡಳಿಯ ಕಿರಿಯ ಸದಸ್ಯರಾಗಿ ಆಯ್ಕೆಗೊಂಡು ಸತತ 12 ವರ್ಷಗಳ ಕಾಲ ಭೂರಹಿತರ ಪರವಾಗಿ ನಿಂತು ಸಮಾಜ ಸೇವೆ ಮಾಡಿದರು. ಮುಂದೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದರು. ಬೈಲೂರು ಜಿಲ್ಲಾ ಪರಿಷತ್ ಸದಸ್ಯರಾಗಿ ಸತತ ಎರಡು ಬಾರಿ ಆಯ್ಕೆಯಾದರು. ಕಾರ್ಕಳ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದರು. ಮುಂದೆ ಜಿಲ್ಲಾ ಪರಿಷತ್ ಯೋಜನಾ ಸಮಿತಿಯ ಅಧ್ಯಕ್ಷ, ಜಿಲ್ಲಾ ಪರಿಷತ್ತಿನ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಂಪೂರ್ಣ ಸಾಕ್ಷರತಾ ಆಂದೋಲನದ ಅಧ್ಯಕ್ಷರಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗಿ ರೂಪಿಸಿದರು. ಡಾ.ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದ ಬಳಿಕ 1999ರಲ್ಲಿ ಕಾರ್ಕಳದಿಂದ ಸ್ಪರ್ಧಿಸುವ ಅವಕಾಶವನ್ನು ಗೋಪಾಲ ಭಂಡಾರಿಗೆ ಬಿಟ್ಟುಕೊಟ್ಟರು. ಹೀಗೆ ಭಂಡಾರಿ ಅವರು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2004ರಲ್ಲಿ ಬಿಜೆಪಿಯ ಎದುರು ಸೋಲು ಕಂಡರು. 2008ರಲ್ಲಿ ಮತ್ತು ಕಾರ್ಕಳದ ಶಾಸಕರಾಗಿ ಪುನರಾಯ್ಕೆಗೊಂಡ ಭಂಡಾರಿ 2013ರಲ್ಲಿ ಪರಾಭವಗೊಂಡರು. ಈಗ ಮತ್ತೆ 2018ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.


Spread the love

Exit mobile version