ರಾಜಕೀಯ ಪ್ರೇರಿತ ದಾಳಿ: ಜೆಡಿಎಸ್ ಖಂಡನೆ
ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯದಲ್ಲಿ ನಿರ್ಧಿಷ್ಟ ರಾಜಕೀಯ ಪಕ್ಷದ ಮುಖಂಡರು, ಅವರ ಬೆಂಬಲಿಗರು ಉದ್ಯಮಿಗಳ ಮೇಲೆ ದಾಳಿ ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಬಿಜೆಪಿಯ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು ಇವರ ಹತಾಶ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣಾ ಅಭ್ಯರ್ಥಿಗಳ ಮನೋಸ್ಥೆರ್ಯವನ್ನು ಅಭದ್ರಗೊಳಿಸಲು ಈ ತಂತ್ರ ರೂಪಿಸಿದ್ದು ಇದಕ್ಕೆ ಈ ರಾಜ್ಯದ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಕರಾವಳಿಯ ಪ್ರತಿಷ್ಟಿತ ವಿಜಯ ಬ್ಯಾಂಕ್ನ್ನು ಬ್ಯಾಂಕ್ ಆಫ್ ಬರೋಡದೊಡನೆ ಎಪ್ರೀಲ್ 1ರಂದು ವಿಲೀನಗೊಳ್ಳುತ್ತಿದ್ದು, ಈ ಜಿಲ್ಲೆಗೆ ಕೇಂದ್ರ ಸರಕಾರವು ನಮ್ಮ ಸಂಸದ ನಳಿನ್ ಕುಮಾರ್ ಕಟೀಲ್ ಮುಖಾಂತರ ಕರಾಳ ಕೊಡುಗೆಯನ್ನು ನೀಡಲಿದ್ದಾರೆ. ಅವರ ಈ ಕೊಡುಗೆಗೆ ಎಪ್ರೀಲ್ 18ರಂದು ನಮ್ಮ ಜಿಲ್ಲೆಯ ಬುದ್ದಿವಂತ ಮತದಾರರು ಯುವ ಮುಂದಾಳು ಮಿಥುನ್ ರೈ ಗೆ ಮತದಾನ ಮಾಡಿ ಸಂಸದರಾಗಿ ಅಯ್ಕೆ ಮಾಡಿ ಈ ಜಿಲ್ಲೆಗೆ ಬಂಪರ್ ಕೊಡುಗೆಯನ್ನು ನೀಡಲಿದ್ದಾರೆ.
ಮಾತ್ರವಲ್ಲ ಈ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಅಪದ್ಬಾಂದವರಾಗಿ 24 ಘಂಟೆಗಳ ಸೇವಾ ಮನೋಬಾವದ “ಯುವಪಡೆ”ಗಳನ್ನು ರಚಿಸುವ ಚಿಂತನೆಯನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈ ಗೊಳ್ಳಲಾಗುವುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ ಹಾಗು ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.