ರಾಜೀವ್ ಗಾಂಧಿಯವರ ಸುಧಾರಣಾ ಕ್ರಮಗಳು ಇಂದಿನ ರಾಜಕಾರಣಿಗಳಿಗೆ ಸ್ಪೂರ್ತಿ – ಮಂಜುನಾಥ ಭಂಡಾರಿ

Spread the love

ರಾಜೀವ್ ಗಾಂಧಿಯವರ ಸುಧಾರಣಾ ಕ್ರಮಗಳು ಇಂದಿನ ರಾಜಕಾರಣಿಗಳಿಗೆ ಸ್ಪೂರ್ತಿ – ಮಂಜುನಾಥ ಭಂಡಾರಿ

ಮಂಗಳೂರು: ರಾಜೀವ್ ಗಾಂಧಿ ಅವರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಅವರ ಚಿಂತನೆ, ಸುಧಾರಣಾ ಕ್ರಮಗಳು ಇಂದಿನ ರಾಜಕಾರಣಿಗಳಿಗೆ ಸ್ಫೂರ್ತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನಪರಿಷತ್ ಶಾಸಕ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್ ಇಂಡಿಯಾ ಆರಂಭವಾಗಿದ್ದೇ ರಾಜೀವ್ ಗಾಂಧಿಯವರ ತೀರ್ಮಾನಗಳಿಂದ ಎಂಬುದು ಅನೇಕರಿಗೆ ತಿಳಿದಿಲ್ಲ. ರಾಜೀವ್ ಗಾಂಧಿ ಅವರು ದೇಶದಲ್ಲಿ ಕಂಪ್ಯೂಟರ್‌-ಟೆಲಿಫೋನ್‌ ಕ್ರಾಂತಿ, ಮತದಾನದ ವಯೋಮಿತಿ 21ರಿಂದ 18ಕ್ಕೆ ಇಳಿಕೆ, ನವೋದಯ ಶಾಲೆಗಳ ನಿರ್ಮಾಣ, ಗಂಗಾ ನದಿಯ ಮಾಲಿನ್ಯ ನಿಯಂತ್ರಣ ಯೋಜನೆ, ಆರ್ಥಿಕ ಉದಾರೀಕರಣ, ಪಂಚಾಯತ್ ರಾಜ ವ್ಯವಸ್ಥೆ ಮುಂತಾದ ಸುಧಾರಣಾ ಕ್ರಮಗಳನ್ನು ಕೈಗೊಂಡು ಸದೃಢ ಭಾರತವನ್ನಾಗಿಸಿದರು ಎಂದು ತಿಳಿಸಿದರು.

ದೇವರಾಜ ಅರಸು ಅವರು ಸಮಾಜದ ಹಿಂದುಳಿದ ಹಾಗೂ ಬಡವರನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ಅವರು ಕೇಲವ ರಾಜಕಾರಣಿಯಾಗಿರಲಿಲ್ಲ. ಸಮಾಜ ಸುಧಾರಕರೂ ಆಗಿದ್ದರು. ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಸಾಧಿಸಿ ರಾಜ್ಯದ ರಾಜಕಾರಣಕ್ಕೆ ಹೊಸ ದಿಕ್ಕು ತೋರಿಸಿದರು ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ರಾಜೀವ್ ಗಾಂಧಿ ಅವರು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತ. ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮ ಪಂಚಾಯತ್ ಗಳಿಗೆ ಅಧಿಕಾರ ಲಭಿಸಿತು. ಇದರಿಂದ ಗ್ರಾಮೀಣ ಜನರಿಗೆ ಸರ್ಕಾರದ ಕಾರ್ಯಕ್ರಮಗಳು ನೇರವಾಗಿ ಮುಟ್ಟುವಂತಾಯಿತು. ಈ ಅಭಿವೃದ್ಧಿಗೆ ರಾಜೀವ್ ಗಾಂಧಿ ಅವರ ಕೊಡುಗೆ ಅಪಾರ. ಇಂದಿರಾ ಗಾಂಧಿ ಅವರ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಜಾರಿಗೊಳಿಸದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅವರು ರಾಜ್ಯದಲ್ಲಿ ಸಮಾನತೆಯ ಬುನಾದಿ ಮೇಲೆ ಸಮಾಜವನ್ನು ಕಟ್ಟುವ ಮೂಲಕ ಸರ್ವ ಜನರ ಕಲ್ಯಾಣವನ್ನು ಬಯಸಿದ್ದ ಮುತ್ಸದ್ದಿ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಪೂಜಾರಿ, ಮುಖಂಡರಾದ ಪದ್ಮನಾಭ ರೈ, ಕೆ.ಅಶ್ರಫ್, ಅಬ್ದುಲ್ ಜೆ.ಸಲೀಂ, ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್ ದಾಸ್, ಪದ್ಮನಾಭ ಅಮೀನ್, ಎಂ.ಜಿ.ಹೆಗ್ಡೆ, ಸುಭಾಶ್ ಶೆಟ್ಟಿ ಕೊಳ್ನಾಡು, ನವೀನ್ ಡಿಸೋಜ, ಅಬ್ದುಲ್ ರವೂಫ್, ಕೇಶವ ಮರೋಳಿ, ಅಶ್ರಫ್ ಬಜಾಲ್, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ, ಟಿ.ಕೆ.ಸುಧೀರ್, ಮಲಾರ್ ಮೋನು, ವಿಕಾಸ್ ಶೆಟ್ಟಿ, ಶಬೀರ್.ಎಸ್, ಎಸ್.ಅಪ್ಪಿ, ಸಬಿತಾ ಮಿಸ್ಕಿತ್, ಭಾಸ್ಕರ್ ರಾವ್, ಅಶೋಕ್ ಡಿ.ಕೆ, ದುರ್ಗ ಪ್ರಸಾದ್, ಪ್ರೇಮ್ ಬಳ್ಳಾಲ್ ಭಾಗ್, ಚಂದ್ರಹಾಸ ಪೂಜಾರಿ ಸುರತ್ಕಲ್, ರವಿರಾಜ್ ಪೂಜಾರಿ, ರಾಕೇಶ್ ದೇವಾಡಿಗ, ಜೀತೇಂದ್ರ ಸುವರ್ಣ, ಯು.ಪಿ.ಇಬ್ರಾಹೀಂ, ಆಲ್ವಿನ್ ಪ್ರಕಾಶ್, ಹೈದರ್ ಬೋಳಾರ್, ಲಕ್ಷ್ಮೀ ನಾಯರ್, ಚಂದ್ರಕಲಾ ಜೋಗಿ, ಮಂಜುಳಾ ನಾಯಕ್, ಗೀತಾ ಅತ್ತಾವರ, ಶಾಂತಲಾ ಗಟ್ಟಿ, ಸಾರಿಕ ಪೂಜಾರಿ, ನಾಸೀರ್ ಸಾಮಣಿಗೆ, ಜಿ.ಎ. ಅಬ್ದುಲ್ ಜಲೀಲ್, ಸುರೇಶ್ ಪುಜಾರಿ ಉಪಸ್ಥಿತರಿದ್ದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು, ಕೆ.ಕೆ.ಶಾಹುಲ್ ಹಮೀದ್ ವಂದಿಸಿದರು.


Spread the love